Jammu and Kashmir India Today Exit Poll Results: ಜಮ್ಮು & ಕಾಶ್ಮೀರದಲ್ಲಿ ಬಿಜೆಪಿಗೆ ಮುಖಭಂಗ
ನವದೆಹಲಿ, ಅಕ್ಟೋಬರ್ 05: ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಚುಣಾವಣೋತ್ತರ ಸಮೀಕ್ಷೆ ಶನಿವಾರ ಪ್ರಕಟವಾಗಿದೆ. 2014ರ ಬಳಿಕ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಯಾರಿಗೆ ಅಧಿಕಾರ ಎಂಬುದು ಚರ್ಚೆಯ ವಿಷಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಒಟ್ಟು ವಿಧಾನಸಭಾ ಕ್ಷೇತ್ರಗಳು 90. ಮೂರು ಹಂತದಲ್ಲಿ ಮತದಾನ ನಡೆದಿದ್ದು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.
ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟು ಶೇ 63.88ರಷ್ಟು ಮತದಾನವಾಗಿತ್ತು. ಶನಿವಾರ ರಾಷ್ಟ್ರೀಯ ವಾಹಿನಿಗಳು ವಿವಿಧ ಸಂಸ್ಥೆಗಳ ಜೊತೆಗೆ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಅಕ್ಟೋಬರ್ 8ರ ಮಂಗಳವಾರ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಸ್ಟ್ 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆದಿದೆ. 'ಇಂಡಿಯಾ' ಮೈತ್ರಿಕೂಟ, ಬಿಜೆಪಿ ಚುನಾವಣೆಯಲ್ಲಿ ಎದುರಾಳಿಗಳು.
ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಂಡಿವೆ. ಲೋಕಸಭೆ ಚುನಾವಣೆ 2024ಕ್ಕೆ ಎರಡೂ ಪಕ್ಷಗಳು 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದವು. ಈಗ ವಿಧಾನಸಭೆ ಚುನಾವಣೆಯಲ್ಲಿಯೂ ಸೀಟು ಹಂಚಿಕೆ ಮಾಡಿಕೊಂಡಿವೆ. ಆದ್ದರಿಂದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಎಕ್ಸಿಟ್ ಪೋಲ್ ಫಲಿತಾಂಶ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಕುರಿತು India Today C-Voter ಸಮೀಕ್ಷೆಗಳನ್ನು ನಡೆಸಿವೆ. ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಸಂಖ್ಯೆ ಬಿಡುಗಡೆಯಾಗಿದೆ. ಸಮೀಕ್ಷೆ ಅಂತಿಮ ಫಲಿತಾಂಶದಂತೆ 90 ಸೀಟುಗಳಲ್ಲಿ ಕಾಂಗ್ರೆಸ್+ಎನ್‌ಸಿ 40-48 ಸೀಟು, ಬಿಜೆಪಿ 27-32 ಸೀಟು, ಪಿಡಿಪಿ 6-12 ಸೀಟು ಮತ್ತು ಇತರರು 6-11 ಸೀಟುಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಶೇ 36, ಬಿಜೆಪಿ ಶೇ 41, ಪಿಡಿಎಫ್ ಶೇ 5 ಮತ್ತು ಇತರರು ಶೇ 18ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
90 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳ ಫಲಿತಾಂಶ ಮೊದಲು ಪ್ರಕಟವಾಗಿದ್ದು ಕಾಂಗ್ರೆಸ್ ಮೈತ್ರಿಕೂಟ 11-15, ಬಿಜೆಪಿ 27-31, ಪಿಡಿಪಿ 0-2 ಮತ್ತು ಇತರರು 0-1 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಉತ್ತಮ ಎಂದು ಶೇ 39ರಷ್ಟು ಜನರು, ರವೀಂದ್ರ ರೈನಾ ಉತ್ತಮ ಎಂದು ಶೇ 12ರಷ್ಟು ಜನರು, ಮೆಹಬೂಬಾ ಮುಫ್ತಿ ಉತ್ತಮ ಎಂದು ಶೇ 9ರಷ್ಟು ಜನರು ಮತ್ತು ವಿಕಾರ್ ರಸೂಲ್ ವಾನಿ ಪರವಾಗಿ ಶೇ 6ರಷ್ಟು ಸಮೀಕ್ಷೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಗಳ ಪ್ರಕಾರ ಜಮ್ಮು ವಿಭಾಗದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ 11-15, ಬಿಜೆಪಿ 27-31, ಪಿಡಿಪಿ 0-2, ಇತರರು 0-1 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಅಲ್ಲದೇ ಕಾಂಗ್ರೆಸ್-ಎನ್‌ಸಿ ಶೇ 37, ಬಿಜೆಪಿ ಶೇ 41, ಪಿಡಿಪಿ ಶೇ 4 ಮತ್ತು ಇತರರು ಶೇ 18ರಷ್ಟು ಮತಗಳನ್ನುಗಳಿಸಲಿದ್ದಾರೆ.












Click it and Unblock the Notifications