ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆದ 17 ನಾಯಕರು
ನವದೆಹಲಿ, ಜ. 06: ಎರಡು ತಿಂಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಜಮ್ಮು ಕಾಶ್ಮೀರ್ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಮತ್ತು ಮಾಜಿ ಪಿಸಿಸಿ ಮುಖ್ಯಸ್ಥ ಪೀರ್ಜಾದಾ ಮೊಹಮ್ಮದ್ ಸಯೀದ್ ಸೇರಿದಂತೆ ಡೆಮಾಕ್ರಟಿಕ್ ಆಜಾದ್ ಪಕ್ಷದ (ಡಿಎಪಿ) ಹದಿನೇಳು ಮಾಜಿ ನಾಯಕರು ಶುಕ್ರವಾರ ಕಾಂಗ್ರೆಸ್ ತೆಕ್ಕೆಗೆ ಮರಳಿದ್ದಾರೆ.
ಈ ವೇಳೆ ಹದಿನೇಳು ನಾಯಕರನ್ನು ಸ್ವಾಗತಿಸಿದ ಕಾಂಗ್ರೆಸ್ ಇವರೆಲ್ಲ ಎರಡು ತಿಂಗಳ ರಜೆಯಲ್ಲಿದ್ದರು ಎಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಎಲ್ಲಾ ನಾಯಕರನ್ನು ಸ್ವಾಗತಿಸಿ,' ಎರಡು ವಾರಗಳ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲಿದ್ದು, ಅದಕ್ಕೂ ಮುಂಚೆ ಹಳೆಯ ನಾಯಕರು ತಮ್ಮ ಮನೆಗೆ ಮರಳುತ್ತಿರುವುದು ಪಕ್ಷಕ್ಕೆ ಸಂತೋಷದ ದಿನ" ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ದೇಶದಲ್ಲಿ ದೊಡ್ಡ ಆಂದೋಲನವಾಗಿ ಮಾರ್ಪಟ್ಟಿದೆ ಮತ್ತು ಅದಕ್ಕಾಗಿಯೇ ಈ ಎಲ್ಲಾ ನಾಯಕರು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬರಲು ನಿರ್ಧರಿಸಿದ್ದಾರೆ ಎಂದು ಕೆ ಸಿ ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದು ಇನ್ನು ಆರಂಭವಷ್ಟೇ, ಭಾರತ್ ಜೋಡೋ ಯಾತ್ರೆಯು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸುವ ಸಂದರ್ಭದಲ್ಲಿ, ಅಖಂಡ ಭಾರತವನ್ನು ಬಯಸುವ ಮತ್ತು ಕಾಂಗ್ರೆಸ್ ಸಿದ್ಧಾಂತವನ್ನು ಹೊಂದಿರುವ ಎಲ್ಲಾ ಜನರು ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುತ್ತಿದೆ. ಈ ನಾಯಕರು ಎರಡು ತಿಂಗಳ ಕಾಲ ರಜೆಯ ಮೇಲೆ ಹೋಗಿದ್ದರು ಅಷ್ಟೇ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮರಳಲು ಡಿಎಪಿ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದಿದ್ದಾರೆ.
ಯಾತ್ರೆಗೆ ಡಿಎಪಿ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರನ್ನು ಆಹ್ವಾನಿಸಲಾಗಿದೆಯೇ ಎಂಬ ಬಗ್ಗೆ ಮಾತನಾಡಿದ ಅವರು, "ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇರುವವರು ಭಾರತ್ ಜೋಡೋ ಯಾತ್ರೆಗೆ ಸೇರಲು ಸ್ವಾಗತ. ಎಲ್ಲಾ ಸಮಾನ ಮನಸ್ಕ ಪಕ್ಷಗಳಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದೇವೆ. ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಸಯೀದ್ ಅವರು ಯಾತ್ರೆಯಲ್ಲಿ ಪಾಲ್ಗೊಂಡು ಶ್ರೀನಗರದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ನಡೆಸಲಿದ್ದಾರೆ" ಎಂದು ಹೇಳಿದ್ದಾರೆ.
ಪಕ್ಷದ ನಾಯಕ ಜೈರಾಮ್ ರಮೇಶ್ ಮಾತನಾಡಿ, "ಇಂದು ಒಟ್ಟು 19 ನಾಯಕರು ಪಕ್ಷಕ್ಕೆ ಸೇರಬೇಕಿತ್ತು, ಆದರೆ 17 ಮಂದಿ ಮಾತ್ರ ದೆಹಲಿಗೆ ಬಂದು ಸೇರ್ಪಡೆಯಾಗಲು ಸಾಧ್ಯವಾಯಿತು. ಇದು ಮೊದಲ ಹಂತವಾಗಿದ್ದು, ಇತರರು ಕೂಡ ಶೀಘ್ರದಲ್ಲೇ ಸೇರಲಿದ್ದಾರೆ" ಎಂದಿದ್ದಾರೆ.
ಎರಡು ತಿಂಗಳ ಕಾಲ ಕಾಂಗ್ರೆಸ್ ತೊರೆಯಲು ಕಾರಣವೇನು ಎಂದು ಕೇಳಿದಾಗ, "ನಾವು ಭಾವನೆಗಳು ಮತ್ತು ಸ್ನೇಹದಿಂದ ದೂರ ಹೋಗಿದ್ದೇವೆ. ತರಾತುರಿಯಲ್ಲಿ ಪಕ್ಷವನ್ನು ತೊರೆದಿದ್ದೇವು. ನಾವು ನಮ್ಮ ಜೀವನದ 50 ವರ್ಷಗಳನ್ನು ಕಾಂಗ್ರೆಸ್‌ನಲ್ಲಿ ಕಳೆದಿದ್ದೇವೆ. ನಮಗೆ ನಮ್ಮ ತಪ್ಪನ್ನು ಅರಿವಾಗಿದೆ. ಹೊಸ ಪಕ್ಷ ಡಿಎಪಿಯಲ್ಲಿ ನಾವು ಇರಲು ಆಗಲಿಲ್ಲ" ಎಂದು ತಾರಾ ಚಂದ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications