Jammu And Kashmir Elections: ಚುನಾವಣಾ ಕಣದಲ್ಲಿ ಕೋಟ್ಯಾಧೀಶರು, ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳೇ ಹೆಚ್ಚು!
ಹೊಸದಿಲ್ಲಿ , ಸೆಪ್ಟೆಂಬರ್ 24: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಸೆಪ್ಟೆಂಬರ್ 25 ರಂದು ಎರಡನೇ ಹಂತದ ಮತದಾನಕ್ಕೆ ಭರ್ಜರಿ ಸಿದ್ದತೆ ನಡೆದಿದೆ. ಚುನಾವಣಾ ಕಣದಲ್ಲಿರುವ ಐದನೇ ಒಂದಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ಇಂತಹ ಅಭ್ಯರ್ಥಿಗಳ ಶೇಕಡಾವಾರು ಪ್ರಮಾಣದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಬಹುತೇಕ ಅಭ್ಯರ್ಥಿಗಳು ಕೋಟ್ಯಾಧೀಶರು ಹಾಗೂ ಕ್ರಿಮುನಲ್ ಪ್ರಕರಣಗಳಿರುವ ಅಭ್ಯರ್ಥಿಗಳ ಪ್ರಾಬಲ್ಯವೇ ಹೆಚ್ಚಾಗಿದೆ. 238 ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ಗಳನ್ನು ವಿಶ್ಲೇಷಿಸಿರುವ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್),ಈ ಪೈಕಿ 49 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದು,ಇವರಲ್ಲಿ 37 ಅಭ್ಯರ್ಥಿಗಳು (ಶೇ.16) ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊತ್ತಿದ್ದಾರೆ ಎಂದು ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ.

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಜೆಕೆಪಿಡಿಪಿಯ 26ರಲ್ಲಿ ನಾಲ್ವರು(ಶೇ.15),ಬಿಜೆಪಿಯ 17ರಲ್ಲಿ ನಾಲ್ವರು(ಶೇ.24),ಕಾಂಗ್ರೆಸ್‌ನ 6ರಲ್ಲಿ ಇಬ್ಬರು(ಶೇ.33) ಮತ್ತು ಜೆಕೆಎನ್‌ಸಿಯ 20ರಲ್ಲಿ ಓರ್ವ ಅಭ್ಯರ್ಥಿ(ಶೇ.5) ಸೇರಿದ್ದಾರೆ. ಅಲ್ಲದೇ ಗಂಭೀರ ಕ್ರಿಮಿನಲ್ ಆರೋಪಗಳ ವರ್ಗದಲ್ಲಿ ಮೂವರು ಕೊಲೆ ಯತ್ನ ಮತ್ತು ಏಳು ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳನ್ನು ಹೊತ್ತಿದ್ದರೆ ಓರ್ವ ಅತ್ಯಾಚಾರ ಆರೋಪಿಯಾಗಿದ್ದಾನೆ.
ಎರಡನೇ ಹಂತದ ಮತದಾನ ನಡೆಯುವ 26 ಕ್ಷೇತ್ರಗಳ ಪೈಕಿ ಎಂಟು ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ. ಕಣದಲ್ಲಿಯ ಮೂವರು ಅಥವಾ ಹೆಚ್ಚಿನ ಸ್ಪರ್ಧಿಗಳು ತಮ್ಮವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದರ ಅದನ್ನು ರೆಡ್ ಅಲರ್ಟ್ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಇನ್ನೂ ಚುನಾವಣಾ ಕಣದಲ್ಲಿರುವ ಅರ್ಧಕ್ಕೂ ಹೆಚ್ಚಿನ ಅಭ್ಯರ್ಥಿಗಳು ಕೋಟ್ಯಾಧೀಶರಾಗಿದ್ದಾರೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು (ಶೇ.100) ಕೋಟ್ಯಾಧೀಶರಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ಜೆಕೆಎನ್‌ಸಿ( ಶೇ.90),ಬಿಜೆಪಿ (ಶೇ.76) ಇದ್ದರೆ ಜೆಕೆಪಿಡಿಪಿ ಕನಿಷ್ಠ ಸಂಖ್ಯೆಯ ಕೋಟ್ಯಾಧೀಶರನ್ನು ಕಣಕ್ಕಿಳಿಸಿದೆ.
ಜಮ್ಮುಕಾಶ್ಮೀರ ಅಪ್ಪಿ ಪಾರ್ಟಿಯ ಸೈಯದ್ ಮುಹಮ್ಮದ್ ಅಲ್ತಾಫ್ ಬುಖಾರಿ 162 ಕೋಟಿ ರೂ.ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರೆ ಪೂಂಛನಲ್ಲಿ ಕಣದಲ್ಲಿರುವ ಪಕ್ಷೇತರ ಮುಹಮ್ಮದ್ ಅಕ್ರಂ ಕೇವಲ 500 ರೂ.ಮೌಲ್ಯದ ಕನಿಷ್ಠ ಆಸ್ತಿಯನ್ನು ಹೊಂದಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ಸರಸರಿ ಆಸ್ತಿ ಮೌಲ್ಯ 5.80 ಕೋಟಿ ರೂ.ಗಳಾಗಿವೆ. 41ರಿಂದ 60 ವರ್ಷ ವಯೋಮಾನದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ 25ರಿಂದ 40 ವರ್ಷ ವಯೊಮಾನದವರು ನಂತರದ ಸ್ಥಾನದಲ್ಲಿದ್ದಾರೆ.












Click it and Unblock the Notifications