Chandrayaan-3: ಚಂದ್ರನ ಊರಿಗೆ ‘ಚಂದ್ರಯಾನ-3’ ಪಯಣ ಆರಂಭ!
ಬೆಂಗಳೂರು: ಎಲ್ಲಾ ಅಂದುಕೊಂಡಂತೆ ನಡೆದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3ರ 'ಬಾಹ್ಯಾಕಾಶ ನೌಕೆ'ಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಗೆ ಸೇರಿಸುವಲ್ಲಿ ಸಕ್ಸಸ್ ಆಗಿದೆ. ಇಷ್ಟುದಿನ ಭೂಮಿಯ ಕಕ್ಷೆಯಲ್ಲಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆ, ಇದೀಗ ಭೂಮಿಯ ಸುತ್ತಲಿನ ಕಕ್ಷೆಯನ್ನು ಪೂರ್ಣಗೊಳಿಸಿ ಚಂದ್ರನ ಕಡೆಗೆ ಸಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಶತಕೋಟಿ ಭಾರತೀಯರ ಕನಸು ನನಸಾಗಲಿದೆ.
ಮಧ್ಯರಾತ್ರಿ 'ಚಂದ್ರಯಾನ-3' ಬಾಹ್ಯಾಕಾಶ ನೌಕೆಯ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಸಕ್ಸಸ್ ಆಗಿದೆ. ಇದಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ನಮ್ಮ ಇಸ್ರೋ ಸಕಲ ಸಿದ್ಧತೆ ನಡೆಸಿತ್ತು. ಸುಮಾರು 15 ದಿನ ಕಾಲ ಭೂ ಕಕ್ಷೆಯ ಒಳಗೆ ಬಾಹ್ಯಾಕಾಶ ನಿರ್ವಾತದಲ್ಲಿ ಹಾರುತ್ತಿತ್ತು ಚಂದ್ರಯಾನ-3. ಸುಮಾರು 28ರಿಂದ 31 ನಿಮಿಷ ನಡೆದ ಪ್ರಕ್ರಿಯೆಯಲ್ಲಿ ನೌಕೆ ಕಕ್ಷೆ ಬದಲಾಯಿಸುವ ಕಾರ್ಯ ಯಶಸ್ವಿಯಾಗಿ ನೆರವೇರಿದೆ. ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ಮಾಡ್ಯೂಲ್‌ನ ಎಂಜಿನ್ ವೇಗ ಹೆಚ್ಚಿಸುವ ಮೂಲಕ ಈ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.

ಈಗ ಎಲ್ಲಿದೆ 'ಚಂದ್ರಯಾನ-3' ನೌಕೆ?
ಅಷ್ಟಕ್ಕೂ ಇಸ್ರೋ ನೀಡಿರುವ ಮಾಹಿತಿ ಪ್ರಕಾರ, ಇದೀಗ ಲೂನಾರ್ ಟ್ರಾನ್ಸ್‌ಫರ್ ಟ್ರಾಜೆಕ್ಟರಿ ಪಥದಲ್ಲಿ 'ಚಂದ್ರಯಾನ-3' ನೌಕೆ ಸಾಗುತ್ತಿದೆ. ಸೋಮವಾರ ಮಧ್ಯರಾತ್ರಿ ಭೂ ಕಕ್ಷೆಯಿಂದ ಬೇರ್ಪಟ್ಟ ನೌಕೆ ಚಂದ್ರನ ಕಡೆ ಸಾಗಿದೆ. ಹಾಗೇ ಚಂದ್ರಯಾನ-3 ನೌಕೆ ಚಂದ್ರನ ಸಮೀಪಕ್ಕೆ ಆಗಮಿಸುತ್ತಿದ್ದಂತೆ 'ಲೂನಾರ್-ಆರ್ಬಿಟ್ ಇನ್‌ರ್ಸಶನ್' ಅಂದರೆ ಎಲ್‌ಓಐ ಕಾರ್ಯ ಶುರು ಆಗುತ್ತೆ. ಆಗಸ್ಟ್ 5ಕ್ಕೆ ಎಲ್‌ಓಐ ಮಾಡಲು ಯೋಜಿಸಿದ್ದೇವೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಆಗಸ್ಟ್ 17ಕ್ಕೆ ಪ್ಯೊಪಲ್ಷನ್ ಮಾಡ್ಯೂಲ್ & ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಸುರಕ್ಷಿತವಾಗಿ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಈ ಕ್ಷಣಕ್ಕೆ ಇಡೀ ಜಗತ್ತೇ ಕಾಯುತ್ತಿದೆ.
Chandrayaan-3 Mission:
— ISRO (@isro) July 31, 2023
Chandrayaan-3 completes its orbits around the Earth and heads towards the Moon.
A successful perigee-firing performed at ISTRAC, ISRO has injected the spacecraft into the translunar orbit.
Next stop: the Moon 🌖
As it arrives at the moon, the… pic.twitter.com/myofWitqdi
'ಟ್ರಾನ್ಸ್ ಲೂನಾರ್ ಇಂಜೆಕ್ಷನ್' ಅಂದ್ರೆ ಏನು?
ಅಂದಹಾಗೆ TLI ಅಥವಾ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅಂದರೆ ಕಕ್ಷೆ ಬದಲಿಸುವ ಪ್ರಕ್ರಿಯೆ ಎಂದು ಅರ್ಥ. ಇದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಹಾದಿಗೆ ಕಳುಹಿಸಲು ಬೆನ್ನೆಲುಬು ಎನ್ನಬಹುದು. ಪ್ರಕ್ರಿಯೆಯನ್ನ ರಾಸಾಯನಿಕ ರಾಕೆಟ್ ಇಂಜಿನ್‌ನಿಂದ ನಿರ್ವಹಿಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆ ವೇಗವನ್ನ ಹೆಚ್ಚಿಸಲಾಗುತ್ತೆ. ಹಾಗೇ ಹೆಚ್ಚಿದ ವೇಗ ಅದರ ಕಕ್ಷೆಯನ್ನ ಕಡಿಮೆ ವೃತ್ತಾಕಾರದ ಭೂ ಕಕ್ಷೆಯಿಂದ, ಹೆಚ್ಚು ಹತ್ತಿರದ ಕಕ್ಷೆಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಇದನ್ನ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಚಂದ್ರನ ಹತ್ತಿರ ತಲುಪುವ ಪ್ರಮುಖ ಪ್ರಕ್ರಿಯೆ ಇದಾಗಿರುತ್ತದೆ.

ಕಡಿಮೆ ವೆಚ್ಚದಲ್ಲಿ ಐತಿಹಾಸಿಕ ಸಾಧನೆ!
ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತವು 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ.
ಒಟ್ಟಾರೆ ಹೇಳುವುದಾದ್ರೆ ಭಾರತ ಮಹತ್ವದ ಯೋಜನೆ ಇದೀಗ ಅಂತಿಮ ಘಟ್ಟ ತಲುಪಿದೆ. ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಈ ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತಲೂ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರ ಚಂದ್ರ. ಇದೇ ಕಾರಣಕ್ಕೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿತ್ತು ಭಾರತ.












Click it and Unblock the Notifications