ISRO Baahubali: ಭಾರತೀಯ ನೌಕಾಪಡೆಗೆ ಮತ್ತಷ್ಟು ಶಕ್ತಿ ತುಂಬಿದ ಇಸ್ರೋ, ಶತ್ರುಗಳ ನಿದ್ದೆ ಕೆಡಿಸಿದ ‘ಬಾಹುಬಲಿ’
ಶ್ರೀಹರಿಕೋಟಾ: ಇಸ್ರೋ ಭಾರತೀಯರ ಪಾಲಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಇಸ್ರೋ ಈವರೆಗೆ ಮಾಡಿದ ಸಾಧನೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಿಷ್ಠವಾಗಿ ಗುರುತಿಸಿಕೊಂಡು ಮಿನುಗುವಂತೆ ಮಾಡಿದೆ. ಮಂಗಳ ಗ್ರಹವೂ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಂಡು ತನ್ನ ಶಕ್ತಿ ಏನು ಎಂಬುದನ್ನು ಜಗತ್ತಿಗೇ ತೋರಿಸಿರುವ ಇಸ್ರೋ, ಚಂದ್ರನ ಮೇಲೆ ಕೂಡ ರೋವರ್ ಲ್ಯಾಂಡ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಭಾರತೀಯ ನೌಕಾಪಡೆಗೆ ತನ್ನದೇ ಆದ ದೊಡ್ಡ ಉಡುಗೊರೆ ನೀಡಿದೆ ಇಸ್ರೋ ಸಂಸ್ಥೆ. ಈ ಮೂಲಕ ಭಾರತದ ಶತ್ರು ದೇಶಗಳ ನಿದ್ದೆಯೇ ದಿಢೀರ್ ಹಾರಿ ಹೋಗಿದ್ದು, ನಮ್ಮ ದೇಶದ ಸೇನೆಗೆ ಮತ್ತಷ್ಟು ಬಲ ಬಂದಿದೆ.
ಹೌದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇಸ್ರೋ ಸಂಸ್ಥೆ ನಕ್ಷತ್ರದಂತೆ ಮಿನುಗುತ್ತಿದೆ. ಹೀಗೆಲ್ಲಾ ಇಸ್ರೋ ಮಾಡುತ್ತಿರುವ ಸಾಧನೆಗೆ ಜಗತ್ತೇ ಫಿದಾ ಆಗಿದ್ದು, ಮುನಷ್ಯರ ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆಗಳನ್ನು ನಮ್ಮ ಇಸ್ರೋ ಕೈಗೊಳ್ಳುತ್ತಿದೆ. ಇದರ ಜೊತೆಗೆ ಭಾರತದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೂಡ ರೂಪಿಸಲಾಗುತ್ತಿದೆ. ಹೀಗಿದ್ದಾಗ ಭಾರತೀಯ ನೌಕಾಪಡೆಗಾಗಿ, ಉಪಗ್ರಹ ಒಂದನ್ನ ಇದೀಗ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾನುವಾರ ಸಂಜೆ 5 ಗಂಟೆ 26 ನಿಮಿಷಕ್ಕೆ 'ಬಾಹುಬಲಿ' ಆಗಸಕ್ಕೆ ಚಿಮ್ಮಿತ್ತು.

'ಬಾಹುಬಲಿ' ಹೆಸರು ಬಂದಿದ್ದು ಏಕೆ?
ಸುಮಾರು 4,410 ಕೆಜಿ ತೂಕ ಇರುವ CMS-03 ಸಂವಹನ ಉಪಗ್ರಹವನ್ನ 43.5 ಮೀಟರ್ ಎತ್ತರದ LVM3-M5 ರಾಕೆಟ್ ಬಳಸಿ ಉಡಾವಣೆ ಮಾಡಲಾಗಿದೆ. ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ ಕಡೆಗೆ ನುಗ್ಗಿದ ಉಪಗ್ರಹ ಇದೀಗ ಯಶಸ್ವಿಯಾಗಿ ತನ್ನ ಸ್ಥಾನ ತಲುಪಿದೆ. ಅಂದಹಾಗೆ ತನ್ನ ಭಾರದ ಕಾರಣಕ್ಕೆ ಈ ಸಂವಹನ ಉಪಗ್ರಹವನ್ನು 'ಬಾಹುಬಲಿ' ಎಂದು ಕರೆಯಲಾಗುತ್ತದೆ, ಭಾರತೀಯ ನೌಕಾಪಡೆಗೆ ಇದರ ಅವಶ್ಯಕತೆ ತುಂಬಾ ಇದೆ. ಅಂದಹಾಗೆ ಭಾರತೀಯ ನೌಕಾಪಡೆಗೆ ಅಂತಾನೇ ಈವರೆಗೂ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಸಂವಹನ ಉಪಗ್ರಹವೂ ಇದಾಗಿದೆ ಎಂಬುದು ಈಗಿನ ಮತ್ತೊಂದು ವಿಶೇಷ.
ಭಾರತದ ನೌಕಾಪಡೆಗೆ ಸಿಕ್ಕಿದೆ ಆನೆಬಲ!
ಸಂಪೂರ್ಣವಾಗಿ ಈ ಉಪಗ್ರಹ ಕಾರ್ಯಾಚರಣೆ ಶುರು ಮಾಡಿದ ನಂತರ ನೌಕಾಪಡೆಗೆ ಸಾಕಷ್ಟು ಅನುಕೂಲ ಆಗಲಿದೆ. ಪ್ರಮುಖವಾಗಿ GSAT-7R ಹಿಂದೂ ಮಹಾಸಾಗರದ ಮೂಲೆ ಮೂಲೆಯಲ್ಲಿ ಕೂಡ ಹದ್ದಿನ ಕಣ್ಣಿಡಲು ಇದರಿಂದ ಸಾಧ್ಯವಾಗಲಿದೆ. ಅತ್ಯಾಧುನಿಕ ಪೇಲೋಡ್ ಹೆಚ್ಚಿನ ವೇಗದ ಧ್ವನಿ, ಡೇಟಾ & ವಿಡಿಯೋ ಸಂವಹನಕ್ಕೆ ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ ಇದೆ. ಇಸ್ರೋದ ವಿಜ್ಞಾನಿಗಳು ಭಾರತೀಯ ನೌಕಾಪಡೆಗೆ ಈ ಮೂಲಕ ದೊಡ್ಡ ಉಡುಗೊರೆಯನ್ನೇ ನೀಡಿದ್ದಾರೆ. ಹಾಗೇ ದೇಶದ ರಕ್ಷಣೆಗೆ ಇದೊಂದು ಪ್ರಮುಖ ಉಪಗ್ರಹವಾಗಲಿದ್ದು, ಭಾರತದ ಶತ್ರು ದೇಶಗಳಿಗೆ ನಡುಕ ಶುರುವಾಗಿದೆ.












Click it and Unblock the Notifications