ಮುಂದಿನ ನಿಲ್ದಾಣ 'ಚಂದ್ರಲೋಕ': ರೋಚಕ ಗಳಿಗೆಗೆ ಇನ್ನು ಮೂರೇ ದಿನ
ಬೆಂಗಳೂರು, ಸೆಪ್ಟೆಂಬರ್ 4: ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ 'ಚಂದ್ರಯಾನ-2' ಯೋಜನೆಯ ಐತಿಹಾಸಿಕ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಮೂರೇ ದಿನಗಳಲ್ಲಿ ಚಂದ್ರಯಾನ ನೌಕೆ ಚಂದ್ರನ ಮೇಲೆ ಇಳಿಯಲಿದೆ.
ಚಂದ್ರನನ್ನು ತಲುಪುವ ಎಲ್ಲ ಕಕ್ಷಾ ಸೇರ್ಪಡೆಯ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಇನ್ನಷ್ಟು ಸಮೀಪಿಸಿದೆ. ತನ್ನ ಮುಂದಿನ ನಿಲ್ದಾಣದಲ್ಲಿ ಇಳಿಯಲು ತಯಾರಿ ನಡೆಸಿದೆ.
'ಚಂದ್ರಯಾನ-2'ರ ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನತ್ತ ಮತ್ತಷ್ಟು ಹತ್ತಿರ ರವಾನಿಸುವ ಕಾರ್ಯಾಚರಣೆಯನ್ನು ಬುಧವಾರ ಮುಂಜಾನೆ 3.42ಕ್ಕೆ ಒಂಬತ್ತು ಸೆಕೆಂಡ್‌ಗಳ ಕಾಲ ನಡೆಸಲಾಯಿತು. ಸೆ. 7ರ ಮಧ್ಯರಾತ್ರಿ 1.40 ರಿಂದ 1.55ರ ಅವಧಿಯಲ್ಲಿ ನೌಕೆಯು ಚಂದ್ರನ ಮೇಲೆ ಇಳಿಯಲಿದೆ. ಈ ಮೂಲಕ ಮೊದಲ ಪ್ರಯತ್ನದಲ್ಲಿಯೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಜಗತ್ತಿನ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ನಾಲ್ಕು ಗಂಟೆಯಲ್ಲಿ ರೋವರ್ ಬೇರ್ಪಡೆ
ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನ ಸಮೀಪ ಇಳಿಸುವ ಮೊದಲ ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆ 8.50ಕ್ಕೆ ನಾಲ್ಕು ಸೆಕೆಂಡುಗಳಲ್ಲಿ ನಡೆದಿತ್ತು. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಮೂರು ನಾಲ್ಕು ಗಂಟೆಗಳಲ್ಲಿ ನೌಕೆಯಿಂದ ಪ್ರಜ್ಞಾನ್ ರೋವರ್ ಬೇರ್ಪಡಲಿದೆ. ನಂತರ 14 ದಿನಗಳವರೆಗೆ ಅದು ಚಂದ್ರನ ಮಣ್ಣಿನ ಕುರಿತು ಅಧ್ಯಯನ ನಡೆಸಲಿದೆ.

ಕಠಿಣ, ರೋಚಕ ಕಾರ್ಯಾಚರಣೆ
ಚಂದ್ರನವರೆಗೆ ಸಾಗಿರುವ ನೌಕೆಯ ಪಯಣ ಸುಗಮವಾಗಿತ್ತು. ಆದರೆ, ಅದನ್ನು ಚಂದ್ರನ ಮೇಲೆ ಇಳಿಸುವುದು ಸುಲಭದ ಕಾರ್ಯವಾಗುವುದಿಲ್ಲ. ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಇಸ್ರೋ ನಡೆಸಲಿದ್ದು, ಕೊನೆಯ 15 ನಿಮಿಷ ರೋಚಕವಾಗಿರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ. ಬಾಹ್ಯಾಕಾಶ ಸಂಸ್ಥೆಯ ಇತಿಹಾಸದಲ್ಲಿಯೇ ಇದು ಕಠಿಣ ಕಾರ್ಯಾಚರಣೆಯಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಹೇಳಿದ್ದಾರೆ.

ನೌಕೆಯ ನಿಲ್ದಾಣ ನಿಗದಿಯಾಗಿಲ್ಲ
ಚಂದ್ರನ ಮೇಲೆ ಯಾವ ಸ್ಥಳದಲ್ಲಿ ನೌಕೆ ಇಳಿಯುತ್ತದೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಇದಕ್ಕೆ ಸೂಕ್ತ ನಿಲ್ದಾಣವನ್ನು ಆರ್ಬಿಟರ್‌ನಲ್ಲಿರುವ ಕ್ಯಾಮೆರಾ ಮ್ಯಾಪ್ ಹುಡುಕುತ್ತದೆ. ಸೂಕ್ತವಾದ ಮೇಲ್ಮೈ ಹುಡುಕಿದ ಬಳಿಕ ಲ್ಯಾಂಡರ್ ಸ್ವತಂತ್ರವಾಗಿಯೇ ಇಳಿಯುವ ನಿರ್ಧಾರ ತೆಗೆದುಕೊಳ್ಳುತ್ತದೆ.

ಚಂದ್ರನ ಸಮೀಪ ಸುತ್ತು
ವಿಕ್ರಂ ಲ್ಯಾಂಡರ್ ಪ್ರಸ್ತುತ 35*101 ಕಿ.ಮೀ ಕಕ್ಷೆಯಲ್ಲಿದೆ. ಚಂದ್ರಯಾನ ನೌಕೆಯು ಚಂದ್ರನ ಕಕ್ಷೆಯ ಸಮೀಪದಲ್ಲಿ ಸುತ್ತುತ್ತಿದ್ದು, 96*125 ಕಿ.ಮೀ. ಕಕ್ಷೆಯಲ್ಲಿ ಆರ್ಬಿಟರ್ ಮತ್ತು ಲ್ಯಾಂಡರ್ ಎರಡೂ ಸರಾಗವಾಗಿ ಕಾರ್ಯಾಚರಣೆ ನಡೆಸಿವೆ ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications