ಗೋಹತ್ಯೆ ಹೇಳಿಕೆ: ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್
ನವದೆಹಲಿ, ಸೆಪ್ಟೆಂಬರ್ 29: ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಸಂಸ್ಥೆಯು ಕಟುಕರಿಗೆ ಗೋವುಗಳನ್ನು ಮಾರಾಟ ಮಾಡುತ್ತದೆ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಹೇಳಿಕೆ ನೀಡಿದ್ದಾರೆ. ಇದು ಇಸ್ಕಾನ್ ಸಂಸ್ಥೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಮನೇಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ರಾಧರಮನ್ ದಾಸ್, 'ಇಸ್ಕಾನ್ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ನಾವು ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದ್ದೇವೆ' ಎಂದು ತಿಳಿಸಿದ್ದಾರೆ.

'ಮನೇಕಾ ಗಾಂಧಿ ಅವರ ಹೇಳಿಕೆಯು ಇಸ್ಕಾನ್‌ನ ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ತೀವ್ರ ನೋವನ್ನುಂಟು ಮಾಡಿದೆ. ಜಗತ್ತಿನಾದ್ಯಂತ ಇರುವ ಇಸ್ಕಾನ್ ಸಮುದಾಯವು ಈ ಮಾನಹಾನಿಕರ, ನಿಂದೆಯ ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಖಂಡಿಸುತ್ತದೆ. ಇಸ್ಕಾನ್ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದೆ. ನ್ಯಾಯ ಸಿಗುವವರೆಗೂ ನಾವು ಹೋರಾಡುತ್ತಲೇ ಇರುತ್ತೇವೆ' ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕಿ ಮೇನಕಾ ಗಾಂಧಿ ಹೇಳಿದ್ದೇನು?
ಬಿಜೆಪಿ ನಾಯಕಿ ಮನೇಕಾ ಗಾಂಧಿ ಅವರು ಇಸ್ಕಾನ್ ಅನ್ನು ದೇಶದ ಅತಿದೊಡ್ಡ ವಂಚಕ ಸಂಸ್ಥೆ ಎಂದು ಕರೆದಿದ್ದಾರೆ.
ಇಸ್ಕಾನ್ ದೇಶದಾದ್ಯಂತ ಗೋಶಾಲೆಗಳನ್ನು ನಡೆಸುತ್ತದೆ. ಅಲ್ಲಿನ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.

ಇಸ್ಕಾನ್ ಗೋಶಾಲೆಗಳನ್ನು ಸ್ಥಾಪಿಸುತ್ತದೆ. ಇದಕ್ಕೆ ಸರ್ಕಾರದಿಂದ ಭೂಮಿ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತದೆ. ಆ ನಂತರ, ಗೋಶಾಲೆಯಲ್ಲಿರುವ ಹಸುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ. ಅವರಿಗಿಂತ ಹೆಚ್ಚು ಯಾರೂ ವಂಚನೆಯಲ್ಲಿ ತೊಡಗಿಸಿಕೊಂಡವರು ಯಾರೂ ಇಲ್ಲ ಎಂದು ಮನೇಕಾ ಹೇಳಿಕೆ ನೀಡಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯೂ ಆಗಿರುವ ಮೇನಕಾ ಗಾಂಧಿ, 'ಹರೇ ರಾಮ ಹರೇ ಕೃಷ್ಣ' ಗೀತೆಗಳ ಮೂಲಕ ಸಾರ್ವಜನಿಕ ಭಕ್ತಿಯ ಪ್ರದರ್ಶನವನ್ನು ಇಸ್ಕಾನ್ ಮಾಡುತ್ತದೆ. ಅವರೂ ಸಹ ಹಾಲಿನ ಉದ್ಯಮದ ಮೇಲೆ ಅವಲಂಬಿತರಾಗಿದ್ದರೂ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶದ ಅನಂತಪುರ ಇಸ್ಕಾನ್ ಗೋಶಾಲೆಗೆ ಭೇಟಿ ನೀಡಿದ್ದೆ. ಒಂದು ಹಸು ಸಹ ಉತ್ತಮ ಸ್ಥಿತಿಯಲ್ಲಿ ಕಂಡುಬಂದಿಲ್ಲ ಎಂದು ಬಿಜೆಪಿ ನಾಯಕಿ ಆರೋಪಿಸಿದ್ದಾರೆ. ಅಲ್ಲಿನ ದನದ ಕೊಟ್ಟಿಗೆಯಲ್ಲಿ ಯಾವುದೇ ಕರುಗಳು ಕಂಡುಬಂದಿಲ್ಲ. ಅವುಗಳೆಲ್ಲವೂ ಮಾರಾಟವಾಗಿದ್ದವು ಎಂದು ಮನೇಕಾ ತಿಳಿಸಿದ್ದಾರೆ.

ಇಸ್ಕಾನ್ ಹೇಳಿಕೆ
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ಕಾನ್, ಮನೇಕಾ ಗಾಂಧಿ ಅವರದ್ದು ಆಧಾರರಹಿತ ಸುಳ್ಳು ಆರೋಪವಾಗಿದೆ ಎಂದು ಹೇಳಿದ್ದಾರೆ.
'ಇಸ್ಕಾನ್ ಭಾರತದಲ್ಲಿ 60 ಕ್ಕೂ ಹೆಚ್ಚು ಗೋಶಾಲೆಗಳನ್ನು ನಡೆಸುತ್ತದೆ. ನೂರಾರು ಪವಿತ್ರ ಹಸುಗಳು ಮತ್ತು ಎತ್ತುಗಳನ್ನು ರಕ್ಷಿಸುತ್ತದೆ. ಅವುಗಳ ಸಂಪೂರ್ಣ ಜೀವಿತಾವಧಿಯುದ್ದಕ್ಕೂ ಆರೈಕೆಯನ್ನು ಒದಗಿಸುತ್ತದೆ' ಎಂದು ಇಸ್ಕಾನ್ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications