'IT Cell Spreading..' ಬಂಧನದ ಬಳಿಕ ನಗುತ್ತಾ ಸೆಲ್ಫಿ ತೆಗೆದುಕೊಂಡ್ರಾ ಕುಸ್ತಿಪಟುಗಳು? ವೈರಲ್ ಫೋಟೊ ಹಿಂದಿನ ಸತ್ಯವೇನು?
ಭಾನುವಾರ ನೂತನ ಸಂಸತ್ ಭವನದ ಕಡೆಗೆ ಮೆರವಣಿಗೆ ಹೊರಟ ನಂತರ ಸಾಕ್ಷಿ ಮಲಿಕ್ ಸೇರಿದಂತೆ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಸ್ತಿಪಟುಗಳ ಬಂಧನಕ್ಕೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಬಂಧನ ನಂತರ ಕುಸ್ತಿಪಟುಗಳು ನಗುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕುಸ್ತಿಪಟುಗಳು ಅಭಿನಯಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ.
ಕುಸ್ತಿಪಟುಗಳಾದ ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ಅವರ ಫೊಟೊವನ್ನು ಹಂಚಿಕೊಳ್ಳಲಾಗಿದೆ. ಆದರೆ ಇದು ಎಡಿಟ್ ಮಾಡಿರುವ ಫೋಟೊ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಹೇಳಿಕೆ ನೀಡಿದ್ದು, ಇದೆಲ್ಲ ಐಟಿ ಸೆಲ್‌ನವರ ಸೃಷ್ಟಿ ಎಂದು ಆರೋಪಿಸಿದ್ದಾರೆ.

ಬಜರಂಗ್ ಪುನಿಯಾ ಎರಡು ಫೋಟೊಗಳನ್ನು ಹಂಚಿಕೊಂಡಿದ್ದು, ಒಂದು ಅಸಲಿ ಚಿತ್ರ ಮತ್ತೊಂದು ಎಡಿರುವ ಚಿತ್ರ ಎಂದು ಹೇಳಿದ್ದಾರೆ. ಒಂದು ಫೋಟೊದಲ್ಲಿ ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ನಗುತ್ತಿದ್ದರೆ, ಇನ್ನೊಂದರಲ್ಲಿ ಗಂಭೀರವಾಗಿದ್ದಾರೆ.
IT Cell वाले ये झूठी तस्वीर फैला रहे हैं। हम ये साफ़ कर देते हैं की जो भी ये फ़र्ज़ी तस्वीर पोस्ट करेगा उसके ख़िलाफ़ शिकायत दर्ज की जाएगी। #WrestlersProtest pic.twitter.com/a0MngT1kUa
— Bajrang Punia 🇮🇳 (@BajrangPunia) May 28, 2023
ದೂರು ದಾಖಲಿಸುವುದಾಗಿ ಹೇಳಿಕೆ
"ಐಟಿ ಸೆಲ್‌ನವರು ಈ ರೀತಿ ಮಾರ್ಪಡಿಸಿದ ಚಿತ್ರಗಳನ್ನು ವೈರಲ್ ಮಾಡುವ ಮೂಲಕ ಪ್ರತಿಭಟನೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ನಕಲಿ ಚಿತ್ರವನ್ನು ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಲಾಗುವುದು" ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.
ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕುಸ್ತಿಪಟುಗಳು ನವದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಸ್ಥಳದಿಂದ 3 ಕಿಮೀ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿರುವ ಪ್ರತಿಭಟನೆ ನಡೆಸುತ್ತಿದ್ದರು. ಕುಸ್ತಿಪಟುಗಳನ್ನು ಬಸ್‌ಗಳಿಗೆ ಹತ್ತಿಸಿಕೊಂಡು ಬೇರೆ ಸ್ಥಳಗಳಿಗೆ ಕರೆದೊಯ್ದಿರುವ ದೆಹಲಿಯ ಪೊಲೀಸರು, ಕುಸ್ತಿಪಟುಗಳ ಮಂಚಗಳು, ಹಾಸಿಗೆಗಳು, ಕೂಲರ್‌ಗಳು, ಫ್ಯಾನ್‌ಗಳು ಮತ್ತು ಟಾರ್ಪಾಲಿನ್ ಸೀಲಿಂಗ್ ಅನ್ನು ತೆಗೆದುಹಾಕಿದ್ದು, ಪ್ರತಿಭಟನಾ ನಿರತ ಸ್ಥಳವನ್ನು ತೆರವು ಮಾಡಿದ್ದಾರೆ.
Where @RizviUzair demonstrates how a photograph has been digitally altered to show the wrestlers smiling pic.twitter.com/91wgWclqqN
— Joy (@Joydas) May 28, 2023
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ
ಕುಸ್ತಿಪಟುಗಳ ನಗುತ್ತಿರುವ ನಕಲಿ ಫೋಟೊಗಳನ್ನು ಹಂಚಿಕೊಂಡಿರುವುದಕ್ಕೆ ವ್ಯಾಪಕ ಆಕ್ರೊಶ ವ್ಯಕ್ತವಾಗಿದೆ. ದೇಶಕ್ಕಾಗಿ ಪದಕ ಗೆದ್ದುಕೊಟ್ಟ ಕುಸ್ತಿಪಟುಗಳಿಗೆ ಈ ರೀತಿ ಅವಮಾನ ಮಾಡುವುದು ಒಳ್ಳೆಯದಲ್ಲ ಎಮದು ಹಲವರು ಹೇಳಿದ್ದಾರೆ.
ಇನ್ನೂ ಕೆಲವರು ಆ ರೀತಿ ಫೋಟೊ ಮಾರ್ಪಡಿಸುವ ವಿಡಿಯೋ ಹಂಚಿಕೊಂಡಿದ್ದು, ಬಿಜೆಪಿ ಐಟಿ ಸೆಲ್ ಕುಸ್ತಿಪಟುಗಳಿಗೆ ಅವಮಾನ ಮಾಡಲು, ಅವರ ವ್ಯಕ್ತಿತ್ವ ಹಾಳು ಮಾಡಲು ಇಷ್ಟು ಕೆಳ ಮಟ್ಟಕ್ಕೆ ಇಳಿಯಬಾರದು ಎಂದು ಆರೋಪಿಸಿದ್ದಾರೆ.












Click it and Unblock the Notifications