ಗರೀಬಿ ಹಠಾವೋ ರೀತಿ ಮತ್ತೊಂದು ಸುಳ್ಳು ಭರವಸೆಯಾ ರಾಹುಲ್ ಜೀ?: ಮಾಯಾವತಿ
ಗರೀಬಿ ಹಠಾವೋ ಥರವೇ ಮತ್ತೊಂದು ಸುಳ್ಳು ಭರವಸೆಯಾ ಇದು? ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ರಾಹುಲ್ ಗಾಂಧಿಯನ್ನು ಛೇಡಿಸಿದ್ದಾರೆ. ಛತ್ತೀಸ್ ಗಢದಲ್ಲಿ ಸೋಮವಾರದಂದು ಸಭೆಯಲ್ಲಿ ಮಾತನಾಡುತ್ತಾ, ಕನಿಷ್ಠ ಆದಾಯ ಖಾತ್ರಿಯ ಭರವಸೆ ನೀಡಿದ್ದರು ರಾಹುಲ್ ಗಾಂಧಿ.
ಅದಾಗಿ ಮರು ದಿನವೇ ಮಾಯಾವತಿ ಹೀಗೆ ಛೇಡಿಸಿದ್ದಾರೆ. ಅಂದಹಾಗೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರಚನೆಗೆ ಇದೇ ಮಾಯಾವತಿ ಬೆಂಬಲ ನೀಡಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಟೀಕೆಯನ್ನು ಮುಂದುವರಿಸಿದ ಮಾಯಾವತಿ, ಕಳೆದ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ನೀಡಿದ ಭರವಸೆಗಳೂ ಈಗ ರಾಹುಲ್ ನೀಡಿದ ಭರವಸೆ ಒಂದೇ ರೀತಿ ಇವೆ ಎಂದಿದ್ದಾರೆ.
ಗರೀಬಿ ಹಠಾವೋ ರೀತಿಯಲ್ಲಿ ಕನಿಷ್ಠ ಆದಾಯ ಖಾತ್ರಿ ಭರವಸೆಯೂ ನಕಲಿ. ಸದ್ಯಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಕಪ್ಪು ಹಣದ ಭಾರವಸೆ ನೀಡಿತ್ತು, ಹದಿನೈದು ಲಕ್ಷ ಹಾಗೂ ಅಚ್ಛೆ ದಿನ್ ಏನಾಯಿತು? ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ವಿಫಲವಾಗಿವೆ. ಎರಡೂ ಒಂದೇ ನಾಣ್ಯದ ಮುಖಗಳು ಎದು ಸಾಬೀತುಪಡಿಸಿವೆ ಎಂದು ಮಾಯಾವತಿ ಹೇಳಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಛತ್ತೀಸ್ ಗಢದ ರಾಯ್ ಪುರದಲ್ಲಿ ನಡೆದ ಕಿಸಾನ್ ಅಭಾರ್ ಸಮ್ಮೇಳನದಲ್ಲಿ ಮಾತನಾಡಿದ್ದ ರಾಹುಲ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ನೀಡುವುದಾಗಿ ಘೋಷಣೆ ಮಾಡಿದ್ದರು.












Click it and Unblock the Notifications