2000 ಮುಖಬೆಲೆ ನೋಟುಗಳು ಮತ್ತೆ ಚಲಾವಣೆಗೆ? ವೈರಲ್ ಸುದ್ದಿ ಹಿಂದಿನ ಸತ್ಯವೇನು?
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಘೋಷಣೆ ಮಾಡಿದ್ದರು. ಹಳೆಯ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲಾಗಿತ್ತು ಬಳಿಕ 500 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಗಿತ್ತು. ಮೇ 19, 2023ರಂದು 2000 ರೂಪಾಯಿ ನೋಟುಗಳನ್ನು ವಾಪಸ್ ಪಡೆಯುವುದಾಗಿ ಆರ್ ಬಿಐ ಘೋಷಣೆ ಮಾಡಿತ್ತು.
ಇದೀಗ ಮತ್ತೊಮ್ಮೆ 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದು 500 ರೂಪಾಯಿಗಿಂತ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮರು ಚಲಾವಣೆ ಮಾಡಲಾಗುವುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಈಗ ಹರಿದಾಡುತ್ತಿರುವ ಸುದ್ದಿ ಎಷ್ಟು ನಿಜ? ಮಾಹಿತಿ ಇಲ್ಲಿದೆ.

ಹಣಕಾಸು ಸಚಿವಾಲಯ ಸ್ಪಷ್ಟನೆ
ರಾಜ್ಯಸಭೆಯಲ್ಲಿ ನೋಟುಗಳ ಮರು ಚಲಾವಣೆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವ ಹಣಕಾಸು ಇಲಾಖೆ 500 ರೂಪಾಯಿಗಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಮರು ಚಲಾವಣೆ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಂಸದ ಘನಶ್ಯಾಮ್ ತಿವಾರಿ 500 ರೂಪಾಯಿಗಿಂತ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸುವ ಯೋಜನೆ ಸರ್ಕಾರದ ಮುಂದಿದೆಯಾ ಎಂದು ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದರು.
2000 ಮುಖಬೆಲೆ ನೋಟಿನ ಬಗ್ಗೆ ಚರ್ಚೆ
ಘನಶ್ಯಾಮ್ ತಿವಾರಿ ಕರೆನ್ಸಿ ನೋಟುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂಪಡೆದ ಬಗ್ಗೆ ಕೂಡ ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರ ನೀಡಿದ ಚೌಧರಿ, ನವೆಂಬರ್ 2016 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಕ್ಟ್, 1934 ರ ಸೆಕ್ಷನ್ 24 (1) ಅಡಿಯಲ್ಲಿ 2000 ರೂಪಾಯಿ ಮುಖಬೆಲೆಯ ನೋಟನ್ನು ಪರಿಚಯಿಸಲಾಗಿತ್ತು. ಮಾರ್ಚ್ 31, 2017 ರ ವೇಳೆಗೆ 32,850 ಲಕ್ಷ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದರೆ, ಮಾರ್ಚ್ 31, 2018 ರ ವೇಳೆಗೆ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಹೇಳಿದರು. ನವೆಂಬರ್ 15, 2024 ರ ಹೊತ್ತಿಗೆ 17,447 ಲಕ್ಷ ನೋಟುಗಳನ್ನು ಆರ್‌ಬಿಐಗೆ ಹಿಂತಿರುಗಿಸಲಾಗಿದೆ. 346 ಲಕ್ಷ ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಹೇಳಿದರು.
ಸರ್ಕಾರವು 500 ರೂಪಾಯಿಗಳಿಗಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಬಹುದೇ ಎನ್ನುವ ಊಹಾಪೋಹಗಳ ನಡುವೆ ರಾಜ್ಯಸಭೆಯಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ. ಸರ್ಕಾರ ಮುಂದಿನ ದಿನಗಳಲ್ಲಿ 2000 ರೂಪಾಯಿ ನೋಟುಗಳನ್ನು ಪರಿಚಯಿಸುವ ಯಾವುದೇ ಉದ್ದೇಶ ಹೊಂದಿಲ್ಲ, ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ.












Click it and Unblock the Notifications