IRNSS-1H ಉಪಗ್ರಹ ಉಡಾವಣೆ ವಿಫಲ: ಇಸ್ರೋ
ಇಸ್ರೋ ಗುರುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದ IRNSS-1H ಉಪಗ್ರಹ ವಿಫಲವಾಗಿದೆ. ನಾಲ್ಕನೇ ಹಂತದಲ್ಲಿ ಸಮಸ್ಯೆ ಎದುರಾಗಿದ್ದರಿಂದ ವಿಫಲವಾಗಿರುವುದಾಗಿ ಇಸ್ರೋ ಹೇಳಿದೆ.
ಉಡಾವಣೆ ಆದ ಕೆಲ ನಿಮಿಷಗಳ ನಂತರ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಮಾತನಾಡಿ, ಉಡಾವಣೆ ವಿಫಲವಾಗಿದೆ. ನಾಲ್ಕನೇ ಹಂತದಲ್ಲಿ ನಿರೀಕ್ಷೆಯಂತೆ ನಡೆಯಲಿಲ್ಲ ಎಂದು ಅವರು ಹೇಳಿದ್ದಾರೆ.

"ಉಡಾವಣೆ ಯಶಸ್ವಿಯಾಗಲಿಲ್ಲ. ಹೀಟ್ ಶೀಲ್ಡ್ ಪ್ರತ್ಯೇಕವಾಗಲಿಲ್ಲ. ಅದರಿಂದ ನಾಲ್ಕನೇ ಹಂತದಲ್ಲಿ ಉಪಗ್ರಹ ಒಳಗೆ ಉಳಿಯಿತು" ಎಂದು ಕಿರಣ್ ಕುಮಾರ್ ಅವರು ತಿಳಿಸಿದ್ದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ರಾತ್ರಿ 7ಕ್ಕೆ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.. ಉಪಗ್ರಹವನ್ನು ಇಸ್ರೋದ ಪಿಎಸ್ ಎಲ್ ವಿ (ಎಕ್ಸ್ ಎಲ್ ಮಾದರಿ) ಹೊತ್ತೊಯ್ದಿತ್ತು.
ಇದೇ ಮೊದಲ ಬಾರಿಗೆ ಖಾಸಗಿಯವರು ಇಡೀ ಉಪಗ್ರಹದ ನಿರ್ಮಾಣದಲ್ಲಿ ಪೂರ್ಣವಾಗಿ ಪಾಲ್ಗೊಂಡಿದ್ದರು. IRNSS-1H ಅಂದರೆ ಇಂಡಿಯನ್ ರೀಜನಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಮ್. ಬೆಂಗಳೂರು ಮೂಲದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಇಸ್ರೋದ ಎಪ್ಪತ್ತು ವಿಜ್ಞಾನಿಗಳ ನಿಗಾವಣೆಯಲ್ಲಿ ಈ ಉಪಗ್ರಹವನ್ನು ರೂಪಿಸಿತ್ತು.
'ಐಆರ್ ಎನ್‌ಎಸ್‌ಎಸ್- 1ಎಚ್' ಉಪಗ್ರಹವನ್ನು 'ಐಆರ್ ಎನ್‌ಎಸ್‌ಎಸ್-1ಎ' ಉಪಗ್ರಹದ ಬದಲಿಗೆ ಉಡಾವಣೆ ಮಾಡಲಾಯಿತು. ಈ ಹಿಂದೆ ಉಡಾವಣೆಯಾಗಿದ್ದ 'ಐಆರ್ ಎನ್‌ಎಸ್‌ಎಸ್-1ಎ' ಉಪಗ್ರಹದ 'ಅಟಾಮಿಕ್ ಕ್ಲಾಕ್' ವಿಫಲಗೊಂಡಿತ್ತು. ಇದಕ್ಕೀಗ ಬದಲಿಯಾಗಿ 8ನೇ ಉಪಗ್ರಹ ಉಡಾವಣೆಯಾಗಿತ್ತು.
ಅಮೆರಿಕಾ ಮೂಲದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ರೀತಿಯಲ್ಲಿಯೇ ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ 'ನಾವಿಕ್' ಅನ್ನು ಜಾರಿಗೆ ತರುವ ಪ್ರಯತ್ನವನ್ನು ಬಹಳ ಹಿಂದೆಯೇ ಇಸ್ರೋ ಆರಂಭಿಸಿತ್ತು. ಇದಕ್ಕೆ ಒಟ್ಟು 9 ಉಪಗ್ರಹಗಳ ಅಗತ್ಯವಿತ್ತು.
ಈಗಾಗಲೇ 7 ಉಪಗ್ರಹಗಳನ್ನು ಕಕ್ಷೆಗೆ ರವಾನಿಸಲಾಗಿದ್ದು, ಇದರಲ್ಲಿ ಒಂದು ಉಪಗ್ರಹದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬದಲಿಯಾಗಿ 8ನೇ ಉಪಗ್ರಹವನ್ನು ರವಾನಿಸಲು ಸಿದ್ಧತೆ ನಡೆದಿತ್ತು.












Click it and Unblock the Notifications