ನಕ್ಸಲ್ ದಾಳಿ ಹಿಂದಿನ ಕರಾಳ ಸತ್ಯ ಬಹಿರಂಗ!
ರಾಯ್ಪುರ: ನಕ್ಸಲರ ದಾಳಿಯಿಂದ 10 ಪೊಲೀಸರನ್ನು ಕಳೆದುಕೊಂಡು ಛತ್ತೀಸ್‌ಗಢ ನಲುಗಿರುವಾಗಲೇ ಸ್ಫೋಟಕ ಸತ್ಯ ಬಹಿರಂಗವಾಗಿದೆ. ಅಂದಹಾಗೆ ಮಾಜಿ ನಕ್ಸಲರ ವಿರುದ್ಧ ಹಾಲಿ ನಕ್ಸಲರು ನಡೆಸಿದ (Naxal) ಈ ಭೀಕರ ಕೃತ್ಯದ ಬಗ್ಗೆ ತನಿಖೆ ಬಳಿಕ ಸ್ಫೋಟಕ ಸತ್ಯ ರಿವೀಲ್ ಆಗಿದೆ. ಹಾಗಾದರೆ ಅಸಲಿಗೆ ಛತ್ತೀಸ್‌ಗಢದ ನಕ್ಸಲ್ ದಾಳಿಗೆ ಕಾರಣ ಏನು? ಬನ್ನಿ ತಿಳಿಯೋಣ.
ಹೌದು, ಏಪ್ರಿಲ್ 26ರ ಗುರುವಾರ ಇಡೀ ದೇಶ ಬೆಚ್ಚಿಬಿದ್ದಿತ್ತು. ಛತ್ತೀಸ್‍ಗಢದ ಅರನ್‍ಪುರದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆ ಛತ್ತೀಸ್‍ಗಢದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಸೈನಿಕರು ಬಾಡಿಗೆಗೆ ಪಡೆದ ಮಿನಿ ವ್ಯಾನ್‍ನಲ್ಲಿ ತೆರಳಿದ್ದರು. ವಾಪಸ್ ಬರುವಾಗ ನಕ್ಸಲರು ದಾಳಿ ನಡೆಸಿದ್ದರಿಂದ 10 ಪೊಲೀಸರು ಹುತಾತ್ಮರಾಗಿದ್ದರು. ಆದರೆ ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ, ಇದು ಮಾಜಿ ನಕ್ಸಲರ ವಿರುದ್ಧ ಹಾಲಿ ನಕ್ಸಲರ ದಾಳಿ ಎಂಬುದು ಬಹಿರಂಗವಾಗಿದೆ. ಬದಲಾದವರನ್ನೇ ನಕ್ಸಲರು ಹತ್ಯೆ ಮಾಡಿರುವ ಸ್ಫೋಟಕ ಸಂಗತಿ ಬಯಲಾಗಿದೆ.

ನಕ್ಸಲರ ಖತರ್ನಾಕ್ ಪ್ಲ್ಯಾನ್
ಛತ್ತೀಸ್‌ಗಢದ ದಂತೇವಾಡದಲ್ಲಿ ಏ.26ರಂದು ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ 10 ಪೊಲೀಸರ ಪೈಕಿ ಐವರು, ಈ ಹಿಂದೆ ಸಕ್ರಿಯ ನಕ್ಸಲರಾಗಿದ್ದರಂತೆ. ಆದರೆ ಮನ ಪರಿವರ್ತನೆಗೊಂಡು, ದೇಶಸೇವೆಗಾಗಿ ಪೊಲೀಸ್ ಇಲಾಖೆ ಸೇರಿದ್ದರು. ಹೀಗೆ ಬದಲಾಗಿ ದೇಶಕ್ಕಾಗಿ ದುಡಿಯುತ್ತಿದ್ದವರನ್ನೇ ಹಾಲಿ ನಕ್ಸಲರು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ 10 ಪೊಲೀಸರು ಸೇರಿ 11 ಮಂದಿ ಮೃತಪಟ್ಟಿದ್ದರು. ಅಲ್ಲದೆ ಈ ದಾಳಿ ನಡೆಸಲು ನಕ್ಸಲರು ಎಂತಹ ಖತರ್ನಾಕ್ ಪ್ಲ್ಯಾನ್ ಮಾಡಿದ್ದರು ಅನ್ನೋ ವಿಚಾರ ಕೂಡ ಬಯಲಾಗಿದೆ.
ದೇಶಸೇವೆಗೆ ಬಂದವರ ಹತ್ಯೆ
ಬಸ್ತಾರ್ ರೇಂಜ್‌ನ ಐಜಿಪಿ ಸುಂದರ್ ರಾಜ್ ಹಲವು ಪ್ರಮುಖ ವಿಚಾರಗಳನ್ನ ತಿಳಿಸಿದ್ದು, ರಾಜ್ಯ ಪೊಲೀಸ್ ತುಕಡಿಯ ಭಾಗವಾಗಿರುವ ಜಿಲ್ಲಾ ಮೀಸಲು ರಕ್ಷಣಾ ಪಡೆ (ಡಿಆರ್‌ಜಿ)ಗೆ ಹುತಾತ್ಮರು ಸೇರ್ಪಡೆಯಾಗಿದ್ದರು. ಅಷ್ಟಕ್ಕೂ ದೇಶಸೇವೆಗೆ ಕಾಯುತ್ತಿರುವ ಸ್ಥಳೀಯ ಯುವಕರು ಸೇರಿದಂತೆ ನಕ್ಸಲ್‌ವಾದ ತೊರೆದು, ಸೇವೆಗೆ ಮುಂದಾಗುವ ಯುವಕರನ್ನು ಈ ಪಡೆಗೆ ನೇಮಿಸಿಕೊಳ್ಳಲಾಗುತ್ತದೆ. ಇದೇ ರೀತಿ ಒಂದು ಕಾಲದಲ್ಲಿ ನಕ್ಸಲರೇ ಆಗಿದ್ದು, ಇಂದು ನಕ್ಸಲರ ವಿರುದ್ಧ ಹೋರಾಟದಲ್ಲೇ ಜೋಗಾ ಸೋಡಿ, ಮುನ್ನಾ ಕಾಡ್ತಿ, ಹರಿರಾಮ್ ಮಾಂಡವಿ, ಜೋಗಾ ಕವಾಸಿ ಹಾಗೂ ಗೋಪ್ನಿಯಾ ಸೈನಿಕ್ ಹುತಾತ್ಮರಾಗಿದ್ದಾರೆ.
2 ತಿಂಗಳ ಹಿಂದೆಯೇ ಬಾಂಬ್!
ಹೌದು, ನಕ್ಸಲರು ದಾಳಿ ನಡೆಸಲು ಸುಮಾರು 2 ತಿಂಗಳ ಹಿಂದೆಯೇ ಸಿದ್ಧತೆ ನಡೆಸಿದ್ದರು ಎಂಬ ಸತ್ಯ ಹೊರಬಿದ್ದಿದೆ. 10 ಪೊಲೀಸರ ಸಾವಿಗೆ ಕಾರಣವಾದ ಜಾಗದಲ್ಲಿ ಸ್ಫೋಟ ನಡೆಸಲು 2 ತಿಂಗಳ ಹಿಂದೆಯೇ 10 ಅಡಿ ಆಳ ಹಾಗೂ 20 ಅಡಿ ಅಗಲದ ದೊಡ್ಡ ಗುಂಡಿಯನ್ನ ನಕ್ಸಲರು ತೋಡಿದ್ರು ಎನ್ನಲಾಗಿದೆ. ಹಾಗೇ 40 ರಿಂದ 50 ಕೆಜಿ ತೂಕದ ಐಇಡಿ ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ. ಇದರ ಜೊತೆಗೆ ಇನ್ನೂ ಹಲವು ಸಂಗತಿಗಳು ಈಗ ರಿವೀಲ್ ಆಗಿವೆ.

150 ಮೀ. ದೂರದಲ್ಲಿ ಅವಶೇಷ
ಈ ಸ್ಫೋಟದ ತೀವ್ರತೆ ಅದೆಷ್ಟು ಬಲವಾಗಿತ್ತು ಎಂದರೆ, ವಾಹನ ಸ್ಫೋಟದ ಸ್ಥಳದಿಂದ ಕನಿಷ್ಠ 20 ಅಡಿ ದೂರಕ್ಕೆ ಹಾರಿ ಬಿದ್ದಿದೆ. ಸ್ಫೋಟದ ಸ್ಥಳದಿಂದ ಸುಮಾರು 150 ಮೀ. ದೂರದಲ್ಲಿ ಚೂರಾದ ವಾಹನದ ಅವಶೇಷಗಳು ಸಿಕ್ಕಿವೆ ಎಂದರೆ ಲೆಕ್ಕ ಹಾಕಿ ಅದೆಷ್ಟು ಬಲವಾಗಿ ಸ್ಫೋಟ ಸಂಭವಿಸಿರಬೇಡ. ಘಟನೆ ನಡೆದ ಬಳಿಕ ವಿಶೇಷ ಭದ್ರತಾ ಪಡೆಗಳು ಕಾಡಿನಲ್ಲಿ ಅಡಗಿರುವ ಮಾವೋವಾದಿಗಳನ್ನು ಹುಡುಕುತ್ತಿದ್ದಾರೆ. ಈ ಪ್ರದೇಶ 3 ರಾಜ್ಯಗಳ ಮಧ್ಯೆ ಇದ್ದು, ತ್ರಿ-ಜಂಕ್ಷನ್ ಎಂದು ಕರೆಯಲಾಗುತ್ತದೆ.
ಪರಿಶೀಲನೆ ನಡೆಸಿದರೂ ಗೊತ್ತಾಗಲಿಲ್ಲ
ಮತ್ತೊಂದು ಕಡೆ ಈ ಪ್ರದೇಶದಲ್ಲಿ ಡಿಮೈನಿಂಗ್ ನಡೆಸಿದಾಗಲೂ ಸ್ಫೋಟಕಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಆದರೆ ಇದು ಆಗಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಬಸ್ತಾರ್ ರೇಂಜ್‌ನ ಐಜಿಪಿ ಸುಂದರ್‌ರಾಜ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಸುತ್ತಮುತ್ತಲ ಪ್ರದೇಶದಲ್ಲಿ ನಕ್ಸಲರಿಗಾಗಿ ಹುಡುಕಾಟ ಕೂಡ ನಡೆಯುತ್ತಿದೆ. ಈಗಾಗಲೇ ನಕ್ಸಲರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ.












Click it and Unblock the Notifications