JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ

Posted By:
Subscribe to Oneindia Kannada

ಹೈದರಾಬಾದ್ ವಿವಿಯ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ನಂತರ, ದೇಶವ್ಯಾಪಿ ಭಾರೀ ಸುದ್ದಿಯಲ್ಲಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿನ ದೇಶದ್ರೋಹಿಗಳ 'ದೇಶದ್ರೋಹ'ದ ಘೋಷಣೆ ಪ್ರಕರಣ ನಾಟಕೀಯ ತಿರುವು ಪಡೆಯುತ್ತಿದೆ.

ಘಟನೆಯ ಸತ್ಯಾಸತ್ಯತೆ ಏನು ಎಂದು ಜನಸಾಮಾನ್ಯರಿಗಿರುವ ಗೊಂದಲದ ನಡುವೆ, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನು ಹೊರಹಾಕಿದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿನ ಘಟನೆ ಸಂಪೂರ್ಣ ಪೂರ್ವ ನಿಯೋಜಿತ ಎಂದು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. (JNU, ರಣರಂಗವಾದ ಪಟಿಯಾಲ ಕೋರ್ಟ್)

ರಾಜಕೀಯ ಪಕ್ಷಗಳು ಬಹುಚರ್ಚಿತ ಪ್ರಕರಣಗಳನ್ನು ತಮಗೆ ಅನುಕೂಲವಾಗುವಂತೆ ತಿರುಚಿ ಲಾಭ ಪಡೆದುಕೊಳ್ಳುತ್ತಿರುವುದು ಹೊಸವಿಚಾರವಲ್ಲದಿದ್ದರೂ, ರಾಷ್ಟ್ರೀಯ ಮಾಧ್ಯಮಗಳು ವಸ್ತುನಿಷ್ಠ ವರದಿ ನೀಡದೇ ಕೆಲವೊಂದು ಪಕ್ಷದ ಪರವಾಗಿ ನಿಂತಿರುವುದು ಅರಗಿಸಿಕೊಳ್ಳಲು ಕಷ್ಟವಾಗುವಂತಹ ವಿಚಾರ.

ದೆಹಲಿಯ ಪಟಿಯಾಲ ಕೋರ್ಟಿನಲ್ಲಿ ಎರಡು ದಿನದಿಂದ ನಡೆಯುತ್ತಿರುವ ದೇಶದ ಸಂವಿಧಾನದ ಮೂರನೇ ಮತ್ತು ನಾಲ್ಕನೇ ಅಂಗದ ನಡುವೆ ನಡೆಯುತ್ತಿರುವ ಕಾದಾಟದಲ್ಲಿ, ನಾಲ್ಕನೇ ರಂಗದ ಪ್ರಮುಖರು ನಡೆಸಿದ ಪ್ರತಿಭಟನೆಯಲ್ಲೂ ರಾಜಕೀಯ ತಾಂಡವವಾಡಿದ್ದು ವಿಪರ್ಯಾಸ. (ಪತ್ರಕರ್ತರ, ವಕೀಲರ ನಡುವೆ ಜಟಾಪಟಿ)

ಕಪ್ಪು ಕೋಟು ಧಾರಿಗಳ ವಿರುದ್ದ ರಾಜದೀಪ್ ಸರ್ದೇಸಾಯಿ, ಬರ್ಖಾ ದತ್ ನೇತೃತ್ವದಲ್ಲಿ ಬುಧವಾರ (ಫೆ 17) ನಡೆದ ಪ್ರತಿಭಟನಾ ಮೆರವಣಿಗೆಯನ್ನು ಕೆಲವೊಂದು ರಾಷ್ಟ್ರೀಯ ವಾಹಿನಿಗಳು ಬಹಿಷ್ಕರಿಸಿದ್ದರಿಂದ, JNU ಘಟನೆಯಲ್ಲಿನ ಸತ್ಯಾಸತ್ಯತೆ ಅವರವರ ವಿವೇಚನೆಗೆ ಬಿಟ್ಟ ವಿಚಾರದಂತಾಗಿರುವುದು ಮಾತ್ರ ದುರಂತ.

ಈ ನಡುವೆ, ದೇಶದ್ರೋಹದ ಆರೋಪದಡಿಯಲ್ಲಿ ಬಂಧಿಯಾಗಿರುವ ಕನ್ಹಯ್ಯ ಕುಮಾರ್ ಮೇಲಿನ ಕೇಸನ್ನು ದೆಹಲಿ ಪೊಲೀಸರು, ಸಾಕ್ಷ್ಯಾಧಾರದ ಕೊರತೆಯಿಂದ ಕೈಬಿಡುವ ಸಾಧ್ಯತೆಯಿದೆ ಎಂದೂ ಕೆಲವೊಂದು ಪತ್ರಿಕೆಗಳು ವರದಿ ಮಾಡಿದೆ.

ಗುಪ್ತಚರ ಇಲಾಖೆಯ ವರದಿಯಲ್ಲಿ ಏನಿದೆ? ಮುಂದಿನ ಸ್ಲೈಡ್ ಕ್ಲಿಕ್ಕಿಸಿ..

ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದು ಹೀಗೆ

ಎರಡು ವಾಹಿನಿಗಳು ಪ್ರತಿಭಟನೆಯನ್ನು ಬಹಿಷ್ಕರಿಸಿದೆ, ಅವರಿಗೆ ನಾಚಿಕೆಯಾಗಬೇಕು ಎಂದು ಬುಧವಾರದ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ. ಈ ನಡುವೆ ಕೆಲವು ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಡಲು ದೆಹಲಿ ಪೊಲೀಸರಿಗೆ ಐಬಿ ಸೂಚಿಸಿದೆ ಎಂದು ವರದಿಯಾಗಿದೆ.

ಗುಪ್ತಚರ ವರದಿ

ಗುಪ್ತಚರ ವರದಿ

ಜವಾಹರಲಾಲ್ ವಿವಿಯಲ್ಲಿನ ಪ್ರಕರಣ ಪೂರ್ವ ನಿಯೋಜಿತ. ಇಂತಹ ದೇಶದ್ರೋಹದ ಘಟನೆ ದೇಶದ ಇನ್ನೂ ಹತ್ತರಿಂದ ಹನ್ನೆರಡು ವಿಶ್ವವಿದ್ಯಾಲಯದಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಎಂದು ಗುಪ್ತಚರ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. DSU ಬೆಂಬಲಿತ ನಾಲ್ವರು ದೇಶ ವಿರೋಧಿ ಘೋಷಣೆ ಕೂಗಿದ್ದು, ಇವರು ನಕ್ಸಲ್ ಪರವಾಗಿರುವ ಸಾಧ್ಯತೆ ಇದೆ ಎಂದು ಇಲಾಖೆಯ ವರದಿಯಲ್ಲಿ ಬಹಿರಂಗವಾಗಿದೆ.

ಕಾಶ್ಮೀರಿಗಳ ಶಂಕೆ ಖಚಿತ

ಕಾಶ್ಮೀರಿಗಳ ಶಂಕೆ ಖಚಿತ

ಇದರ ಜೊತೆಗೆ ನೆಹರೂ ವಿವಿ ಆವರಣವನ್ನು ಹತ್ತು ಮಂದಿ ಕಾಶ್ಮೀರಿಗಳು ಪ್ರವೇಶಿಸಿದ್ದರು ಎನ್ನುವ ಸುದ್ದಿಯನ್ನು ಗುಪ್ತಚರ ಇಲಾಖೆ ಖಚಿತಪಡಿಸಿದೆ. ಅಫ್ಜಲ್ ಗುರು ಸಂಬಂಧ ಜವಾಹರಲಾಲ್ ನೆಹರೂ ವಿವಿಯಲ್ಲಿ ನಡೆದಂತಹ ಘಟನೆಗಳು ದೇಶದ ಇತರ ವಿವಿಗಳಲ್ಲಿ ಶುರುವಾಗುವ ಸಾಧ್ಯತೆಯಿದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಮುನ್ನ ಜಾಧವಪುರ ವಿವಿಯಲ್ಲೂ ಈ ರೀತಿಯ ಘಟನೆ ನಡೆದಿತ್ತು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಅಫ್ಜಲ್ ಗುರು

ಅಫ್ಜಲ್ ಗುರು

ಅಫ್ಜಲ್ ಗುರು ನೇಣಿಗೆ ಹಾಕಿದ ವಾರ್ಷಿಕ ದಿನವನ್ನು (ಫೆ 9) ಕಾಶ್ಮೀರ ಭಾಗದಲ್ಲಿ ಮಾತ್ರ ಕಳೆದ ಎರಡು ವರ್ಷಗಳಿಂದ ಆಚರಿಸಲಾಗುತ್ತಿದೆ. ಈ ವರ್ಷ ದೆಹಲಿಯಲ್ಲೂ ಆಚರಿಸಲು ಕೆಲವು ಸಂಘಟನೆಗಳು ನಿರ್ಧರಿಸಿದ್ದವು. ದೇಶದ ಪ್ರಮುಖ ವಿವಿಗಳ ಆಡಳಿತ ವ್ಯವಸ್ಥೆಯ ಭದ್ರತೆಯಲ್ಲಿ ಭಾರೀ ಬದಲಾವಣೆ ಆಗಬೇಕಾಗಿದೆ ಎಂದು ಕೇಂದ್ರ ಗೃಹ ಇಲಾಖೆಗೆ ಐಬಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ವಿವಿ ವಿದ್ಯಾರ್ಥಿ ಮುಖಂಡನ ಹೇಳಿಕೆ

ವಿವಿ ವಿದ್ಯಾರ್ಥಿ ಮುಖಂಡನ ಹೇಳಿಕೆ

JNU ವಿವಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ನನ್ನು ಮಾರ್ಚ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ಪಟಿಯಾಲ ಕೋರ್ಟ್ ಆದೇಶ ನೀಡುವ ಮುನ್ನ, ನಾನೊಬ್ಬ ಭಾರತೀಯ, ಅಂದು ನಡೆದ ಘಟನೆ ಖಂಡನೀಯ ಎಂದು ಹಿಂದಿಯಲ್ಲಿ ಕೋರ್ಟಿಗೆ ಲಿಖಿತ ಹೇಳಿಕೆ ನೀಡಿದ್ದಾನೆ. ಕನ್ಹಯ್ಯ ಕುಮಾರ್ ನನ್ನು ಅಫ್ಜಲ್ ಗುರುನನ್ನು ಇರಿಸಲಾಗಿದ್ದ ಬಂದೀಖಾನೆ ಕೋಣೆಯಲ್ಲೇ ಹಾಕಲಾಗಿದೆ.

ಗುಪ್ತಚರ ಇಲಾಖೆಯ ಮತ್ತಷ್ಟು ವರದಿ

ಗುಪ್ತಚರ ಇಲಾಖೆಯ ಮತ್ತಷ್ಟು ವರದಿ

ಘಟನೆ ನಡೆದ ಎರಡು ದಿನದ ಹಿಂದೆ ಹತ್ತು ಕಾಶ್ಮೀರಿ ಯುವಕರು ಆವರಣ ಪ್ರವೇಶಿಸಿದ್ದರು. ಇವರಿಗೆ ಸಿಪಿಐ( ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಬೆಂಬಲಿಸುವ ವಿದ್ಯಾರ್ಥಿ ಸಂಘಟನೆಗಳ ಬೆಂಬಲವೂ ಇತ್ತು.ಜೆ ಎನ್ ಯು ಆವರಣದಲ್ಲಿ ದೇಶ ವಿರೋಧಿ ಕಾರ್ಯಕ್ರಮ ಆಯೋಜಿಸಲು, ಕಾಶ್ಮೀರಿ ಯುವಕರಿಗೆ ವಿವಿಯ ಕೆಲವು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕೈಜೋಡಿಸಿದ್ದರು. ಖಾಲಿದ್ ಎನ್ನುವ ಯುವಕ ದೇಶ ವಿರೋಧಿ ಘೋಷಣೆ ಕೂಗಲ್ಪಟ್ಟ ಕಾರ್ಯಕ್ರಮದ ಆಯೋಜಕನಾಗಿದ್ದ ಎಂದು ಇಲಾಖೆ ತನ್ನ ವರದಿಯಲ್ಲಿ ಬಹಿರಂಗ ಪಡಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ನೆಪ

ಸಾಂಸ್ಕೃತಿಕ ಕಾರ್ಯಕ್ರಮದ ನೆಪ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ಅನುಮತಿ ಪಡೆದು, ದೇಶ ವಿರೋಧಿ ಚಟುವಟಿಕೆ ನಡೆಸುವ ಹುನ್ನಾರ ಎನ್ನುವುದು ಇಡೀ ವೃತ್ತಾಂತದಲ್ಲಿ ಕಂಡುಬರುವ ಸತ್ಯ. ಉಮರ್ ಖಾಲಿದ್ ಎನ್ನುವ ವ್ಯಕ್ತಿ ಈ ಕಾರ್ಯಕ್ರಮದ ಆಯೋಜಕನಾಗಿದ್ದ. DSU ಸಂಘಟನೆ ಜವಾಹರಲಾಲ್ ವಿವಿಯಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗಿದೆ, ಜಾಗರೂಕತೆಯಿಂದ ಈ ಘಟನೆಯನ್ನು ನಿಭಾಯಿಸಬೇಕೆಂದು ಗುಪ್ತಚರ ಇಲಾಖೆ, ದೆಹಲಿ ಪೊಲೀಸರಿಗೆ ಸೂಚಿಸಿದೆ. ಅಫ್ಜಲ್ ಗುರು ಮತ್ತು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ನಾಲ್ವರು ಯುವಕರನ್ನು ಗುರುತಿಸಲಾಗಿದ್ದು, ದೆಹಲಿ, ಉತ್ತರಪ್ರದೇಶ, ಜಮ್ಮು, ಮಹಾರಾಷ್ಟ್ರದಲ್ಲಿ ಅಡಗಿಕೊಂಡಿದ್ದಾರೆಂದು ವರದಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Intelligence Bureau note to Union Home Ministry, Afzal Guru fire could spread. IB has warned that the protests relating to Afzal Guru could turn into a chain reaction across the country.
Please Wait while comments are loading...