ಇಂದೋರ್‌ನಲ್ಲಿ ತರಕಾರಿ ವ್ಯಾಪಾರಿಯ ಮಗಳು ನ್ಯಾಯಾಧೀಶೆಯಾಗಿ ಆಯ್ಕೆ!
ಇಂದೋರ್, ಮೇ. 06: ಸಾಧಿಸುವ ಛಲ ಇದ್ದರೆ, ಎದುರಾಗುವ ಕಷ್ಟಗಳು, ತೊಂದರೆಗಳು ಕ್ಷಣಿಕ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಆತ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಾನೆ. ಬಿರು ಬಿಸಿನಲ್ಲಿ ಬೆವರು ಸುರಿಸಿ ಗಳಿಸಿದ ಬಿಡಿ ಗಾಸಿನಲ್ಲಿ ಜೀವನ ಸಾಗಿಸುತ್ತಿದ್ದರು. ಮಗಳನ್ನು ಅದೇ ಹಣದಲ್ಲಿ ಓದಿಸಿದ್ದರು. ಈಗ ಮಗಳು ಮಾಡಿರುವ ಸಾಧನೆ ನೋಡಿ ಅಪ್ಪನ ಕಣ್ಣಲಿಗಳೇ ಒದ್ದೆಯಾಗಿವೆ.
ಬೀದಿಯಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ವ್ಯಕ್ತಿಯ ಪುತ್ರಿ ಮಧ್ಯ ಪ್ರದೇಶದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾಳೆ.

ಮಧ್ಯ ಪ್ರದೇಶದಲ್ಲಿ ಛಲಗಾತಿಯ ಸಾಹಸ
ಆಕೆಯ ಹೆಸರು ಅಂಕಿತಾ ನಗರ್, ವಯಸ್ಸು ಇನ್ನೂ 29 ವರ್ಷ. ಮಧ್ಯ ಪ್ರದೇಶದಲ್ಲಿ ನಡೆದ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿ ಸಿವಿಲ್ ಜಡ್ಜ್ ಆಗಿ ನೇಮಕವಾಗಿದ್ದಾರೆ. ಇಂದೋರ್ ನಗರದಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ಅಶೋಕ್ ನಗರ ಇವರ ಪುತ್ರಿ. ಆಕೆಯ ಈ ಸಾಧನೆಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಜಡ್ಜ್ ಆಗಬೇಕೆಂತಲೇ ಓದು: ಜಡ್ಜ್ ಆಗಬೇಕೆಂಬ ಆಸೆ ಹೊತ್ತು ಅಂಕಿತಾ ಓದುತ್ತಿದ್ದರು. ಪ್ರತಿ ನಿತ್ಯ ಹತ್ತು ತಾಸು ಓದಿನಲ್ಲಿ ತಲ್ಲೀನರಾಗುತ್ತಿದ್ದರು. ಅಪ್ಪ ಬೀದಿಯಲ್ಲಿ ತರಕಾರಿ ಮಾರುವುದನ್ನು ನೆನಪಿಸಿಕೊಂಡು ಎಷ್ಟೋ ಸಲ ಬೇರಡೆ ಕೆಲಸಕ್ಕೆ ಹೋಗಬೇಕೆಂದು ಕೊಂಡರೂ ಮನಸು ಅದಕ್ಕೆ ಒಪ್ಪುತ್ತಿರಲಿಲ್ಲ. ಜಡ್ಜ್ ಆಗಬೇಕೆಂಬ ಛಲ ತೊಟ್ಟಿದ್ದ ಛಲಗಾತಿ ಅಂಕಿತಾ, ಮೂರು ಸಾರಿ ಪರೀಕ್ಷೆ ಬರೆದು ವಿಫಲವಾಗಿದ್ದರು. ನಾಲ್ಕನೇ ಪ್ರಯತ್ನದಲ್ಲಿ ಇದೀಗ ನ್ಯಾಯಾಧೀಶೆ ಕಿರೀಟ ತಂದುಕೊಟ್ಟಿದೆ.

ಅಂಕಿತಾ ನಗರ್ ಅಂತರಾಳದ ನುಡಿಗಳು:
ನಾಲ್ಕು ಸಲ ನಾನು ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆ ಬರೆದೆ. ನಾಲ್ಕನೇ ಸಲ ನಾನು ನ್ಯಾಯಾಧೀಶೆಯಾಗಿ ಆಯ್ಕೆಯಾದೆ. ಕೊನೆಗೂ ನಾನು ಅಂದುಕೊಂಡಿದ್ದು ಸಾಧಿಸಿದೆ. ನನ್ನ ಈ ಸಂತೋಷವನ್ನು ಯಾವ ರೀತಿ ಹಂಚಿಕೊಳ್ಳಬೇಕು ಎಂಬುದಕ್ಕೆ ಪದಗಳೇ ಸಿಗುತ್ತಿಲ್ಲ. ಎಷ್ಟೇ ಕಷ್ಟಗಳು ಬಂದರೂ ನಾನು ನನ್ನ ಪ್ರಯತ್ನ ನಿಲ್ಲಿಸಲಿಲ್ಲ. ನ್ಯಾಯಾಧೀಶೆಯಾಗಬೇಕೆಂಬ ಛಲ ಬಿಡಲಿಲ್ಲ. ನಾನು ಈಗ ಆಯ್ಕೆಯಾಗಿರುವುದು ನೆನಪಿಸಿಕೊಂಡರೆ ತುಂಬಾ ಸಂತಸ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಹಣ ಇಲ್ಲ ಅಂತ ವೈದ್ಯೆ ಆಸೆ ಬಿಟ್ಟಿದ್ದ ಅಂಕಿತಾ:
ತರಕಾರಿ ಮಾರುತ್ತಿದ್ದ ಅಪ್ಪನಿಗೆ ಅಂಕಿತಾ ಸಹಾಯ ಮಾಡುತ್ತಲೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮೊದಲು ವೈದ್ಯೆಯಾಗಬೇಕು ಎಂದು ಬಯಸಿದ್ದೆ. ಆದರೆ ಅಷ್ಟು ಹಣ ಹೊಂದಿಸಲಾಗದು ಎಂಬ ಸತ್ಯ ಅರಿವಿಗೆ ಬಂತು. ಹೀಗಾಗಿ ಸಿವಿಲ್ ನ್ಯಾಯಾಧೀಶೆ ಆಗಬೇಕೆಂದು ನಿರ್ಧರಿಸಿದೆ. ಸರ್ಕಾರ ಕೊಡುತ್ತಿದ್ದ ವಿದ್ಯಾರ್ಥಿ ವೇತನ ಪಡೆದು ಓದು ಮುಗಿಸಿದ್ದಾಗಿ ಅಂಕಿತಾ ತನ್ನ ಓದಿನ ಪಯಣವನ್ನು ಸುದ್ದಿಸಂಸ್ಥೆ ಜತೆ ಹಂಚಿಕೊಂಡಿದ್ದಾರೆ.

ನನ್ನ ಮಗಳ ಸಾಧನೆ ನೋಡಿದ್ರೆ ಹೆಮ್ಮೆ ಆಗುತ್ತೆ:
ತನ್ನ ಮಗಳು ಸಾಕಷ್ಟು ಪರಿಶ್ರಮ ಹಾಕಿ ಓದಿದ್ದಾರೆ. ಇಟ್ಟ ಗುರಿ ಬದಲಿಸುವ ಛಲ ಬಿಡದೇ ಸಾಧಿಸಿದ್ದಾರೆ. ಯಾವುದೇ ಕಷ್ಟ ಪರಿಸ್ಥಿತಿಯಲ್ಲಿ ಯಾರೂ ಎದೆಗುಂದಬಾರದು ಎಂಬುದಕ್ಕೆ ನನ್ನ ಮಗಳೇ ಸಾಕ್ಷಿ. ನನ್ನ ಮಗಳ ಓದಿಗಾಗಿ ನಾನು ಮತ್ತು ನನ್ನ ಪತ್ನಿ ಅನೇಕ ವಿಚಾರದಲ್ಲಿ ರಾಜಿಯಾಗಿದ್ದೇವೆ. ಈಗ ಮಗಳು ಮಾಡಿರುವ ಸಾಧನೆ ನೋಡಿ ನಾವು ಹೆಮ್ಮೆಯಿಂದ ಖುಷಿ ಪಡುವಂತಾಗಿದೆ ಎಂದು ಅಂಕಿತಾ ತಂದೆ ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ನ್ಯಾಯದಾನ ಮಾಡ್ತೀನಿ:
ಯಾವ ತಂದೆ ತಾಯಿಯೂ ತಮ್ಮ ಮಕ್ಕಳಿಗೆ ಮೊದಲು ಮದುವೆ ಮಾಡಿಕಳಿಸಿಕೊಡಬೇಕು ಎಂಬುದನ್ನು ಬಿಡಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಬೇಕು. ಅವರು ಸ್ವಂತ ಕಾಲು ಮೇಲೆ ನಿಲ್ಲುವಂತೆ ಮಾಡಬೇಕು ಎಂದು ಅಂಕಿತಾ ತಂದೆ ಹೆಣ್ಣು ಮಕ್ಕಳನ್ನು ಹೆತ್ತವರಿಗೆ ಸಂದೇಶ ರವಾನಿಸಿದ್ದಾರೆ. ಇನ್ನು ಎಲ್ಎಲ್ಎಂ ಮುಗಿಸಿರುವ ಅಂಕಿತಾ ನನಗೆ ಮೊದಲಿನಿಂದಲೂ ಲಾ ಅಂದ್ರೆ ತುಂಬಾ ಇಷ್ಟ. ನನ್ನ ನ್ಯಾಯಾಲಯಕ್ಕೆ ಬರುವ ಎಲ್ಲರಿಗೂ ನ್ಯಾಯ ಒದಿಗಿಸುತ್ತೀನಿ ಎಂದು ಎಂದು ಅಂಕಿತಾ ಹೇಳಿಕೊಂಡಿದ್ದಾರೆ.












Click it and Unblock the Notifications