Get Updates
Get notified of breaking news, exclusive insights, and must-see stories!

ಇನ್ನಷ್ಟು ವೃದ್ಧಿಸಲು ಸಜ್ಜಾದ ಭಾರತದ ಬಾಹ್ಯಾಕಾಶ ಬಜೆಟ್ -ಗಿರೀಶ್ ಲಿಂಗಣ್ಣ ಬರಹ

ಪ್ರತಿ ಸಲವೂ ನಾವು ರಾತ್ರಿಯ ಆಕಾಶವನ್ನು ತಲೆಯೆತ್ತಿ ನೋಡಿದಾಗ, ಅದರಾಚೆಗೆ ಏನೆಲ್ಲ ಇರಬಹುದು ಎನ್ನುವ ಆಶ್ಚರ್ಯದ ಭಾವ ಮೂಡುತ್ತದೆ. ಭಾರತಕ್ಕೆ ಈ ಕುತೂಹಲವೇ ಈಗೊಂದು ಯೋಜನೆಯಾಗಿ ರೂಪುಗೊಂಡಿದೆ. ದಶಕಗಳ ಹಿಂದೆ ಸಣ್ಣಪುಟ್ಟ ಉಪಗ್ರಹಗಳ ಮೂಲಕ ಆರಂಭಗೊಂಡ ಭಾರತದ ಬಾಹ್ಯಾಕಾಶ ಯಾನ ಈಗ ಚಂದ್ರನ ಅನ್ವೇಷಿಸಿರದ ದಕ್ಷಿಣ ಧ್ರುವವನ್ನು ಮುಟ್ಟುವ ತನಕ ಬೆಳೆದಿದೆ. ಪ್ರಸ್ತುತ ಕೇಂದ್ರ ಬಜೆಟ್‌ ನಮ್ಮ ಬಾಹ್ಯಾಕಾಶ ಪ್ರಯಾಣ ಇನ್ನು ಎತ್ತ, ಹೇಗೆ ಸಾಗಬಹುದು ಎನ್ನುವ ಕುರಿತು ರೋಮಾಂಚಕ ಕಥೆಯನ್ನು ಹೇಳುತ್ತಿದೆ. ಭಾರತ ಸರ್ಕಾರ 2025-26ನೇ ಸಾಲಿನಲ್ಲಿ ಬಾಹ್ಯಾಕಾಶ ಇಲಾಖೆಗೆ 13,416 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಈ ಮೊತ್ತ ಎಪ್ರಿಲ್‌ 2025ರಿಂದ ಮಾರ್ಚ್‌ 2026ರ ಅವಧಿಯಲ್ಲಿ ಬಳಕೆಯಾಗಲಿದೆ. ಇದು ಹಿಂದಿನ ವರ್ಷದ 13,043 ಕೋಟಿ ರೂಪಾಯಿಗೆ ಹೋಲಿಸಿದರೆ ಕೊಂಚ, ಅಂದರೆ 3% ಹೆಚ್ಚಳವಾಗಿದೆ. ಆದರೆ, ಮುಂದಿನ ಬಜೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಇನ್ನೂ ದೊಡ್ಡ ಕೊಡುಗೆ ಸಿಗಬಹುದು ಎಂದು ತಜ್ಞರು ಭಾವಿಸುತ್ತಾರೆ. (ಬರಹ: ಗಿರೀಶ್ ಲಿಂಗಣ್ಣ ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ಬಜೆಟ್‌ ಎರಡು ಜೇಬುಗಳಿಗೆ ವಿಭಜಿಸಲ್ಪಟ್ಟಿದೆ ಎಂದುಕೊಳ್ಳಿ. ಮೊದಲನೇ ಜೇಬಿಗೆ ಹಾಕಿರುವ 7,313 ಕೋಟಿ ರೂಪಾಯಿ ದೈನಂದಿನ ಅಗತ್ಯಗಳಾದ ವಿಜ್ಞಾನಿಗಳ ಸಂಬಳ, ಈಗಾಗಲೇ ಇರುವ ವ್ಯವಸ್ಥೆಗಳ ನಿರ್ವಹಣೆ, ಸಣ್ಣ ಯೋಜನೆಗಳ ಕಾರ್ಯಾಚರಣೆ, ಮತ್ತು ಉಪಗ್ರಹಗಳ ಭೂಕೇಂದ್ರಗಳ ಸುಗಮ ನಿರ್ವಹಣೆಗಳಿಗೆ ಬಳಕೆಯಾಗುತ್ತದೆ. ಎರಡನೇ ಜೇಬಿಗೆ ಒದಗಿಸುವ 6,103 ಕೋಟಿ ರೂಪಾಯಿ ಹೊಸ ವ್ಯವಸ್ಥೆಗಳಾದ ಶಕ್ತಿಶಾಲಿ ರಾಕೆಟ್‌ಗಳ ನಿರ್ಮಾಣ, ಆಧುನಿಕ ಉಪಗ್ರಹಗಳು, ಸುಧಾರಿತ ಉಡಾವಣಾ ವೇದಿಕೆಗಳು, ಮತ್ತು ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯಗಳಿಗೆ ಬಳಸಲ್ಪಡುತ್ತವೆ. ನಿಜಕ್ಕೂ ಗಮನಾರ್ಹ ಅಂಶವೆಂದರೆ, ಇಸ್ರೋ ಹೇಗೆ ಈ ಹಣವನ್ನು ದಕ್ಷವಾಗಿ ಬಳಸುತ್ತದೆ ಎನ್ನುವುದು. ಅಮೆರಿಕ ಮತ್ತು ಚೀನಾಗಳು ಬಾಹ್ಯಾಕಾಶಕ್ಕೆ ನೂರಾರು ಬಿಲಿಯನ್‌ ಹಣ ಸುರಿದರೆ, ಭಾರತ ತನ್ನ ಒಟ್ಟು ಬಜೆಟ್‌ನ ಕೇವಲ 0.3% ಮೊತ್ತವನ್ನು ಮಾತ್ರವೇ ಬಾಹ್ಯಾಕಾಶ ಚಟುವಟಿಕೆಗಳಿಗೆ ಬಳಸುತ್ತದೆ. ಇಷ್ಟಾದರೂ, ಬಾಹ್ಯಾಕಾಶಕ್ಕೆ ವಿನಿಯೋಗಿಸುವ ಪ್ರತಿಯೊಂದು ರೂಪಾಯಿಯೂ ತಲಾ 2 ರೂಪಾಯಿಗಿಂತ ಹೆಚ್ಚಿನ ಪ್ರತಿಫಲವನ್ನು ನಿಖರ ಹವಾಮಾನ ಮುನ್ಸೂಚನೆ ನೀಡಿ ರೈತರ ಬೆಳೆಗೆ ನೆರವಾಗುವುದು, ಚಾಲಕರಿಗೆ ಜಿಪಿಎಸ್‌ ಮೂಲಕ ನಿಖರವಾಗಿ ದಾರಿ ತೋರಿಸುವುದು, ಅತ್ಯಂತ ದುರ್ಗಮ ಹಳ್ಳಿಗಳನ್ನೂ ಡಿಜಿಟಲ್‌ ಜಗತ್ತಿಗೆ ಸಂಪರ್ಕಿಸುವ ಸಂವಹನ ಒದಗಿಸುವ ಉಪಗ್ರಹಗಳ ಮೂಲಕ ಪರೋಕ್ಷವಾಗಿ ಸಂಪಾದಿಸಲಾಗುತ್ತದೆ.

India s Space

ಈಗ ಭಾರತದ ಬಾಹ್ಯಾಕಾಶ ಬಜೆಟ್ ಒಂದಷ್ಟು ರೋಮಾಂಚಕ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಇವುಗಳಲ್ಲಿ ಅತಿಹೆಚ್ಚು ಜನರನ್ನು ಸೆಳೆದಿರುವ ಯೋಜನೆಯೆಂದರೆ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಮ್ಮ ಮೊದಲ ಯೋಜನೆಯಾದ ಗಗನಯಾನ. ನಮ್ಮದೇ ದೇಶದ ಒಂದಷ್ಟು ಜನರು ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲುತ್ತಾ ಸಾಗುವುದನ್ನು, ಬಾಹ್ಯಾಕಾಶದಿಂದ ಕೆಳಗೆ ಭೂಮಿಯತ್ತ ನೋಡುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ! ಇದರ ಪರೀಕ್ಷಾ ಹಾರಾಟಗಳು ಈಗಾಗಲೇ ನಡೆಯುತ್ತಿದ್ದು, ಬಾಹ್ಯಾಕಾಶ ಬಜೆಟ್‌ ಜೀವ ಬೆಂಬಲ ವ್ಯವಸ್ಥೆ ಹೊಂದಿರುವ ವಿಶೇಷ ಕ್ಯಾಪ್ಸೂಲ್‌ ನಿರ್ಮಾಣಕ್ಕೆ, ಗಗನಯಾತ್ರಿಗಳ ತರಬೇತಿಗೆ, ಮತ್ತು ಸುರಕ್ಷತಾ ಕ್ರಮಗಳನ್ನು ಮತ್ತೆ ಮತ್ತೆ ಪರಿಶೀಲಿಸಲು ಬಳಕೆಯಾಗುತ್ತದೆ.

ಮಾನವ ಜೀವಗಳು ಅತ್ಯಂತ ಅಮೂಲ್ಯವಾಗಿರುವುದರಿಂದ ಗರಿಷ್ಠ ಜಾಗರೂಕತೆ ವಹಿಸಲಾಗುತ್ತದೆ. ಈ ಹಣ ಬಾಹ್ಯಾಕಾಶದಿಂದ ಬೆಳೆಗಳನ್ನು ಗಮನಿಸಲು ಬಳಕೆಯಾಗುವ, ಚಂಡಮಾರುತಗಳ ಕುರಿತು ಮೊದಲೇ ಮಾಹಿತಿ ನೀಡುವ, ಹಿಮಾಲಯದಲ್ಲೂ ಅಂತರ್ಜಾಲ ಸೇವೆ ಒದಗಿಸುವ, ಮತ್ತು ಮೀನುಗಾರರಿಗೆ ಹೆಚ್ಚಿನ ಮೀನು ಎಲ್ಲಿ ಲಭಿಸಬಹುದು ಎನ್ನುವ ಮಾಹಿತಿ ನೀಡಿ ನೆರವಾಗುವ ಹತ್ತಾರು ಉಪಗ್ರಹಗಳ ನಿರ್ಮಾಣಕ್ಕೂ ಬಳಕೆಯಾಗುತ್ತದೆ. ಇನ್ನು ಯುವ ಉದ್ಯಮಿಗಳಿಗೆ ತಮ್ಮ ಖಾಸಗಿ ಸ್ಟಾರ್ಟಪ್‌ ಸಂಸ್ಥೆಗಳ ಮೂಲಕ ಸ್ವಂತ ರಾಕೆಟ್‌ಗಳು ಮತ್ತು ಉಪಗ್ರಹಗಳನ್ನು ನಿರ್ಮಿಸಲು ಸಹಾಯ ಮಾಡುವ ಇನ್-ಸ್ಪೇಸ್‌ನಂತಹ ವಿಶೇಷ ಸಂಸ್ಥೆಗೂ ಈ ಹಣ ವಿನಿಯೋಗವಾಗುತ್ತದೆ. ಸರ್ಕಾರ ಇಂತಹ ಯುವ ಉದ್ಯಮಿಗಳಿಗೆ ನೆರವಾಗಲು, ಪ್ರೋತ್ಸಾಹಿಸಲು ಈಗಾಗಲೇ 1,000 ಕೋಟಿ ರೂಪಾಯಿಯ ಅನುದಾನವನ್ನೂ ಘೋಷಿಸಿದೆ. ಈ ಮೂಲಕ ಬಾಹ್ಯಾಕಾಶ ಕೇವಲ ಸರ್ಕಾರಿ ವಿಜ್ಞಾನಿಗಳಿಗೆ ಮಾತ್ರವಲ್ಲದೆ, ದೊಡ್ಡ ಕನಸುಗಳನ್ನು ಕಾಣುವ ಎಲ್ಲರಿಗೂ ಸೇರಿದೆ ಎಂದು ಸಾರಿದೆ.

ಈಗ ನಿಜಕ್ಕೂ ರೋಮಾಂಚನಕಾರಿ ವಿಚಾರಕ್ಕೆ ಬರೋಣ. ಬಹಳಷ್ಟು ತಜ್ಞರು 2026-27ನೇ ಕೇಂದ್ರ ಬಜೆಟ್‌ನಲ್ಲಿ ಬಾಹ್ಯಾಕಾಶ ಅನುದಾನ ಅಪಾರ ಹೆಚ್ಚಳ ಕಾಣಬಹುದು ಎಂದು ಅಂದಾಜಿಸಲಾಗಿದ್ದು, ಅದು 15,000ದಿಂದ 18,000 ಕೋಟಿ ರೂಪಾಯಿ, ಅಥವಾ ಅದಕ್ಕಿಂತಲೂ ಹೆಚ್ಚಿನ ಮೌಲ್ಯವನ್ನು ತಲುಪುವ ನಿರೀಕ್ಷೆಗಳಿವೆ. ಯಾಕೆ ಈ ಕುರಿತು ಇಷ್ಟೊಂದು ಆಶಾವಾದ? ಯಾಕೆಂದರೆ, ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ನೆರವೇರಲಿವೆ.

ಮೊದಲ ಮಾನವ ಸಹಿತ ಗಗನಯಾನ ಯೋಜನೆ 2026ರಲ್ಲಿ ಅಥವಾ 2027ರ ಆರಂಭದಲ್ಲಿ ನೆರವೇರುವ ನಿರೀಕ್ಷೆಗಳಿದ್ದು, ಮಾನವರನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಕಳುಹಿಸಿ, ಅಲ್ಲಿಂದ ಅವರನ್ನು ಮರಳಿ ಭೂಮಿಗೆ ಕರೆತರುವುದು ಅತ್ಯಂತ ವೆಚ್ಚದಾಯಕವಾಗಿದೆ. ಇದಕ್ಕಾಗಿ ಅವರಿಗೆ ಉಸಿರಾಡುವ ಗಾಳಿಯನ್ನು ಉತ್ಪಾದಿಸುವ ಜೀವ ಬೆಂಬಲ ವ್ಯವಸ್ಥೆ, ತಾಪಮಾನ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ದಿನಗಟ್ಟಲೆ ಗಗನಯಾತ್ರಿಗಳನ್ನು ಆರೋಗ್ಯವಾಗಿಡುವಿಕೆ, ಇತ್ಯಾದಿ ವ್ಯವಸ್ಥೆಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಬಳಸುವ ರಾಕೆಟ್‌ ಹಿಂದಿನ ಎಲ್ಲ ಯೋಜನೆಗಳಿಂದಲೂ ಹೆಚ್ಚು ಶಕ್ತಿಶಾಲಿ ಮತ್ತು ನಂಬಿಕಾರ್ಹವಾಗಿರಬೇಕು. 2027ರಲ್ಲಿ ನಡೆಸಲು ಉದ್ದೇಶಿಸಿರುವ ಚಂದ್ರಯಾನ-4 ಯೋಜನೆ ಹಿಂದೆಂದಿಗಿಂತಲೂ ಸಂಕೀರ್ಣ ಕಾರ್ಯಗಳನ್ನು ನಡೆಸಲು ಯೋಜಿಸಿದ್ದು, ಚಂದ್ರನ ಮೇಲ್ಮೈಯಿಂದ ಕಲ್ಲುಗಳು ಮತ್ತು ಮಣ್ಣನ್ನು ಭೂಮಿಗೆ ಮರಳಿ ತರುವ ಗುರಿ ಹೊಂದಿದೆ. ಇದಕ್ಕಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದು, ನೆಲದಿಂದ ಮಾದರಿಗಳನ್ನು ಸಂಗ್ರಹಿಸಿ, ಚಂದ್ರನ ಮೇಲ್ಮೈಯಿಂದ ಮತ್ತೆ ಬಾಹ್ಯಾಕಾಶಕ್ಕೆ ಜಿಗಿದು, ಭೂಮಿಗೆ ಮರಳಬಲ್ಲಂತಹ ಬಾಹ್ಯಾಕಾಶ ನೌಕೆಯ ನಿರ್ಮಾಣವಾಗಬೇಕು. ಇದು ಒಂದು ಬಾರಿಯ ಪ್ರಯಾಣದ ಬದಲಿಗೆ ಮೂರು ಬಾರಿ ಪ್ರಯಾಣ ನಡೆಸಿದಂತಾಗಲಿದೆ.

ಈ ಯೋಜನೆಗಳನ್ನೂ ಮೀರಿದ, ಇನ್ನೂ ಒಂದು ದೂರದೃಷ್ಟಿಯ ಆಲೋಚನೆಯೂ ಇಲ್ಲಿದೆ. ನಮ್ಮ ಬಾಹ್ಯಾಕಾಶ ಆರ್ಥಿಕತೆ ಪ್ರಸ್ತುತ 8 ಬಿಲಿಯನ್‌ ಡಾಲರ್‌ ಮೌಲ್ಯ ಹೊಂದಿದ್ದು, ಸರ್ಕಾರ ಇದನ್ನು ಮುಂದಿನ ವರ್ಷಗಳಲ್ಲಿ 44 ಬಿಲಿಯನ್‌ ಡಾಲರ್‌ ಮೌಲ್ಯಕ್ಕೆ ವೃದ್ಧಿಸುವ ಬಯಕೆ ಹೊಂದಿದೆ. ಸ್ಕೈರೂಟ್‌, ಅಗ್ನಿಕುಲ್‌ ಮತ್ತು ಪಿಕ್ಸೆಲ್‌ಗಳಂತಹ ಖಾಸಗಿ ಕಂಪನಿಗಳು ಈಗಾಗಲೇ ರಾಕೆಟ್‌ಗಳು ಮತ್ತು ಇಮೇಜಿಂಗ್‌ ಉಪಗ್ರಹಗಳನ್ನು ನಿರ್ಮಿಸುತ್ತಿದ್ದು, ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಿಗೆ ಸಾವಿರಾರು ಹೈಟೆಕ್‌ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಿ, ಮಹತ್ವದ ಮೂಲಭೂತ ವ್ಯವಸ್ಥೆಯ ಸ್ಥಾನಮಾನ (ಕ್ರಿಟಿಕಲ್‌ ಇನ್‌ಫ್ರಾಸ್ಟ್ರಕ್ಚರ್‌ ಸ್ಟೇಟಸ್) ಸಂಪಾದಿಸಲು ಉದ್ಯಮ ಮುಖಂಡರು ಈಗಿನ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬಜೆಟ್‌ ಅಪೇಕ್ಷಿಸುತ್ತಿದ್ದಾರೆ. ಈ ಸ್ಥಾನಮಾನ ಅವರಿಗೆ ಸುಲಭವಾಗಿ ಬ್ಯಾಂಕ್‌ ಸಾಲ ಪಡೆಯಲು ಮತ್ತು ವಿದೇಶೀ ಹೂಡಿಕೆಗಳನ್ನು ಆಕರ್ಷಿಸಲು ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತವನ್ನು ಜಾಗತಿಕ ಉಡಾವಣಾ ಕೇಂದ್ರವಾಗಿಸುವ ಹೆಬ್ಬಯಕೆ ಹೊಂದಿದ್ದಾರೆ. ಇದರಿಂದ ಭಾರತ ಇತರ ದೇಶಗಳಿಂದ ನಿಗದಿತ ಮೊತ್ತವನ್ನು ಪಡೆದುಕೊಂಡು, ಅವುಗಳ ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ. ಇದಕ್ಕಾಗಿ ಸರ್ಕಾರ ಇನ್ನೂ ದೊಡ್ಡ ಪ್ರಮಾಣದ ಹೂಡಿಕೆ ನಡೆಸಲೂ ಸಿದ್ಧವಾಗಿರುವಂತಿದೆ.

ಆದರೂ ಅಂತಿಮ ಬಜೆಟ್‌ ಮೊತ್ತ ನಮ್ಮ ಆರ್ಥಿಕತೆ ಹೇಗಿದೆ, ಹಣದುಬ್ಬರ ಯಾವ ಸ್ಥಿತಿಯಲ್ಲಿದೆ, ರಕ್ಷಣೆ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳ ಜೊತೆಗೆ ಬಜೆಟ್‌ಗಾಗಿ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆ, ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿದೆ. ಆದರೆ, ಇತಿಹಾಸ ನಮಗೆ ಹೆಚ್ಚಿನ ಆಶಾಭಾವನೆ ಮೂಡಿಸಿದೆ. ಯಾವಾಗೆಲ್ಲ ಮಹತ್ವದ ಯೋಜನೆಗಳು ಹತ್ತಿರ ಬಂದಿದ್ದವೋ, ಆಗೆಲ್ಲ ಬಜೆಟ್‌ನಲ್ಲಿ ಹೆಚ್ಚಳವಾಗಿತ್ತು. ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗಿಗೂ ಮುನ್ನ ಹೆಚ್ಚುವರಿ ಹಣ ಒದಗಿಸಲಾಗಿತ್ತು. ಈಗ ಗಗನಯಾನ ಯೋಜನೆ ಸಿದ್ಧವಾಗಿದ್ದು, ಇದು ಸ್ವತಂತ್ರವಾಗಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಜಗತ್ತಿನ ನಾಲ್ಕನೇ ದೇಶ ಎಂಬ ಕೀರ್ತಿಯನ್ನು ಭಾರತಕ್ಕೆ ತರಲಿದೆ. ಇದಕ್ಕಾಗಿ ಹಣಕಾಸಿನ ನೆರವೂ ಹೆಚ್ಚೇ ಬೇಕಾಗುತ್ತದೆ. 2025-26ನೇ ಸಾಲಿನ ಬಜೆಟ್‌ ನಮ್ಮ ಬಾಹ್ಯಾಕಾಶ ಯೋಜನೆಗಳು ಸ್ಥಿರವಾಗಿ ಮುಂದೆ ಸಾಗುವಂತೆ ಮಾಡಿದ್ದರೆ, 2026-27ರ ಬಜೆಟ್‌ ಭಾರತದ ಬಾಹ್ಯಾಕಾಶ ಕಥೆಗೆ ಹೆಚ್ಚಿನ ವೇಗ ತರುವ ನಿರೀಕ್ಷೆಗಳಿವೆ. ಅಂದರೆ, ಇದರಿಂದ ಕೇವಲ ನಮ್ಮ ಗಗನಯಾತ್ರಿಗಳು ಮಾತ್ರ ಬಾಹ್ಯಾಕಾಶದ ಕಕ್ಷೆಗೆ ತೆರಳುವುದಿಲ್ಲ. ಇದರೊಡನೆ ಸಾವಿರಾರು ಹೊಸ ಉದ್ಯೋಗಗಳು, ತಾಂತ್ರಿಕ ಸಾಧನೆಗಳು, ಮತ್ತು ನಮ್ಮ ಧ್ವಜ ನಕ್ಷತ್ರಗಳ ನಡುವೆ ಹಾರುವುದನ್ನು ವೀಕ್ಷಿಸುವ ಹೆಮ್ಮೆ ಕೋಟ್ಯಂತರ ಭಾರತೀಯರಿಗೆ ಲಭಿಸುತ್ತವೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+