Amazon-Flipkart: ಇ-ಕಾಮರ್ಸ್ ಕಂಪನಿಗಳಿಗೆ ಮೂಗುದಾರ ಹಾಕಿ, ಶ್ವೇತಪತ್ರದ ಶಿಫಾರಸು ಜಾರಿ ಮಾಡಿ
ಬೆಂಗಳೂರು, ಅಕ್ಟೋಬರ್ 20: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸಹಾಯದಿಂದ ಊಟ, ಮನೆ, ಮನುಷ್ಯರ ದಿನ ಬಳಕೆಯ ವಸ್ತುಗಳು ಮನೆಗೆ ಬರುತ್ತವೆ. ನಾವಿದ್ದಲ್ಲಿಗೆ ಏನು ಬೇಕಾದರೂ ತರಿಸಿಕೊಳ್ಳಬಹುದಾದ ಅವಕಾಶವನ್ನು ಈ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಝಾನ್, ಫ್ಲಿಪ್‌ಕಾರ್ಟ್, ಮೆಶ್ಯೋ, ಮಿಂತ್ರಾ (Amazon Flipkart Meesho Myntra) ಕಂಪನಿಗಳು ಒದಗಿಸಿವೆ. ಆದರೆ ಇವುಗಳಿಂದ ದೇಶದ ಚಿಲ್ಲರೆ ವ್ಯಾಪಾರ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ಇ-ಕಾಮರ್ಸ್ ನೀತಿ ಜಾರಿಗೆ ಆಗ್ರಹ ಶುರುವಾಗಿದೆ.
ಹೌದು, ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ದೈತ್ಯ ಸಂಸ್ಥೆಗಳಿಂದ ಚಿಲ್ಲರೆ ವ್ಯಾಪಾರ ವಲಯ ಆತಂಕದಲ್ಲಿವೆ ಎಂದಿರುವ 'ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ಸ್ ಅಸೋಸಿಯೇಷನ್' ಈ ಚಿಲ್ಲರೆ ವ್ಯಾಪಾರಿ ಸಮುದಾಯದ ರಕ್ಷಣೆಗೆ ಇ-ಕಾಮರ್ಸ್ ಕಂಪನಿಗಳಿಗೆ ಅಂಕುಶ ಹಾಕುವಂತೆ ಸಮುದಾಯವನ್ನು ರಕ್ಷಿಸಲು ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ), ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘವು ಆಗ್ರಹಿಸಿವೆ.

ಈ ಮೇಲಿನ ಎಲ್ಲ ಸಂಘ ಸಂಸ್ಥೆ, ಒಕ್ಕೂಟಗಳು ಸಹಯೋಗದಲ್ಲಿ ಬಿಡುಗಡೆ ಮಾಡಿರುವ ಸಮಗ್ರ ಶ್ವೇತಪತ್ರದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ಸ್ ಅಸೋಸಿಯೇಷನ್ ವಲಯ ಉಪಾಧ್ಯಕ್ಷ ಜಿ. ನಾಗರಾಜ ನಾಯ್ಡು, ರಾಜ್ಯಾಧ್ಯಕ್ಷ ರವಿ ಕುಮಾರ್ ಹಾಗೂ ಕಾರ್ಯದರ್ಶಿ ಸುಹಾಸ್ ಕಿಣಿ ಅವರು ಒತ್ತಾಯಿಸಿದ್ದಾರೆ.
ದಸರಾದಲ್ಲಿ ಮೊಬೈಲ್ ವ್ಯಾಪಾರ ಬರೋಬ್ಬರಿ ಶೇ.70
ದಸರಾ ಹಬ್ಬದ ಮಾರಾಟದಲ್ಲಿ ಇ- ಕಾಮರ್ಸ್ ಗಳ ಒಟ್ಟು ಸರಾಸರಿ ವ್ಯಾಪಾರದಲ್ಲಿ ಶೇಕಡಾ 70ರಷ್ಟು ವ್ಯಾಪಾರ ಕೇವಲ ಮೊಬೈಲ್ ಮಾರಾಟದಿಂದ ಆಗಿದೆ. ಇದು ಚಿಲ್ಲರೆ ವ್ಯಾಪಾರಿಗಳ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ. ಚಿಲ್ಲರೆ ವ್ಯಾಪಾರ ವಲಯದ ರಕ್ಷಣೆಗೆ ಮೊದಲು ಕಟ್ಟುನಿಟ್ಟಾದ ಇ-ಕಾಮರ್ಸ್ ನೀತಿ ಜಾರಿಗೆ ತರಬೇಕು.

ಇನ್ನೂ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಒಂಬುಡ್ಸ್ ಮನ್ ವ್ಯವಸ್ಥೆಯನ್ನು ಅಳವಡಿಸಿ, ಬಿ2ಸಿ ಇ ಕಾಮರ್ಸ್ ವಹಿವಾಟಿಗೆ ಜಿ.ಎಸ್.ಟಿ ಇನ್ ಪುಟ್ ತೆರಿಗೆ ರದ್ದುಪಡಿಸಬೇಕು. ವಿಶೇಷವಾಗಿ ಕ್ಯಾಶ್ ಬ್ಯಾಕ್ ಪ್ರೋತ್ಸಾಹವನ್ನು ಮತ್ತು ಹಬ್ಬಗಳ ಋತುವಿನ ವಿಶೇಷ ಮಾರಾಟ ಉತ್ಸವಗಳನ್ನು ರದ್ದುಪಡಿಸಿ ಇ-ಕಾಮರ್ಸ್ ಮೇಲೆ ವಿಲಾಸಿ ತೆರಿಗೆ ವಿಧಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ದೊಡ್ಡಮಟ್ಟದಲ್ಲಿ ಹಾನಿ
ಭಾರತೀಯ ಚಿಲ್ಲರೆ ವಲಯದ ಮೇಲೆ ಇ-ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ವ್ಯಾಪಕ ಹಾನಿಕಾರಕ ಪರಿಣಾಮಗಳು ಉಂಟಾಗುತ್ತಿವೆ. ಇದನ್ನು ತಡೆಗಟ್ಟದಿದ್ದರೆ ಚಿಲ್ಲರೆ ವ್ಯಾಪಾರ ಕ್ಷೇತ್ರ ಕುಸಿದು ಬೀಳುತ್ತದೆ. ದೊಡ್ಡ ಸಂಸ್ಥೆಗಳು ಎಲ್ಲಾ ವಲಯಗಳಲ್ಲೂ ತನ್ನ ಜಾಲವನ್ನು ವ್ಯಾಪಿಸಿಕೊಂಡಿವೆ. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆಯನ್ನು ಹಾಳುಗೆಡವಿದೆ. ಎರಡೂ ವೇದಿಕೆಗಳು ವಿಶೇಷ ಉತ್ಪನ್ನಗಳ ಬಿಡುಗಡೆಗಳಿಗಾಗಿ ಸ್ಮಾರ್ಟ್ಫೋನ್ ಮತ್ತು ತಂತ್ರಜ್ಞಾನ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿವೆ. ತಮ್ಮ ಆದ್ಯತೆಯ ಮಾರಾಟಗಾರರಿಗೆ ಆಳವಾದ ರಿಯಾಯಿತಿಗಳನ್ನು ನೀಡುತ್ತಿರುವುದರಿಂದ ಚಿಲ್ಲರೆ ಮಾರಾಟ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಪರಿಸ್ಥಿತಿ ವಿವರಿಸಿದರು.
ಸಿಸಿಐ ಸಂಶೋಧನೆಗಳು ನ್ಯಾಯ ಸಮ್ಮತತೆಯನ್ನು ದುರ್ಬಲಗೊಳಿಸುವ ಗಿಗ್-ಚಾಲಿತ ಬೂದು ಮಾರುಕಟ್ಟೆಯ ಏರಿಕೆ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ವಿದೇಶಿ ಇ-ಕಾಮರ್ಸ್ ವೇದಿಕೆಗಳ ಅನಿಯಂತ್ರಿತ ಬೆಳವಣಿಗೆಯಿಂದ ದತ್ತಾಂಶಗಳನ್ನು ನಕಲಿ ಮಾಡುವ ಕಳವಳವನ್ನು ಹುಟ್ಟು ಹಾಕಿದೆ. ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಪಡೆದು ದುರುಪಯೋಗಪಡಿಸಿಕೊಂಡಿದ್ದು, ಇದರಿಂದ ರಾಷ್ಟ್ರೀಯ ಭದ್ರತೆಗೂ ಸಹ ಅಪಾಯ ಎದುರಾಗಿದೆ.
ಇ-ಕಾಮರ್ಸ್ ವೇದಿಕೆಗಳು ಆರಂಭದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ನೆಪದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದವು. ನಂತರ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ವ್ಯಾಪಿಸಿಕೊಂಡಿವೆ. ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕದಂತಹ ದೇಶಗಳಲ್ಲಿ ಈ ವಲಯದಲ್ಲಿ ಹೆಚ್ಚು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಇಲ್ಲಿ ಸಹ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications