Jammu Railway Link: ಇಂದು ಪ್ರಧಾನಿಯಿಂದ ಐತಿಹಾಸಿಕ ರೈಲ್ವೆ ಮಾರ್ಗಕ್ಕೆ ಚಾಲನೆ
ಶ್ರೀನಗರ, ಫೆಬ್ರವರಿ 20: ಜಮ್ಮು ಮತ್ತು ಕಾಶ್ಮೀರವು ಮುಂದಿನ ದಿನಗಳಲ್ಲಿ ಸಾರಿಗೆ ಮೂಲಸೌಲಭ್ಯದಲ್ಲಿ ಒಂದು ಹೆಜ್ಜೆ ಮುಂದಿರಲಿದೆ. ಅಲ್ಲದೇ ಐತಿಹಾಸಿಕ ರೈಲ್ವೆ ಮಾರ್ಗ ಇಂದಿನಿಂದ ಕಣಿವೆ ಪ್ರದೇಶಗಳ ನಿವಾಸಿಗಳ ಸಂಚಾರಕ್ಕಾಗಿ ತೆರೆದುಕೊಳ್ಳಲಿದೆ.
ಹೌದು, ಜಮ್ಮುವಿನಲ್ಲಿ ಇಂದು ಮಂಗಳವಾರ ಫೆಬ್ರವರಿ 20ರಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖ ರೈಲ್ವೆ ಮಾರ್ಗದ ಜೊತೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ 209 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪಿಎಂಒ ಮಾಹಿತಿ ನೀಡಿದೆ.

ಇಂದು ಪ್ರಧಾನಮಂತ್ರಿಗಳು 15,863 ಕೋಟಿ ವೆಚ್ಚದ ಇಲ್ಲಿನ ಬಾನಿಹಾಲ್-ಖಾರಿ-ಸುಂಬರ್-ಸಂಗಲ್ದನ್ ನಡುವಿನ ಹೊಸ 48 ಕಿಮೀ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇನ್ನೂ ಒಟ್ಟು 470.23 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ 185.66 ಕಿಮೀ ಬಾರಾಮುಲ್ಲಾ-ಶ್ರೀನಗರ-ಬಾನಿಹಾಲ್-ಸಂಗಲ್ದನ್ ರೈಲು ಮಾರ್ಗವನ್ನು ವಿದ್ಯುದೀಕರಿಸಲಾಗಿದೆ.
ಪ್ರಧಾನಮಂತ್ರಿ ಅವರು ಕಣಿವೆಯಲ್ಲಿ ಮೊದಲ ವಿದ್ಯುತ್ ರೈಲು ಮತ್ತು ಶ್ರೀನಗರದ ಸಂಗಲ್ದನ್ ಮತ್ತು ಬಾರಾಮುಲ್ಲಾ ನಿಲ್ದಾಣದ ನಡುವೆ ರೈಲು ಸೇವೆಗೆ ಚಾಲನೆ ನೀಡಲಿದ್ದು, ಇದು ಜಮ್ಮು ಕಾಶ್ಮೀರ ನಿವಾಸಿಗಳ ಸಂತಸಕ್ಕೆ ಕಾರಣವಾಗಿದೆ.

ದಶಕಗಳ ಕನಸು ನನಸು
ಬಾರಾಮುಲ್ಲಾ-ಶ್ರೀನಗರ-ಬಾನಿಹಾಲ್-ಸಂಗಲ್ದನ್ ರೈಲು ಮಾರ್ಗ ದಶಕಗಳ ಕನಸಾಗಿದ್ದು, ಇಂದು ನೆರವೇರುತ್ತಿದೆ. ಇದು ಪ್ರಯಾಣಿಕರಿಗೆ ಸುಗಮ ಸಾರಿಗೆ ಸಂಪರ್ಕ ಒದಿಗಿಸುತ್ತದೆ. ಎಂಹತ ಹವಾಮಾನ ಸಂದರ್ಭದಲ್ಲಿ ಈ ಸಾರಿಗೆ ಬಳಕೆಗೆ ಬರುವಂತಿದೆ. ಇದು ಅತೀ ಉದ್ದದ ಅಂದರೆ ಯೋಜನೆಯ ಶೇಕಡಾ 90ರಷ್ಟು ಸುರಂಗ ಮಾರ್ಗವನ್ನೆ ಒಳಗೊಂಡಿದೆ.
ಖಾರಿ-ಸುಂಬರ್ ನಡುವೆ 12.77 ಕಿಮೀ ವ್ಯಾಪಿಸಿದ್ದು,ಇದು ಪರಿಸರದ ಸುಸ್ಥಿರತೆ ಜತೆಗೆ ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿ ಉತ್ತೇಜಿಸಲಿದೆ. ಒಟ್ಟು 41,119 ಕೋಟಿ ರೂ ಯೋಜನಾ ವೆಚ್ಚದಲ್ಲಿ 272-ಕಿಮೀ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ ಲಿಂಕ್ (USBRL) ಯೋಜನೆ ಕಾರ್ಯಾರಂಭಗೊಂಡಿತ್ತು. ಅದರ ಭಾಗವೇ (ರೈಲ್ವೆ ಲಿಂಕ್) ಇಂದು ಉದ್ಘಾಟನೆಗೊಳ್ಳುತ್ತಿದೆ.
161 ಕಿ.ಮೀ ರೈಲ್ವೆ ಜಾಲ
ಜಮ್ಮು ವ್ಯಾಪ್ತಿಯ ಒಟ್ಟು USBRL ಯೋಜನೆಯಡಿ ಸಾರಿಗೆ ಜಾಲ ಬಲಪಡಿಸುವ ಗುರಿ ಇದೆ. 161 ಕಿ.ಮೀ. ಈಗಾಗಲೇ ಕಾರ್ಯಾರಂಭಗೊಂಡಿದೆ. ಅದಕ್ಕೆ ಇಂದು ಮಂಗಳವಾರ ಬನಿಹಾಲ್-ಸಂಗಲ್ದನ್ ನಡುವಿನ 48 ಕಿ.ಮೀ. ರೈಲು ಮಾರ್ಗವು ಸೇರ್ಪಡೆ ಆಗಲಿದೆ.
ಬಾರಾಮುಲ್ಲಾ-ಶ್ರಿಂಗಾರ್-ಬನಿಹಾಲ್-ಸಂಗಲ್ದನ್ ಮಾರ್ಗದಲ್ಲಿ ವಿದ್ಯುತ್ ರೈಲು ಸಂಚರಿಸಲಿದೆ. ಈ ಮಾರ್ಗದ ಉದ್ದಕ್ಕೂ 20 ನಿಲ್ದಾಣಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಸುಸ್ಥಿರ ಮತ್ತು ಸಮರ್ಥ ಸಾರಿಗೆ ಜಾಲಕ್ಕೆ ಕೊಡುಗೆ ನೀಡಲಾಗಿದೆ. ಅಂದರೆ ಈ ಪ್ರದೇಶದಲ್ಲಿ ಶುದ್ಧ ಇಂಧನದಿಂದ ಚಲಿಸುವ ರೈಲುಗಳ ಕಾರ್ಯಾರಂಭದಿಂದ ಐತಿಹಾಸಿಕ ಬದಲಾವಣೆ ಆಗಿರುವುದನ್ನು ಇದು ಸೂಚಿಸುತ್ತದೆ.












Click it and Unblock the Notifications