IRCTC: ಜುಲೈ 1ರಿಂದ ಆಧಾರ್ ಇಲ್ಲದಿದ್ದರೆ ರೈಲ್ವೆ ತತ್ಕಾಲ್ ಟಿಕೆಟ್ ಸಿಗಲ್ಲ: ಏನಿದು ಹೊಸ ರೂಲ್ಸ್?
ಬೆಂಗಳೂರು, ಜೂನ್ 12: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗಾಗಿ ಹೊಸ ಹೊಸ ಯೋಜನೆ/ ಉಪಕ್ರಮಗಳನ್ನು ಜಾರಿಗೆ ತರಲಾಗುತ್ತದೆ. ಈ ಬಾರಿ ಸಾಮಾನ್ಯ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ IRCTC ಜಾಲತಾಣ ಇಲ್ಲವೇ ಆಪ್ ಮೂಲಕ ನೀವು ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಮುಂದಾದರೆ ನಿಮಗೆ ಆಧಾರ್ ಕಾರ್ಡ್ ಕಡ್ಡಾಯ ನಿಯಮವನ್ನು ಜಾರಿಗೆ ತರಲಾಗುತ್ತದೆ.
ಹೌದು, ಭಾರತೀಯ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ನಿರಂತರವಾಗಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಪಾದರ್ಶಕತೆ ತರುವ ಹಾಗೂ ಪ್ರಯಾಣದ ಸದುದ್ದೇಶ ಇರುವವರಿಗೆ ಮಾತ್ರ ಟಿಕೆಟ್ ಲಭ್ಯವಾಗುವಂತೆ ಮಾಡಲು ''ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ಕಡ್ಡಾಯ'' ನಿಯಮ ಜಾರಿಗೆ ಮುಂದಾಗಿದ್ದಾರೆ. ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯವು ಅಧಿಕೃತ ಮಾಹಿತಿ ಹೊರಡಿಸಿದೆ.

ಮುಂದಿನ ತಿಂಗಳು 2025ರ ಜುಲೈ 1ರಿಂದ ಹೊಸ ನಿಯಮವು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (IRCTC) ಜಾರಿಗೆ ಬರಲಿದೆ. ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಕಾರ್ಡ್ ದೃಢೀಕರಣ ಅಗತ್ಯ ಎಂಬುದನ್ನು ರೈಲ್ವೆ ಪ್ರಯಾಣಿಕರು ಗಮನದಲ್ಲಿಟ್ಟುಕೊಂಡು ತತ್ಕಾಲ್ ಯೋಜನೆಯಡಿಯಲ್ಲಿ ಟಿಕೆಟ್‌ಗಳನ್ನು IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಸಂಖ್ಯೆ ಸಹಿತ ಬಳಕೆದಾರರು ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಆಧಾರ್ ಗುರುತು ಕಡ್ಡಾಯವೇಕೆ?
ಐಆರ್‌ಸಿಟಿಸಿಯಲ್ಲಿ ಈ ತಾಂತ್ರಿಕ ಬದಲಾವಣೆಗೆ ಈಗಾಗಲೇ ರೈಲ್ವೆ ಅಧಿಕಾರಿಗಳು ತಯಾರಿ ಪೂರ್ಣಗೊಳಿಸಿದ್ದಾರೆ. ಅಗತ್ಯ ಎಲ್ಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಂತಹ ಕ್ರಮಗಳ ಮೂಲಕ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ವಂಚನೆ ಆಗುವುದನ್ನು ತಪ್ಪಿಸಲಾಗುತ್ತದೆ. ನೈಜ ಪ್ರಯಾಣಿಕರಿಗೆ ಟಿಕೆಟ್ ಸಿಗುವಂತೆ ಮಾಡುವ ಉದ್ದೇಶದಿಂದ ಆಧಾರ್ ಗುರುತು ಕಡ್ಡಾಯಗೊಳಿಸಲಾಗಿದೆ.
ರೈಲು ಪ್ರಮಾಣಿಕರಿಗಾಗಿ ಎಸಿ ಮತ್ತು ಎಸಿ ಅಲ್ಲದ ಎರಡೂ ವರ್ಗದ ತತ್ಕಾಲ್ ಟಿಕೆಟ್ ಬುಕಿಂಗ್ ತೆರೆದ ನಂತರ ಮೊದಲ 30 ನಿಮಿಷಗಳಲ್ಲಿ ಯಾವುದೇ ಏಜೆಂಟ್ ಬುಕಿಂಗ್‌ಗಳನ್ನು ಅನುಮತಿ ನೀಡದಂತೆ ರೈಲ್ವೆ ಇಲಾಖೆ ಕ್ರಮ ವಹಿಸಿದೆ. ಇದೆಲ್ಲ ಬದಲಾವಣೆ, ಸಾಧಕ ಬಾಧಕಗಳನ್ನು ವಿಶ್ಲೇಷಿಸಿದ ಬಳಿಕ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ರೈಲ್ವೆ ಟಿಕೆಟ್ ಬುಕ್ಕಿಂಗ್ ಮಟ್ಟಿಗೆ ಇದೊಂದು ಮಹತ್ವ ಹೆಜ್ಜೆಯಾಗಿದೆ.












Click it and Unblock the Notifications