Indian Railways: ರೈಲ್ವೆ ಜಾಲ ವಿದ್ಯುದೀಕರಣ & ಟ್ರ್ಯಾಕ್ ದ್ವಿಪಥ ಯೋಜನೆ ಸಂಪೂರ್ಣ ಅಪ್ಡೇಟ್ಸ್
Indian Railways: ಭಾರತೀಯ ರೈಲ್ವೆ 2025 ರ ಹೊತ್ತಿಗೆ ರೈಲ್ವೆಯ ಟ್ರ್ಯಾಕ್ ವಿದ್ಯುದೀಕರಣ ಮತ್ತು ಟ್ರ್ಯಾಕ್ ದ್ವಿಗುಣಗೊಳಿಸುವ ಯೋಜನೆಗಳ ಮೂಲಕ ತನ್ನ ಮೂಲಸೌಕರ್ಯವನ್ನು ಗಣನೀಯವಾಗಿ ಬಲಪಡಿಸಿದೆ. ಬ್ರಾಡ್-ಗೇಜ್ ನೆಟ್‌ವರ್ಕ್‌ನ ಸುಮಾರು ಶೇಕಡಾ 99 ರಷ್ಟನ್ನು ವಿದ್ಯುದೀಕರಿಸಿದೆ. ಹಾಗಾದರೆ ಈವರೆಗೆ ದ್ವಿಪಥಗೊಂಡ ರೈಲ್ವೆ ಜಾಲ, ವಿದ್ಯುದೀಕರಣಗೊಂಡ ಮಾರ್ಗ ವಿವರ, ಮುಂದಿನ ಗುರಿಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆಯು ಬ್ರಾಡ್-ಗೇಜ್ ನೆಟ್‌ವರ್ಕ್‌ನ ವಿದ್ಯುದೀಕರಣ ಅಂದಾಜು 69,800 ಕಿಲೋ ಮೀಟರ್‌ಗಳನ್ನು ಮಾರ್ಗಗಳನ್ನು ಒಳಗೊಂಡಿದೆ. ಮಾರ್ಚ್ 2026 ರ ಗುರಿಗಿಂತ ಮುಂಚಿತವಾಗಿ 2025 ರ ಅಂತ್ಯದೊಳಗೆ ಶೇಕಡಾ 100ರಷ್ಟು ವಿದ್ಯುದೀಕರಣ ಗುರಿ ತಲುಪುವ ನಿರೀಕ್ಷೆಯಿದೆ. 2025ರ ಹಣಕಾಸು ವರ್ಷದಲ್ಲಿ 2,701 ಕಿಲೋ ಮೀಟರ್ ಮಾರ್ಗವನ್ನು ವಿದ್ಯುದೀಕರಿಸಲಾಗಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಯು ಈ ಪ್ರಯತ್ನಗಳಿಗೆ ಪೂರಕವಾಗಿದ್ದು, 1,040 ಮೆಗಾವಾಟ್ ಸಾಮರ್ಥ್ಯದ ಭೂ-ಆಧಾರಿತ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗಿದೆ.

ಕೇಂದ್ರ ಸರ್ಕಾರವು ತಿರುಪತಿ-ಪಾಕಾಲ-ಕಾಟ್ಪಾಡಿ ರೈಲ್ವೆ ಮಾರ್ಗದ 104 ಕಿ.ಮೀ.ಗಳ ದ್ವಿಗುಣಗೊಳಿಸುವಿಕೆಗೆ ಅಂದಾಜು 1,332 ಕೋಟಿ ರೂಪಾಯಿ ಯೋಜನೆಗೆ ಮಂಜೂರಾತಿ ನೀಡಿದೆ. ದೇಶದ ಈಶಾನ್ಯ ಭಾಗವನ್ನು ರೈಲ್ವೆ ಸಾರಿಗೆ ಸಂಪರ್ಕ ಸಾಧಿಸುವ ಹಿನ್ನೆಲೆಯಲ್ಲಿ ಅಸ್ಸಾಂನ ಫರ್ಕೇಟಿಂಗ್ ಮತ್ತು ಹೊಸ ಟಿನ್ಸುಕಿಯಾ ನಡುವಿನ 194 ಕಿ.ಮೀ ರೈಲು ಮಾರ್ಗವನ್ನು ದ್ವಿಗುಣಗೊಳಿಸಲು 3,634 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಹೂಡಿಕೆ ಮತ್ತು ಭವಿಷ್ಯದ ಯೋಜನೆಗಳು
2025-26 ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ, ಭಾರತೀಯ ರೈಲ್ವೆಯು ಒಟ್ಟು ಹಂಚಿಕೆಯಾದ ಬಜೆಟ್‌ನ ಶೇಕಡಾ 56.5 ರಷ್ಟನ್ನು ಅಂದರೆ 1.42 ಲಕ್ಷ ಕೋಟಿ ರೂಪಾಯಿಗಳಷ್ಟು ದಾಖಲೆಯ ಬಂಡವಾಳ ವೆಚ್ಚವನ್ನು (Capital Expenditure - CAPEX) ದಾಖಲಿಸಿದೆ.
ಮುಂದಿನ ದಿನಗಳಲ್ಲಿ ರೈಲ್ವೆ ವಿದ್ಯುದೀಕರಣ, ಟ್ರ್ಯಾಕ್ ದ್ವಿಗುಣಗೊಳಿಸುವಿಕೆ ಮತ್ತು ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳ (Dedicated Freight Corridors) ಅಭಿವೃದ್ಧಿ ಸೇರಿದಂತೆ ರೈಲ್ವೆ ಜಾಲವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು 2030 ರೊಳಗೆ 5.4 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಸರ್ಕಾರ ಚಿಂತಿಸಿದೆ.
ಮುಖ್ಯವಾಗಿ ಭಾರತೀಯ ರೈಲ್ವೇ ತನ್ನ ಮೂಲಸೌಕರ್ಯವನ್ನು ಆಧುನೀಕರಿಸಲು ವಿದ್ಯುದೀಕರಣ ಮತ್ತು ಮಾರ್ಗ ಡಬಲಿಂಗ್‌ಗಾಗಿ ಯೋಜನೆಗೆ ವೇಗ ನೀಡಿದೆ. ಕಾರ್ಯಕ್ಷಮತೆ ಹೆಚ್ಚಿಸಿರುವ ರೈಲ್ವೆ ಇಲಾಖೆ ಇಂಧನದಿಂದ ಹೊರ ಸೂಸುತ್ತಿದ್ದ ಕಾರ್ಬನ್ ಸೂಸುವಿಕೆ ಕಡಿಮೆ ಮಾಡಿ, ದೇಶಾದ್ಯಾಂತ ಉತ್ತಮ ಪರಿಸರ ಸ್ನೇಹಿ ಸಾರಿಗೆ ಸಂಪರ್ಕವನ್ನು ಒದಗಿಸುತ್ತಿದೆ. ನಿರಂತರ ಹೂಡಿಕೆ ಮತ್ತು ಸಮರ್ಥ ಯೋಜನೆಗಳಿಂದ, ಭಾರತೀಯ ರೈಲ್ವೇ ಸುಸ್ಥಿರ, ಪರಿಣಾಮಕಾರಿಯಾದ ಸಾರಿಗೆ ಕ್ಷೇತ್ರದಲ್ಲಿ ನೂತನ ದಾರಿಯನ್ನು ತಲುಪಲಿದೆ.











Click it and Unblock the Notifications