ರಾಷ್ಟ್ರಪತಿ ಚುನಾವಣೆ ಕ್ರಾಸ್ ವೋಟಿಂಗ್: ಕಾಂಗ್ರೆಸ್ಸಿಗೆ ಭಾರೀ ಮುಖಭಂಗ?

Posted By:
Subscribe to Oneindia Kannada

ದೇಶದ ಪರಮೋಚ್ಚ ಹುದ್ದೆ ರಾಷ್ಟ್ರಪತಿ ಚುನಾವಣೆಯಲ್ಲೂ ಅಡ್ಡ ಮತದಾನ ನಡೆದಿದೆಯೇ? ತಮ್ಮ ತಮ್ಮ ಪಕ್ಷಗಳ ವಿಪ್ ಉಲ್ಲಂಘಿಸಿ ಶಾಸಕರು, ಸಂಸದರು ಅಡ್ಡ ಮತದಾನ ಮಾಡುವುದನ್ನು ಕೇಳಿದ್ದೇವೆ. ಆದರೆ ರಾಷ್ಟ್ರಪತಿ ಚುನಾವಣೆಯಲ್ಲೂ ಕ್ರಾಸ್ ವೋಟಿಂಗ್ ನಡೆಯುತ್ತದೆಯೆಂದರೆ ಅಚ್ಚರಿ ಪಡಲೇಬೇಕು.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷದ ಶಾಸಕರು ಅಡ್ಡಮತದಾನ ಮಾಡಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ. ಹೀಗಾಗಿ, ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಗ್ಯಾರಂಟಿ.

ರಾಷ್ಟ್ರಪತಿ ಚುನಾವಣೆ, ಮತದಾನ ಮಾಡಿದ ಮೋದಿ, ಸೋನಿಯಾ

ಈ ಎಲ್ಲಾ ಪಕ್ಷದ ಶಾಸಕರು ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸಿದ್ದವು. ಅಡ್ದಮತದಾನದ ಅಗತ್ಯವಿಲ್ಲದೆಯೇ ಗೆಲುವು ನಿಶ್ಚಿತವಾಗಿದ್ದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಮ್ ನಾಥ್ ಕೋವಿಂದ್, ಕ್ರಾಸ್ ವೋಟಿಂಗ್ ನಂತರ ರಾಷ್ಟ್ರಪತಿ ಹುದ್ದೆಗೇರುವುದು ಇನ್ನಷ್ಟು ಪಕ್ಕಾ ಆಗಿದೆ.

ಶೇ. 99.61 ಸಂಸದರು ಮತ್ತು ಶೇ. 99.37 ಶಾಸಕರು ಸೋಮವಾರ (ಜುಲೈ 17) ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತು ನಿಮಿಷ ಸರತಿಯಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷ.

ಇದೇ ಗುರುವಾರ, ಜುಲೈ 20ರಂದು ಫಲಿತಾಂಶ ಹೊರಬೀಳಲಿದೆ. ಇಂಡಿಯಾ ಟುಡೇ ವರದಿ ಪ್ರಕಾರ ಐದು ರಾಜ್ಯಗಳಲ್ಲಿ ಅಡ್ಡಮತದಾನ ನಡೆದಿದೆ. ಕ್ರಾಸ್ ವೋಟಿಂಗ್ ನಡೆದ ಐದು ರಾಜ್ಯಗಳಾವುವು? ಮುಂದೆ ಓದಿ..

ಐದು ರಾಜ್ಯಗಳಲ್ಲಿ ಅಡ್ಡಮತದಾನ

ಐದು ರಾಜ್ಯಗಳಲ್ಲಿ ಅಡ್ಡಮತದಾನ

ತ್ರಿಪುರಾ, ಉತ್ತರಪ್ರದೇಶ, ದೆಹಲಿ,ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ಎನ್ಡಿಎಯೇತರ ಶಾಸಕರು ವಿಪ್ ಉಲ್ಲಂಘಿಸಿ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಪರ ಮತಚಲಾಯಿಸಿದ್ದಾರೆಂದು ವರದಿಯಾಗಿದೆ. ಹೀಗಾಗಿ ಮತಗಳ ವಿಚಾರದಲ್ಲಿ ಈಗಾಗಲೇ ಸೇಫ್ ಆಗಿರುವ ಕೋವಿಂದ್ ಗೆಲುವು ಮತ್ತಷ್ಟು ಸನಿಹವಾಗಿದೆ.

ಕಾಂಗ್ರೆಸ್, ಆಮ್ ಆದ್ಮಿ, ಲೋಕದಳದ ಶಾಸಕರ ಅಡ್ಡಮತದಾನ

ಕಾಂಗ್ರೆಸ್, ಆಮ್ ಆದ್ಮಿ, ಲೋಕದಳದ ಶಾಸಕರ ಅಡ್ಡಮತದಾನ

ಪಂಜಾಬ್ ಮತ್ತು ಹರ್ಯಾಣದಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಮತ್ತು ರಾಷ್ಟ್ರೀಯ ಲೋಕದಳದ ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷ ತಮ್ಮ ಬೆಂಬಲವನ್ನು ಮೀರಾ ಕುಮಾರ್ ಅವರಿಗೆ ಘೋಷಿಸಿದ್ದರೂ, ಈ ವಿಚಾರದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರು ಭಿನ್ನ ನಿಲುವನ್ನು ತಾಳಿದ್ದರು. ಇಲ್ಲಿ ರಾಮ್ ನಾಥ್ ಪರ ಮತ ಚಲಾಯಿಸಿದ್ದೇವೆಂದು ಆಮ್ ಆದ್ಮಿ ಪಕ್ಷದ ಸುಕ್ಪಾಲ್ ಸಿಂಗ್ ಬಣ ಹೇಳಿದೆ.

ಕ್ರಾಸ್ ವೋಟಿಂಗ್

ಕ್ರಾಸ್ ವೋಟಿಂಗ್

ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ನೀಡಿರುವ ಹೇಳಿಕೆ ಕ್ರಾಸ್ ವೋಟಿಂಗ್ ನಡೆದಿದ್ದಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡಿದೆ. 75 ಶಾಸಕರು ನಮ್ಮ ಅಭ್ಯರ್ಥಿಗೆ ಮತಚಲಾಯಿಸಿದ್ದಾರೆಂದು ಖಟ್ಟರ್ ಹೇಳಿದ್ದಾರೆ. ಬಿಜೆಪಿ 47 ಸದಸ್ಯರನ್ನು ಮಾತ್ರ ಹೊಂದಿದೆ. ಐದು ಬಿಎಸ್ಪಿ ಶಾಸಕರು ಕೋವಿಂದ್ ಅವರಿಗೆ ಬೆಂಬಲ ಸೂಚಿಸಿದ್ದರು. ಹಾಗಾಗಿ, ಹರ್ಯಾಣದಲ್ಲಿ ರಾಷ್ಟ್ರೀಯ ಲೋಕದಳ ಮತ್ತು ಕಾಂಗ್ರೆಸ್ ಶಾಸಕರಿಂದ ಕ್ರಾಸ್ ವೋಟಿಂಗ್ ನಡೆದಿರುವುದು ನಿಶ್ಚಿತ.

ದೆಹಲಿ ಮತ್ತು ತ್ರಿಪುರಾದಲ್ಲಿ ಅಡ್ಡಮತದಾನ

ದೆಹಲಿ ಮತ್ತು ತ್ರಿಪುರಾದಲ್ಲಿ ಅಡ್ಡಮತದಾನ

ಇನ್ನು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರು ಮತ್ತು ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಉಚ್ಚಾಟಿತ ಶಾಸಕರು ಎನ್ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿರುವ ಸಾಧ್ಯತೆಯಿದೆ.

Rajinikanth Super Star of Tamilnadu, Is he the next President of India?| Oneindia Kannada
ಬಿಜೆಪಿ ವಿರುದ್ದ ಐಕ್ಯತೆ ಪ್ರದರ್ಶಿಸಲು ಕಾಂಗ್ರೆಸ್ಸಿಗೆ ಕಷ್ಟ

ಬಿಜೆಪಿ ವಿರುದ್ದ ಐಕ್ಯತೆ ಪ್ರದರ್ಶಿಸಲು ಕಾಂಗ್ರೆಸ್ಸಿಗೆ ಕಷ್ಟ

ಉತ್ತರಪ್ರದೇಶದಲ್ಲಿ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳೂ ಅಡ್ಡ ಮತದಾನ ನಡೆಸಿರಬಹುದೆಂದು ಶಂಕಿಸಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ನಿರೀಕ್ಷಿಸಿದಷ್ಟು ಮತ ದಕ್ಕದೇ ಮುಖಭಂಗ ಆಗುವ ಸಾಧ್ಯತೆ ಹೆಚ್ಚು. ಇದು ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ದ ಐಕ್ಯತೆ ಪ್ರದರ್ಶಿಸಲು ಕಾಂಗ್ರೆಸ್ಸಿಗೆ ಕಷ್ಟವಾಗಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Presidential elections: Punjab, Haryana, Delhi, Tripura and Uttar Pradesh may witness cross voting by AAP, Congress, SP, BSP and Trinamool Congress MLAs.
Please Wait while comments are loading...