ಅಫ್ಘಾನ್‌ನಿಂದ ಪ್ರಜೆಗಳ ಸ್ಥಳಾಂತರಕ್ಕೆ 'ಆಪರೇಷನ್ ದೇವಿ ಶಕ್ತಿ' ಘೋಷಿಸಿದ ಭಾರತ
ಕಾಬೂಲ್, ಆಗಸ್ಟ್ 24: ತಾಲಿಬಾನ್ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಫ್ಘಾನ್ ಪಾಲುದಾರರನ್ನು ಭಾರತಕ್ಕೆ ಕರೆ ತರುವ ಉದ್ದೇಶದಿಂದ "ಆಪರೇಷನ್ ದೇವಿ ಶಕ್ತಿ"ಗೆ ಅನ್ನು ಘೋಷಿಸಲಾಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
"ಮಂಗಳವಾರ ದೆಹಲಿಗೆ 78 ಪ್ರಯಾಣಿಕರನ್ನು ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಹೇಳಿದ್ದಾರೆ. "ಆಪ್ ದೇವಿ ಶಕ್ತಿ ಮುಂದುವರಿಸಲಾಗುತ್ತಿದೆ. ಕಾಬೂಲ್ ನಿಂದ 78 ಸ್ಥಳಾಂತರಿಸುವವರು ದುಶಾನ್ಬೆ ಮೂಲಕ ಆಗಮಿಸುತ್ತಾರೆ. ಭಾರತೀಯ ವಾಯುಸೇನೆ, ಏರ್ ಇಂಡಿಯಾ ಮತ್ತು TeMMEA ಅವಿರತ ಪ್ರಯತ್ನಕ್ಕೆ ಧನ್ಯವಾದ" ಎಂದು ಜೈಶಂಕರ್ ಹೇಳಿದ್ದಾರೆ.
ಅಫ್ಘಾನ್ ರಾಜಧಾನಿ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಒಂದು ದಿನದ ನಂತರ ಆಗಸ್ಟ್ 16ರಂದು ಕಾಬೂಲ್ ನಿಂದ ದೆಹಲಿಗೆ 40 ಭಾರತೀಯರನ್ನು ಏರ್ ಲಿಫ್ಟ್ ಮಾಡುವ ಮೂಲಕ ಭಾರತವು ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಿತು. ಕಾಬೂಲ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಭಾರತವು 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ. ವಿವಿಧ ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸಲು ಹರಸಾಹಸ ಪಡುತ್ತಿದೆ.

ಕಾಬೂಲ್ ನಿಂದ 78 ಜನರ ಸ್ಥಳಾಂತರ
ತಾಲಿಬಾನಿಗಳ ಕ್ರೌರ್ಯದಿಂದ ಬೆಚ್ಚಿ ಬಿದ್ದಿರುವ ಸಾವಿರಾರು ಮಂದಿ ಅಫ್ಘಾನ್ನರು ದೇಶದಿಂದ ಪಲಾಯನ ಮಾಡುವ ಪ್ರಯತ್ನದಲ್ಲಿದ್ದಾರೆ. ಕಳೆದ ಒಂದು ವಾರದಿಂದ ಕಾಬೂಲ್ ವಿಮಾನ ನಿಲ್ದಾಣದ ಸುತ್ತಲೂ ಕಿಕ್ಕಿರಿದು ಸೇರಿದ್ದಾರೆ. ಇದರ ಮಧ್ಯೆ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಂಗಳವಾರ 25 ಭಾರತೀಯರು ಸೇರಿದಂತೆ 78 ಜನರನ್ನು ರಕ್ಷಿಸಿ ಭಾರತಕ್ಕೆ ಕರೆ ತರಲಾಗಿದೆ.

ವಿಶೇಷ ವಿಮಾನದಲ್ಲಿ 107 ಭಾರತೀಯರ ಸ್ಥಳಾಂತರ
ಭಾನುವಾರವಷ್ಟೇ ಸಿ-17 ವಿಶೇಷ ವಿಮಾನದಲ್ಲಿ 107 ಮಂದಿ ಭಾರತೀಯರು ಸೇರಿದಂತೆ ಒಟ್ಟು 168 ಪ್ರಯಾಣಿಕರನ್ನು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಕರೆ ತರಲಾಯಿತು. ಈ ಪೈಕಿ ಅಫ್ಘಾನ್ ಸೆನೆಟರ್ ಆಗಿರುವ ಅನಾರ್ಕಲಿ ಹೊನರ್ಯಾರ್ ಮತ್ತು ನರೇಂದ್ರ ಸಿಂಗ್ ಖಲ್ಸಾ ಸಹ ಸೇರಿದ್ದಾರೆ. ಅಫ್ಘಾನಿಸ್ತಾನದಿಂದ ಮೂರು ವಿಮಾನಗಳಲ್ಲಿ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದ್ದು, ಏರ್ ಇಂಡಿಯಾ, ಇಂಡಿಗೋ ಹಾಗೂ ವಿಸ್ತಾರ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಎರಡು ವಿಮಾನ
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವುದಕ್ಕೆ ಈಗಾಗಲೇ ಸ್ಥಳಾಂತರ ಕಾರ್ಯಾಚರಣೆ ಶುರು ಮಾಡಲಾಗಿದೆ. ಹಿಂದೂ ಮತ್ತು ಸಿಖ್ಖರು ಹಾಗೂ ಸಹಾಯದ ನಿರೀಕ್ಷೆಯಲ್ಲಿರುವ ಅವರ ಸ್ನೇಹಿತರಿಗೆ ಭಾರತದಿಂದ ಅಭಯ ನೀಡಲಾಗುತ್ತಿದೆ. ಈ ಹಿನ್ನೆಲೆ ಪ್ರತಿನಿತ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭಾರತದಿಂದ ಎರಡು ವಿಮಾನಗಳನ್ನು ಬಿಡಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಅಫ್ಘಾನಿಸ್ತಾನ ಬಿಕ್ಕಟ್ಟಿನ ಬಗ್ಗೆ ಜಿ-7 ಸಭೆಯಲ್ಲಿ ಚರ್ಚೆ
ಜಗತ್ತು ಅಂದುಕೊಂಡಿದ್ದಕ್ಕಿಂತ ವೇಗವಾದ ಗತಿಯಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಕಬ್ಜ ಮಾಡಿಕೊಂಡಿದ್ದಾರೆ. ಅಮೆರಕಾ ಸೇನೆ ವಾಪಸ್ ತೆಗೆದುಕೊಳ್ಳುವ ಆಗಸ್ಟ್ 31ರ ಗಡುವು ವಿಸ್ತರಣೆಗೆ ತಾಲಿಬಾನ್ ನಿರಾಕರಿಸಿದ ಹಿನ್ನೆಲೆ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಜಿ-7 ರಾಷ್ಟ್ರಗಳ ಸಭೆ ಕರೆದಿದ್ದರು. ಮಂಗಳವಾರ ಬ್ರಿಟನ್, ಅಮೆರಿಕಾ, ಫ್ರಾನ್ಸ್, ಇಟಲಿ, ಜರ್ಮನಿ, ಜಪಾನ್, ಕೆನಡಾ ರಾಷ್ಟ್ರಗಳ ಸಭೆ ಕುರಿತು ಮಾತನಾಡಿದ ಬೋರಿಸ್, 'ನಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಇದರ ಜೊತೆಗೆ 20 ವರ್ಷಗಳಲ್ಲಿ ನಮಗೆ ನೆರವು ನೀಡಿದ ಅಫ್ಘಾನ್ನರಿಗೂ ಸಹಾಯ ಮಾಡಬೇಕಿದೆ. ಹೀಗಾಗಿ ನಾನು ತುರ್ತು ಸಭೆ ಕರೆದಿದ್ದು, ಅಫ್ಘಾನ್ ಜನರ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆಗೆ ನಾವು ಬದ್ಧರಾಗಿಬೇಕು' ಎಂದಿದ್ದಾರೆ.

ತಾಲಿಬಾನ್ ಉಗ್ರ ಸಂಘಟನೆ ಮತ್ತು ಅಫ್ಘಾನಿಸ್ತಾನ ಹಿಡಿತ
ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಅದಾಗಿ 10 ದಿನದಲ್ಲಿ ದೇಶದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸುತ್ತಿದ್ದಾರೆ. ತಾಲಿಬಾನ್ ಉಗ್ರರ ಮುಷ್ಠಿಯಲ್ಲಿ ಸಿಲುಕಿರುವ ಪ್ರಜೆಗಳು ಪ್ರತಿನಿತ್ಯ ಭಯದ ನೆರಳಿನಲ್ಲೇ ಬದುಕುತ್ತಿದ್ದು, ದೇಶ ತೊರೆಯುವುದಕ್ಕಾಗಿ ಹವಣಿಸುತ್ತಿದ್ದಾರೆ.
ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.












Click it and Unblock the Notifications