ಭಾರತದಲ್ಲಿ ಅಫ್ಘಾನ್ ಚಿತ್ರಣ ತೆರೆದಿಡಲು ಸರ್ವ ಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ
ಕಾಬೂಲ್, ಆಗಸ್ಟ್ 23: ತಾಲಿಬಾನ್ ಆಕ್ರಮಿಸಿಕೊಂಡಿರುವ ಅಫ್ಘಾನಿಸ್ತಾನದಿಂದ ಸಾವಿರಾರು ನಿರಾಶ್ರಿತರು ವಿದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಭಾರತೀಯರನ್ನು ಕರೆ ತರುವ ಕಾರ್ಯಾಚರಣೆ ಈಗಾಗಲೇ ಚಾಲ್ತಿಯಲ್ಲಿದ್ದು, ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ಸರ್ವಪಕ್ಷವನ್ನು ಉದ್ದೇಶಿಸಿದ ಮಾತನಾಡುವಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವುದಕ್ಕೆ ಈಗಾಗಲೇ ಸ್ಥಳಾಂತರ ಕಾರ್ಯಾಚರಣೆ ಶುರು ಮಾಡಲಾಗಿದೆ. ಹಿಂದೂ ಮತ್ತು ಸಿಖ್ಖರು ಹಾಗೂ ಸಹಾಯದ ನಿರೀಕ್ಷೆಯಲ್ಲಿರುವ ಅವರ ಸ್ನೇಹಿತರಿಗೆ ಭಾರತದಿಂದ ಅಭಯ ನೀಡಲಾಗುತ್ತಿದೆ. ಈ ಹಿನ್ನೆಲೆ ಪ್ರತಿನಿತ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭಾರತದಿಂದ ಎರಡು ವಿಮಾನಗಳನ್ನು ಬಿಡಲಾಗುತ್ತಿದೆ.
""ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು, ದೇಶದ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೆಚ್ಚಿನ ವಿವರಗಳನ್ನು ನೀಡುತ್ತಾರೆ" ಎಂದು ಶ್ರೀ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
|
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಸಂದೇಶ
"ಅಫ್ಘಾನಿಸ್ತಾನ ಬಿಕ್ಕಟ್ಟು ಮತ್ತು ಅಲ್ಲಿನ ಬೆಳವಣಿಗೆಗಳ ಕುರಿತು ದೇಶದ ನಾಯಕರನ್ನು ಉದ್ದೇಶಿಸಿ ಕೇಂದ್ರ ವಿದೇಶಾಂತ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಲಿದ್ದಾರೆ. ಆಗಸ್ಟ್ 26ರ ಬೆಳಗ್ಗೆ 11 ಗಂಟೆಗೆ ಮುಖ್ಯ ಸಮಿತಿಯ ಕೊಠಡಿಯಲ್ಲಿ ನಡೆಯುವ ಸರ್ವಪಕ್ಷ ಸಭೆಯಲ್ಲಿ ಹಾಜರಾಗಬೇಕೆಂದು ಆಹ್ವಾನಿಸುತ್ತೇವೆ," ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

ವಿಶೇಷ ವಿಮಾನದಲ್ಲಿ 107 ಭಾರತೀಯರ ಸ್ಥಳಾಂತರ
ಭಾನುವಾರವಷ್ಟೇ ಸಿ-17 ವಿಶೇಷ ವಿಮಾನದಲ್ಲಿ 107 ಮಂದಿ ಭಾರತೀಯರು ಸೇರಿದಂತೆ ಒಟ್ಟು 168 ಪ್ರಯಾಣಿಕರನ್ನು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಕರೆ ತರಲಾಯಿತು. ಈ ಪೈಕಿ ಅಫ್ಘಾನ್ ಸೆನೆಟರ್ ಆಗಿರುವ ಅನಾರ್ಕಲಿ ಹೊನರ್ಯಾರ್ ಮತ್ತು ನರೇಂದ್ರ ಸಿಂಗ್ ಖಲ್ಸಾ ಸಹ ಸೇರಿದ್ದಾರೆ. ಅಫ್ಘಾನಿಸ್ತಾನದಿಂದ ಮೂರು ವಿಮಾನಗಳಲ್ಲಿ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದ್ದು, ಏರ್ ಇಂಡಿಯಾ, ಇಂಡಿಗೋ ಹಾಗೂ ವಿಸ್ತಾರ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಜಿ-7 ರಾಷ್ಟ್ರಗಳ ಸಭೆ ಕರೆದ ಬೋರಿಸ್ ಜಾನ್ಸನ್
ಜಗತ್ತು ಅಂದುಕೊಂಡಿದ್ದಕ್ಕಿಂತ ವೇಗವಾದ ಗತಿಯಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಕಬ್ಜ ಮಾಡಿಕೊಂಡಿದ್ದಾರೆ. ಮಂಗಳವಾರ ಅಫ್ಘಾನ್ ನೆಲದಲ್ಲಿ ಸೃಷ್ಟಿಯಾಗಿರುವ ಆತಂಕಕಾರಿ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವುದಕ್ಕೆ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಜಿ-7 ರಾಷ್ಟ್ರಗಳ ಸಭೆ ಕರೆದಿದ್ದಾರೆ. ಬ್ರಿಟನ್, ಅಮೆರಿಕಾ, ಫ್ರಾನ್ಸ್, ಇಟಲಿ, ಜರ್ಮನಿ, ಜಪಾನ್, ಕೆನಡಾ ರಾಷ್ಟ್ರಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವರ್ಚುವಲ್ ಸಭೆಯಲ್ಲಿ ಅಫ್ಘಾನಿಸ್ತಾನದ ದುಸ್ಥಿತಿ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

ಅಫ್ಘಾನ್ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ್ದು ಹೇಗೆ?
ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.
ಅಫ್ಘಾನ್ ಮೇಲೆ ಅಮೆರಿಕಾ ಹಿಡಿತ ಸಾಧಿಸಿದ ಕಾಲ:
ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.












Click it and Unblock the Notifications