Indian Energy Sector: ಭಾರತಕ್ಕೆ ಮತ್ತೊಂದು ಬಂಪರ್, ಯುರೋಪ್ ಬಳಿಕ ಕೆನಡಾ ಜೊತೆಗೆ ಭರ್ಜರಿ ಒಪ್ಪಂದಕ್ಕೆ ಸಿದ್ಧತೆ
ಭಾರತ ಮತ್ತು ಯುರೋಪ್ ನಡುವೆ ಮಹತ್ವದ ಒಪ್ಪಂದಕ್ಕೆ ಇಂದು ಅಂತಿಮ ಮುದ್ರೆ ಬಿದ್ದಿದ್ದು, ಆ ಮೂಲಕ ಭಾರತ ಮತ್ತು ಯುರೋಪ್ ಒಕ್ಕೂಟದ ಮಧ್ಯೆ ಬೃಹತ್ ಮಟ್ಟದ ವ್ಯಾಪಾರ ಮತ್ತು ವಹಿವಾಟು ನಡೆಸಲು ಹೊಸ ದಾರಿ ಸೃಷ್ಟಿಯಾಗಿದೆ. ಯುರೋಪ್ ಒಕ್ಕೂಟ ಬರೋಬ್ಬರಿ 20 ವರ್ಷಗಳಿಂದ ಬಾಕಿ ಇದ್ದ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಇಂದು ಸಹಿ ಹಾಕಿದೆ. ಹೀಗಿದ್ದಾಗ ಮತ್ತೊಂದು ಭಾರಿ ಭರ್ಜರಿ ಸುದ್ದಿ ಸಿಕ್ಕಿದ್ದು, ಕೆನಡಾ ಜೊತೆಯಲ್ಲೂ ಭಾರತ ಬೃಹತ್ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದೆ. ಈ ಒಪ್ಪಂದ ಭಾರತದ ಇಂಧನ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ, ಜೊತೆಯಲ್ಲೇ ಕೆನಡಾ ಕೂಡ ಒಪ್ಪಂದದ ಲಾಭ ಪಡೆಯಲಿದೆ.
ಅಮೆರಿಕ ಮತ್ತು ಕೆನಡಾ ನಡುವೆ ವ್ಯಾಪಾರ ಹಾಗೂ ಸಂಬಂಧ ಹಾಳಾಗಿ ಹೋಗುತ್ತಿದೆ. ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮತ್ತು ಕೆನಡಾ ನಡುವೆ ಪದೇ ಪದೇ ದೊಡ್ಡ ಗಲಾಟೆಗಳು ನಡೆದು ಎರಡೂ ದೇಶಗಳು ಸಂಬಂಧ ಮುರಿದುಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಹೀಗಿದ್ದಾಗ ಕೆನಡಾ ದಿಢೀರ್ ಭಾರತದ ಕಡೆಗೆ ಮುಖ ಮಾಡಿದೆ. ತನ್ನ ಗ್ರಾಹಕರ ನೆಲೆ ವೈವಿಧ್ಯಗೊಳಿಸಲು ಮತ್ತು ಅಮೆರಿಕಗೆ ಪೂರೈಕೆ ಮಾಡುತ್ತಿರುವ ತೈಲದ ಮೇಲಿನ ಅವಲಂಬನೆ ಕಡಿತಗೊಳಿಸಲು, ಭಾರತಕ್ಕೆ ಇಂಧನ ರಫ್ತು ಮಾಡಲು ಇದೀಗ ಮಹತ್ವದ ಒಪ್ಪಂದಕ್ಕೆ ಸಜ್ಜಾಗಿದೆ. ಈ ಬಗ್ಗೆ ಕೆನಡಾ ಇಂಧನ ಸಚಿವ ಟಿಮ್ ಹೊಡ್ಗ್‌ಸನ್ ಅವರು ಮಾಹಿತಿ ನೀಡಿದ್ದಾರೆ.

3 ವರ್ಷದಲ್ಲಿ ಹೀಗಿತ್ತು ಇಂಧನ ರಫ್ತು
ಅಂದಹಾಗೆ ಕೆನಡಾ ಮತ್ತು ಭಾರತದ ನಡುವೆ ಉತ್ತಮ ಸಂಬಂಧ ಇದೆ, ಆದರೆ ಈ ಹಿಂದೆ ಟ್ರುಡೋ ಇದ್ದಾಗ ಸಂಬಂಧ ಒಂದಷ್ಟು ಹಳಸಿತ್ತು. ಹೀಗಿದ್ದಾಗ ಕಳೆದ 3 ವರ್ಷದಲ್ಲಿ ಭಾರತದ ತೈಲ ಆಮದು ಸರಾಸರಿ ಶೇ. 2.5ರಷ್ಟು ಹೆಚ್ಚಾಗಿದೆ. ಮತ್ತೊಂದು ಕಡೆ 2025ರಲ್ಲಿ ಸಾಗಿಸಿದ ಎಲ್‌ಎನ್‌ಜಿ ಸರಕುಗಳು ಶೇಕಡಾ 6.3ರಷ್ಟು ಕುಸಿದಿದೆ. ಹೀಗಿದ್ದಾಗ ಭಾರತದ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿ, ಇನ್ನೂ ಹೆಚ್ಚಿನ ಇಂಧನ ರಫ್ತು ಮಾಡಲು ಕೆನಡಾ ಸಿದ್ಧತೆ ನಡೆಸಿದೆ. ಅದರಲ್ಲೂ ಯುರೋಪ್ ಒಕ್ಕೂಟದಿಂದ ಭಾರತದ ಜೊತೆಗೆ ಮಹತ್ವದ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ಬಂದ ದಿನವೇ ಕೆನಡಾ ಕೂಡ ಹೊಸ ಹೆಜ್ಜೆ ಇಡುತ್ತಿದೆ. ಈ ಬೆಳವಣಿಗೆ ಕೂಡ ಸಹಜವಾಗಿ ಅಮೆರಿಕದ ಕಣ್ಣು ಕೆಂಪಾಗಿಸುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಯುರೇನಿಯಂ ಪೂರೈಕೆಗೂ ಇದರಿಂದ ಸಹಕಾರಿ
ಹಾಗೇ ಪರಮಾಣು ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ಕೂಡ ಇದೀಗ ಭಾರತ ಹೊಸ ಹೊಸ ಪ್ಲಾನ್ ಮಾಡಿಕೊಂಡಿದೆ. ಇದು ಕೂಡ ಭಾರತಕ್ಕೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಇಂಧನ ನೀಡುವ ಎಲ್ಲಾ ಮುನ್ಸೂಚನೆ ಇದ್ದು, ಕೆನಡಾ ಮೂಲಕ ಯುರೇನಿಯಂ ಪೂರೈಕೆ ಕೂಡ ಹೆಚ್ಚಾಗುವ ಸಾಧ್ಯತೆ ಈಗ ದಟ್ಟವಾಗಿದೆ. ಕೆನಡಾ ತನ್ನ ನೆಲದಲ್ಲಿನ ಇಂಧನದ ಶೇಕಡಾ 98 ರಷ್ಟು ಒಬ್ಬ ಗ್ರಾಹಕರಿಗೆ ಒದಗಿಸುತ್ತಿತ್ತು. ಆದರೆ ಇದೀಗ ನಮ್ಮ ಪೂರೈಕೆ ವ್ಯವಸ್ಥೆಯಲ್ಲಿ ವೈವಿಧ್ಯತೆ ತರಲು ನಾವು ನಿರ್ಧರಿಸಿದ್ದೇವೆ ಎಂದಿದ್ದಾರೆ ಕೆನಡಾ ಇಂಧನ ಸಚಿವ ಟಿಮ್ ಹೊಡ್ಗ್‌ಸನ್. ಅಲ್ಲದೆ ಭಾರತದ ಜೊತೆ ಕೆಲಸ ಮಾಡುವ ಅವಕಾಶವನ್ನ ನಾವು ಎದುರು ನೋಡುತ್ತೇವೆ ಎಂದಿದ್ದಾರೆ ಕೆನಡಾ ಇಂಧನ ಸಚಿವ.
ಒಟ್ನಲ್ಲಿ ಭಾರತ ಇದೀಗ ಮಹತ್ವದ ಒಪ್ಪಂದಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ, ಹೊಸ ದಾರಿಯನ್ನು ಹುಡುಕುತ್ತಿದೆ. ಒಂದು ಕಡೆ ರಷ್ಯಾ ತೈಲ ಖರೀದಿಗೆ ಅಮೆರಿಕ ಅಡ್ಡಿ ಮಾಡಿದ ನಂತರ, ಯುರೋಪ್ ಮತ್ತು ಕೆನಡಾ ಎಂಬ ಎರಡು ದೈತ್ಯ ಒಕ್ಕೂಟಗಳ ಜೊತೆಯಲ್ಲಿ ಒಪ್ಪಂದವನ್ನ ಮಾಡಿಕೊಳ್ಳುವ ಮೂಲಕ ಅಮೆರಿಕ ಹೂಡಿದ್ದ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಿಟ್ಟಿದೆ ಭಾರತ.












Click it and Unblock the Notifications