'ಅಮೆರಿಕಕ್ಕೆ ಹೋದರೆ ಕಸ ಗುಡಿಸಿ, ಪಾತ್ರೆ ತೊಳೆಯಬೇಕು': US ಆಫರ್ ಬೇಡವೇ ಬೇಡ ಎಂದ ಭಾರತದ ಟೆಕ್ಕಿ
ಅಮೆರಿಕದಲ್ಲಿ ಕೆಲಸ ಮಾಡಬೇಕು, ಡಾಲರ್ ಲೆಕ್ಕದಲ್ಲಿ ಕೈತುಂಬಾ ಸಂಬಳ ಪಡೆಯಬೇಕು ಹಾಗೂ ಅಲ್ಲಿಯೇ ನೆಲೆಸಬೇಕು ಎಂಬುದು ಸಾವಿರಾರು ಭಾರತೀಯ ವೃತ್ತಿಪರರ ದೊಡ್ಡ ಕನಸು. ವಿದೇಶಿ ಕಂಪನಿಯಿಂದ ಆಫರ್ ಲೆಟರ್ ಬಂದರೆ ಸಾಕು, ಅದನ್ನ ಹಿಂದು ಮುಂದು ನೋಡದೆ ಒಪ್ಪಿಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬ ಯುವಕ ತನಗೆ ಅಮೆರಿಕದಲ್ಲಿ ಒದಗಿ ಬಂದ ಉದ್ಯೋಗ ಅವಕಾಶವನ್ನು ಕೇವಲ ಮನೆಗೆಲಸದ ಕಾರಣಕ್ಕಾಗಿ ನಿರಾಕರಿಸಿದ್ದಾನೆ.
ಹೌದು, ಇದು ಮೇಲ್ನೋಟಕ್ಕೆ ಅಚ್ಚರಿಯಾದರೂ ವಾಸ್ತವ. ಪ್ರಸಿದ್ಧ ಸ್ಟಾರ್ಟ್ಅಪ್ 'ಝಿಮ್ರಾಟ್' ಕಂಪನಿಯ ಸಹ-ಸಂಸ್ಥಾಪಕ ಉಜ್ವಲ್ ಅಸ್ತಾನಾ ಅವರು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಈ ವಿಚಾರ ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಭಾರತದಲ್ಲಿ ದುಡಿಯುವ ವರ್ಗಕ್ಕೆ ಸಾಕಷ್ಟು ಸೌಲಭ್ಯಗಳು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಉಜ್ವಲ್ ಅಸ್ತಾನಾ ಅವರ ಸಂಬಂಧಿಯೊಬ್ಬರಿಗೆ ತಮ್ಮದೇ ಕಂಪನಿಯಿಂದ ಅಮೆರಿಕಕ್ಕೆ ಇಂಟರ್ನಲ್ ವರ್ಗಾವಣೆಯಾಗುವ ಅವಕಾಶ ಸಿಕ್ಕಿತ್ತು. ಆದರೆ ಅವರು ಆ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಇದಕ್ಕೆ ಮುಖ್ಯ ಕಾರಣ, ಭಾರತದಲ್ಲಿ ಸಿಗುವ ಒಳ್ಳೆಯ ಜೀವನ ಅಮೆರಿಕದಲ್ಲಿ ಸಿಗುವುದಿಲ್ಲ ಎಂಬುದು. ಇಲ್ಲಿ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳು ಮನೆ ಬಾಗಿಲಿಗೆ ಬರುತ್ತವೆ, ಮನೆಗೆಲಸಕ್ಕೆ ಸಹಾಯಕರಿದ್ದಾರೆ, ಹಾಗೂ ಮನೆಗೇ ಬಂದು ಮಸಾಜ್ ಮಾಡುವ, ಬಟ್ಟೆ ಇಸ್ತ್ರಿ ಮಾಡುವ ಸೇವೆಗಳು ಸುಲಭವಾಗಿ ಲಭ್ಯವಿವೆ. ಪ್ರಸ್ತುತ ಸಿಂಗಲ್ ಆಗಿರುವ ಆತ, ಭಾರತದಲ್ಲಿ ಯಾವುದೇ ಕಿರಿಕಿರಿಯಿಲ್ಲದೆ 'ಕಿಂಗ್ ಸೈಜ್' ಜೀವನ ನಡೆಸುತ್ತಿದ್ದಾನೆ. ಇಂತಹ ಐಷಾರಾಮಿ ಜೀವನವನ್ನು ಬಿಟ್ಟು ಹೋಗಲು ಆ ಉದ್ಯೋಗಿ ಸಿದ್ಧನಿರಲಿಲ್ಲ.
ಅಮೆರಿಕದಲ್ಲಿ ಮನೆಗೆಲಸದ ಹೊರೆ
ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಾರ್ಮಿಕರ ವೆಚ್ಚ ಅತ್ಯಂತ ದುಬಾರಿ. ಅಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಹಾಗೂ ಅಡುಗೆ ಮಾಡುವುದು ಸೇರಿದಂತೆ ಎಲ್ಲಾ ಮನೆಗೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ಆ ಉದ್ಯೋಗಿಗೆ ಅಮೆರಿಕದಲ್ಲಿ ನೀಡಲಾಗುತ್ತಿದ್ದ ಸಂಬಳದಲ್ಲಿ ಈ ಎಲ್ಲಾ ಸೇವೆಗಳನ್ನು ದುಡ್ಡು ಕೊಟ್ಟು ಭರಿಸಲು ಕಷ್ಟವಾಗುತ್ತಿತ್ತು.
ಹಾಗಾಗಿ, ಆಫೀಸ್ ಕೆಲಸದ ಜೊತೆಗೆ ಮನೆಗೆಲಸದ ಹೊರೆ ಹೊತ್ತು, ತಾನೇ ಸ್ವತಃ ಎಲ್ಲವನ್ನೂ ಮಾಡಿಕೊಳ್ಳುವ ಬದಲು, ಭಾರತದಲ್ಲೇ ಇದ್ದು ಆರಾಮಾಗಿ ಬದುಕುವುದೇ ಲೇಸು ಎಂದು ಆತ ದೃಢವಾಗಿ ನಿರ್ಧರಿಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಉಜ್ವಲ್ ಅಸ್ತಾನಾ ಅವರ ಈ ಪೋಸ್ಟ್ ಎಕ್ಸ್ ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಲು ಶುರುಮಾಡಿದ್ದಾರೆ. ಹಲವರು ಆ ಉದ್ಯೋಗಿಯ ನಿರ್ಧಾರವನ್ನು ಟೀಕಿಸಿದ್ದು, "ಅಮೆರಿಕದ ಸಂಸ್ಕೃತಿಯನ್ನು ಕಲಿಯುವ ಹಾಗೂ ಹೊಸ ಅನುಭವ ಪಡೆಯುವ ದೊಡ್ಡ ಅವಕಾಶವನ್ನು ಆತ ಕಳೆದುಕೊಂಡಿದ್ದಾನೆ. ಮುಂದೆ ಅಲ್ಲಿ ರೋಬೋಟ್ಗಳೇ ಬಹುಪಾಲು ಕೆಲಸ ಮಾಡಲಿವೆ, ಆಗ ಆತ ತನ್ನ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಾನೆ" ಎಂದಿದ್ದಾರೆ.
A relative is refusing US opportunity in his own company.
— ujjawal (@ujjawalasthana) July 5, 2026
His reason - in the offered salary he will have to clean house himself, eat at home, won’t get 10 min grocery, won’t get at home massages - here he is single and lives king size.
Priorities.
ಆದರೆ, ಇನ್ನೊಂದು ವರ್ಗ ಆತನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ. "ಹಾಲು, ಪೇಪರ್, ದಿನಸಿ, ಮನೆಗೆಲಸದವರು, ಪ್ಲಂಬರ್, ಎಲೆಕ್ಟ್ರಿಷಿಯನ್ ಹೀಗೆ ಎಲ್ಲರೂ ನಮ್ಮ ಒಂದು ಕರೆಗೆ ಮನೆ ಬಾಗಿಲಿಗೆ ಬರುವ ಭಾರತ ನಿಜಕ್ಕೂ ಸ್ವರ್ಗವಿದ್ದಂತೆ. ಅಮೆರಿಕದಲ್ಲಿನ ಜೀವನ ವೆಚ್ಚ ನೋಡಿದರೆ, ಆತ ಅಲ್ಲಿ ಬಡವನಾಗಿಯೇ ಉಳಿಯುತ್ತಿದ್ದ.
ಜೀವನದ ಗುಣಮಟ್ಟ ಕೇವಲ ಸಂಬಳದಿಂದ ನಿರ್ಧಾರವಾಗುವುದಿಲ್ಲ, ನೆಮ್ಮದಿಯಿಂದ ನಿರ್ಧಾರವಾಗುತ್ತದೆ" ಎಂದು ಆತನ ಬೆಂಬಲಕ್ಕೆ ನಿಂತಿದ್ದಾರೆ. ಒಟ್ಟಿನಲ್ಲಿ, ಹಣಕ್ಕಿಂತ ನೆಮ್ಮದಿಯೇ ದೊಡ್ಡದು ಎನ್ನುವ ಈ ಉದ್ಯೋಗಿಯ ಕಥೆ ಹಲವರ ಆಲೋಚನೆಯನ್ನೇ ಬದಲಾಯಿಸಿದೆ.












Click it and Unblock the Notifications