ದೇಶದಲ್ಲಿ ತಗ್ಗಿದೆ ಕೊರೊನಾ; ವಾರದ ಪ್ರಕರಣಗಳಲ್ಲಿ 13.6% ಇಳಿಕೆ
ನವದೆಹಲಿ, ಆಗಸ್ಟ್ 23: ಭಾರತದಲ್ಲಿ ಬರೋಬ್ಬರಿ ಎರಡು ತಿಂಗಳ ನಂತರ ವಾರದ ಕೊರೊನಾ ಪ್ರಕರಣಗಳ ಶೇಕಡಾವಾರು ಸಂಖ್ಯೆ ತಗ್ಗಿದೆ. ಕೊರೊನಾ ಪ್ರಕರಣಗಳಲ್ಲಿ 13.6% ಇಳಿಕೆ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಆಗಸ್ಟ್ 16-22ರವರೆಗೆ ದೇಶದಲ್ಲಿ ಒಟ್ಟಾರೆ 2.2 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ ಏಳು ದಿನಗಳಿಗೆ ಹೋಲಿಸಿದರೆ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆ ಅವಧಿಯಲ್ಲಿ 2,55,819 ಪ್ರಕರಣಗಳು ದಾಖಲಾಗಿವೆ. ಜೂನ್ 28 ರಿಂದ ಜುಲೈ 4ನೇ ವಾರದ ನಂತರ ಮೊದಲ ಬಾರಿ ಇಷ್ಟು ಕಡಿಮೆ ಪ್ರಕರಣಗಳು ದಾಖಲಾಗಿದ್ದು, 11.4% ಕಡಿಮೆಯಾಗಿದೆ ಎಂದು ತಿಳಿಸಿದೆ.
166 ದಿನಗಳ ನಂತರ ಆಗಸ್ಟ್ 22ರಂದು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಭಾನುವಾರ 22,500 ಕೊರೊನಾ ಪ್ರಕರಣಗಳ ಸಂಖ್ಯೆ ದಾಖಲಾಗಿದೆ. ಕೊರೊನಾ ಮೂರನೇ ಅಲೆ ಆತಂಕದ ನಡುವೆ ಪ್ರಕರಣಗಳ ಸಂಖ್ಯೆ ತಗ್ಗಿರುವುದು ಸಮಾಧಾನ ತಂದಿದೆ.

ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ ಓಣಂ ಹಬ್ಬದ ಮಾರನೇ ದಿನ 10402 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಂದು ತಿಂಗಳ ನಂತರ ದಾಖಲಾದ ಅತಿ ಕಡಿಮೆ ಪ್ರಕರಣ ಇದಾಗಿದೆ. ಕೇರಳದಲ್ಲಿ ಜುಲೈ 19ರಂದು ಕೊನೆಯ ಬಾರಿಗೆ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ದಾಖಲಾಗಿದ್ದು, 9931 ಸೋಂಕಿನ ಪ್ರಕರಣಗಳು ಇದ್ದವು.
ಆಗಸ್ಟ್ 16-22ರ ವಾರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕೇರಳ ಕೂಡ ಒಂದಾಗಿತ್ತು. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಹಾಗೂ ಒಡಿಶಾದಲ್ಲಿ ಕಳೆದ ಏಳು ದಿನಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ತಗ್ಗಿದೆ. ಆದರೆ ಹಬ್ಬದ ಕಾರಣವಾಗಿ ಈ ರಾಜ್ಯಗಳಲ್ಲಿ ಕೊರೊನಾ ಪರೀಕ್ಷೆ ಪ್ರಮಾಣವೂ ಕಡುಮೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರದಿಂದ ಈಶಾನ್ಯ ರಾಜ್ಯಗಳಲ್ಲಿ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದ್ದು, ಅದು ಕೂಡ ಏಳು ದಿನಗಳಿಂದ ತಗ್ಗಿದೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿಯೂ ತಗ್ಗಿದೆ. ಪ್ರಸ್ತುತ ವಾರದಲ್ಲಿ, ದೇಶದಲ್ಲಿ 3111 ಮರಣ ದಾಖಲಾಗಿದೆ. ಅದಕ್ಕೂ ಹಿಂದಿನ ವಾರ 3334 ಪ್ರಕರಣಗಳು ದಾಖಲಾಗಿದ್ದು, ಇದರ ಪ್ರಮಾಣದಲ್ಲಿ 6.7% ತಗ್ಗಿದೆ.
ಆದರೆ ವಾರದಲ್ಲಿ ಮಹಾರಾಷ್ಟ್ರ, ಕೇರಳ ಹಾಗೂ ಒಡಿಶಾದಲ್ಲಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗಿವೆ.
ಇದರೊಂದಿಗೆ ಭಾರತದ ಔಷಧ ನಿಯಂತ್ರಕ ಜನರಲ್‌ನ ತಜ್ಞರ ಸಮಿತಿಯು ಶುಕ್ರವಾರ ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ವಯಸ್ಕರನ್ನು ಹೊರತುಪಡಿಸಿ, ಈ ಲಸಿಕೆಯನ್ನು 12 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೂ ಪರೀಕ್ಷಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಭಾರತದಲ್ಲಿ ಮಕ್ಕಳಿಗೆ ನೀಡಲಾಗುವ ಮೊದಲ ಲಸಿಕೆ ಇದಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ದೇಶದಲ್ಲಿ ಪುನರುತ್ಪತ್ತಿ ದರದಲ್ಲಿಯೂ ಇಳಿಕೆ
ದೇಶದಲ್ಲಿ ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಈ "ಪುನರುತ್ಪತ್ತಿ ದರ" ಸಾಂಕೇತಿಸುತ್ತದೆ. ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು ಎಂಬ ಸರಾಸರಿ ಅಂದಾಜನ್ನು ಇದು ಹೇಳುತ್ತದೆ. ಇದೀಗ ಈ ಪುನರುತ್ಪತ್ತಿ ದರ ತಗ್ಗಿದ್ದು, ಆಗಸ್ಟ್ 14-16ರವರೆಗೆ ಈ ಪುನರುತ್ಪತ್ತಿ ದರ 0.89 ಇರುವುದಾಗಿ ಲೆಕ್ಕ ಹಾಕಿದ್ದಾರೆ. ಆರ್ ದರ ಒಂದಕ್ಕಿಂತ ಕಡಿಮೆ ಇದ್ದರೆ, ಹೊಸದಾಗಿ ಸೋಂಕಿಗೊಳಗಾದವರ ಸಂಖ್ಯೆ ಹಿಂದಿನ ಅವಧಿಯಲ್ಲಿ ಸೋಂಕಿತ ಜನರ ಸಂಖ್ಯೆಗಿಂತ ಕಡಿಮೆಯಿರುತ್ತದೆ ಮತ್ತು ರೋಗದ ಪ್ರಮಾಣ, ಹರಡುವಿಕೆ ಕಡಿಮೆಯಿರುತ್ತದೆ ಎಂದರ್ಥ.
ಭಾರತದ ಆರ್ ದರ ಇದೀಗ ಸುಮಾರು 0.9ಗೆ ಕುಸಿದಿದೆ ಎಂದು ಸಂಶೋಧನೆ ನಡೆಸಿರುವ ಭಾರತೀಯ ಗಣಿತ ವಿಜ್ಞಾನ ಸಂಸ್ಥೆಯ ಸಿತ್ಬಾರಾ ಸಿನ್ಹಾ ತಮ್ಮ ಮಾಹಿತಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.












Click it and Unblock the Notifications