ಇಂಧನ ಖಾಲಿ, ಸಿಗ್ನಲ್ ಖತಂ; ಭಾರತದ ಮಂಗಳಯಾನ ಅಂತಿಮಯಾತ್ರೆ?
ಬೆಂಗಳೂರು, ಅ. 3: ಮಂಗಳ ಗ್ರಹಕ್ಕೆ ಹೋದ ಭಾರತದ ಮೊದಲ ಯೋಜನೆ ಎಂಬ ಐತಿಹಾಸಿಕ ದಾಖಲೆ ಬರೆದಿರುವ ಮಂಗಳಯಾನದ ಪ್ರಯಾಣ ಮುಗಿದಿರಬಹುದು ಎಂದು ಹೇಳಲಾಗುತ್ತಿದೆ. ಇಸ್ರೋ ಮೂಲಗಳ ಪ್ರಕಾರ ಮಾರ್ಸ್ ಆರ್ಬಿಟರ್ ಮಿಷನ್ (MoM) ನೌಕೆಯಲ್ಲಿ ಇಂಧನ ಖಾಲಿ ಮತ್ತು ಬ್ಯಾಟರಿ ಖಾಲಿ ಆಗಿದ್ದು, ಭೂಮಿಗೆ ಅದು ಸಿಗ್ನಲ್ ರವಾನಿಸುವುದನ್ನು ನಿಲ್ಲಿಸಿರುವುದು ತಿಳಿದುಬಂದಿದೆ.
ಆದರೆ, ಇಸ್ರೋ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಮಂಗಳಯಾನ ನೌಕೆಗೆ ಇಂಧನದ ಕೊರತೆ ಎದುರಾಗಿದೆ. ಇಂಧನಕ್ಕೆ ಅಗತ್ಯವಾದ ಬೆಳಕು ಸರಿಯಾಗಿ ಸಿಗುತ್ತಿಲ್ಲ. ಇದರ ಬ್ಯಾಟರಿಯ ಬಾಳಿಕೆ ಬಹುತೇಕ ಅಂತ್ಯಗೊಂಡಿದೆ ಎಂದು ಇಸ್ರೋದ ಕೆಲ ಅಧಿಕಾರಿಗಳು ಹೇಳಿದ್ದಾರೆ.
ಮಂಗಳಯಾನ ನೌಕೆಗೆ ಈ ಹಿಂದೆ ಬಹಳಷ್ಟು ಬಾರಿ ಗ್ರಹಣ ಸ್ಥಿತಿ ಎದುರಾಗಿತ್ತು. ಅಂದರೆ ಬೆಳಕು ಸಿಗದ ಸ್ಥಿತಿ. ಸೆಟಿಲೈಟ್‌ನ ಬ್ಯಾಟರಿ ಶಕ್ತಿ ಸೂರ್ಯನ ಬೆಳಕಿಲ್ಲದೇ 100 ನಿಮಿಷ ಕಾಲ ಇರಬಲ್ಲುದು. ಆದರೆ, ಅದಕ್ಕಿಂತ ದೀರ್ಘ ಅವಧಿಯವರೆಗೆ ಬೆಳಕಿಲ್ಲದೇ ಬ್ಯಾಟರಿ ಬಾಳಿಕೆ ಬರುವುದಿಲ್ಲ. ಇದನ್ನು ತಪ್ಪಿಸಲು ನೌಕೆಯನ್ನು ಬೇರೆ ಕಕ್ಷೆಗೆ ಸೇರಿಸಲು ಪ್ರಯತ್ನ ನಡೆದಿತ್ತು. ಆದರೆ, ಒಮ್ಮೆ ನಿರಂತರ ಏಳೂವರೆ ಗಂಟೆಗಳ ಕಾಲ ಗ್ರಹಣಕ್ಕೆ ಸಿಲುಕಿತ್ತು. ಇದರಿಂದ ಮಂಗಳಯಾನ ನೌಕೆಯ ಇಂಧನ ಮತ್ತು ಬ್ಯಾಟಿರಿ ಸಂಪೂರ್ಣ ನಶಿಸಿಹೋಗಿರಬಹುದು ಎಂದು ಹೇಳಲಾಗುತ್ತಿದೆ.

ಸಾರ್ಥಕ ಪ್ರಯಾಣ
ಮೂಲಗಳ ಪ್ರಕಾರ, ನೌಕೆಯಿಂದ ಭೂಮಿಗೆ ಸಿಗ್ನಲ್ ಬರುವುದು ನಿಂತುಹೋಗಿದೆ. ಅದರ ಸಂಪರ್ಕ ಇನ್ನು ಸಾಧ್ಯವಾಗುವುದಿಲ್ಲ. ಇದೇನೇ ಇದ್ದರೂ ಮಂಗಳಯಾನ ತನ್ನ ಉದ್ದೇಶಕ್ಕಿಂತ ಬಹಳ ಸುದೀರ್ಘ ಪ್ರಯಾಣ ಮಾಡಿದೆ. ಮೂಲದಲ್ಲಿ ಮಂಗಳಯಾನ ಆರು ತಿಂಗಳು ಮಾತ್ರ ಕಾರ್ಯನಿರ್ವಹಿಸುವ ಗುರಿ ಇಡಲಾಗಿತ್ತು. ಆದರೆ, ಅದನ್ನು ಮೀರಿ 8 ವರ್ಷ ಕಾಲ ಅದು ಪ್ರಯಾಣ ಮಾಡಿದೆ. ಅಷ್ಟರಮಟ್ಟಿಗೆ ಮಂಗಳಯಾನ ಪ್ರಯಾಣ ಸಾರ್ಥಕ ಎನಿಸಿದೆ.
ಕಡಿಮೆ ವೆಚ್ಚದ ಯಾನ
ಭಾರತದ ಮಂಗಳಯಾನ ಯೋಜನೆ ಬಹಳ ಕಡಿಮೆ ಖರ್ಚಿನಲ್ಲಿ ರೂಪುಗೊಂಡಿತ್ತು. ವಿಶ್ವದ ಯಾವುದೇ ದೇಶ ಕೂಡ ಇಷ್ಟು ಕಡಿಮೆ ವೆಚ್ಚದಲ್ಲಿ ಮಂಗಳಗ್ರಹಕ್ಕೆ ನೌಕೆ ಕಳುಹಿಸಿದ್ದಿಲ್ಲ. ಕಡಿಮೆ ವೆಚ್ಚದ ಜೊತೆಗೆ ಕಡಿಮೆ ಅವಧಿಯಲ್ಲಿ ಈ ಯೋಜನೆ ನೆರವೇರಿತ್ತು. ಎಂಒಎಂ ನೌಕೆ ಐದು ವೈಜ್ಞಾನಿಕ ಉಪಕರಣಗಳನ್ನು (Payloads) ಹೊತ್ತು ಹೋಗಿತ್ತು. ಮಂಗಳ ಗ್ರಹದ ನೆಲ, ಆಕಾರ, ವಾತಾವರಣ ಪ್ರಕ್ರಿಯೆ, ಮೇಲ್ಮೈ ಉಷ್ಣಾಂಶ ಇತ್ಯಾದಿ ದತ್ತಾಂಶಗಳನ್ನು ಕಲೆಹಾಕುತ್ತಿತ್ತು.
ಎರಡನೇ ಮಂಗಳಯಾನ
ಇದೇ ವೇಳೆ, ಭಾರತದ ಎರಡನೇ ಮಂಗಳಯಾನ ಯೋಜನೆಗೆ ಇಸ್ರೋ ಪ್ರಯತ್ನ ನಡೆಸುತ್ತಿದೆ. 2016ರಲ್ಲೇ ಎರಡನೇ ಮಂಗಳಯಾನ ಬಗ್ಗೆ ಉದ್ದೇಶ ಪ್ರಕಟಿಸಲಾಗಿತ್ತಾದರೂ ಇಸ್ರೋಗೆ ಬೇರೆ ಬೇರೆ ಪ್ರಮುಖ ಯೋಜನೆಗಳು ಮಧ್ಯ ಮಧ್ಯ ಸೇರಿಕೊಂಡಿವೆ.

ಗಗನಯಾನ, ಚಂದ್ರಯಾನ-3, ಆದಿತ್ಯ-ಎಲ್1 ಯೋಜನೆಗಳಿಗೆ ಸದ್ಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೂ ಈ ನಡುವೆ ಮಂಗಳಯಾನ-2 ಯೋಜನೆಗೆ ರೂಪುರೇಖೆ ಹಾಕಲು ವಿಜ್ಞಾನಿಗಳೊಂದಿಗೆ ಇಸ್ರೋ ಸಮಾಲೋಚಿಸುತ್ತಿದೆ.
ಎರಡನೇ ಮಾರ್ಸ್ ಮಿಷನ್‌ನಲ್ಲಿ ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು, ಮಂಗಳದ ಯಾವ ಭಾಗಕ್ಕೆ ಹೋಗಬಹುದು ಎಂಬಿತ್ಯಾದಿಯನ್ನು ನಿರ್ಣಯಿಸುವ ಕೆಲಸ ಆಗಬೇಕು.
(ಒನ್ಇಂಡಿಯಾ ಸುದ್ದಿ)












Click it and Unblock the Notifications