ಭಾರತವೇ ನಂ.1: ಜನಸಂಖ್ಯೆಯಲ್ಲಿ ಚೀನಾ ನಂ.2!
ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾ ದೇಶವನ್ನೇ ಹಿಂದಿಕ್ಕಿದೆ. ಇಷ್ಟುದಿನ ಜನಸಂಖ್ಯೆ ವಿಚಾರದಲ್ಲಿ ನಂಬರ್ 1 ಆಗಿದ್ದ ಚೀನಾ, ಇದೀಗ ನಂಬರ್ 2 ಸ್ಥಾನಕ್ಕೆ ಕುಸಿದಿದೆ. ಹೌದು ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ ಭಾರತ ಈಗ ಚೀನಾಗಿಂತ 2.9 ಮಿಲಿಯನ್ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂದು ಘೋಷಿಸಿದೆ.
ಜನಸಂಖ್ಯೆ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ದೊಡ್ಡ ಪೈಪೋಟಿ ಇತ್ತು. ಕೆಲವು ವರ್ಷಗಳ ಹಿಂದೆಯೇ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾವನ್ನ ಹಿಂದಿಕ್ಕುವ ನಿರೀಕ್ಷೆ ಮೂಡಿತ್ತು. ಆದ್ರೆ ಅದು ಈಗ ಅಧಿಕೃತವಾಗಿ ಸಾಧ್ಯವಾಗಿದ್ದು, ಚೀನಾ ಸೋತು ಹೋಗಿದೆ. ಮೊದಲೇ ಜನಸಂಖ್ಯೆ ಕುಸಿತದ ಭೀತಿಯಲ್ಲಿರುವ ಡ್ರ್ಯಾಗನ್ ರಾಷ್ಟ್ರ, ಈ ಸುದ್ದಿಯಿಂದ ಮತ್ತಷ್ಟು ಭಯದಲ್ಲಿ ಮುಳುಗಿದೆ. 2020ರ ನಂತರ ಅಂದರೆ ಕೊರೊನಾ ಅಪ್ಪಳಿಸಿದ ಬಳಿಕ ಚೀನಾ ಜನಸಂಖ್ಯೆ ವಿಚಾರದಲ್ಲಿ ಭಾರಿ ಕುಸಿತ ದಾಖಲಿಸುತ್ತಾ, ಅಪಾಯಕ್ಕೆ ಸಿಲುಕಿದೆ.

ಭಾರತದ ಈಗಿನ ಜನಸಂಖ್ಯೆ ಎಷ್ಟು?
ವಿಶ್ವಸಂಸ್ಥೆ ನೀಡಿರುವ ಲೆಕ್ಕಾಚಾರದ ಪ್ರಕಾರ ಈಗ ಭಾರತದಲ್ಲಿ ಒಟ್ಟು 1,428.6 ಮಿಲಿಯನ್ ಜನಸಂಖ್ಯೆ ಇದೆ. ಆದರೆ ಚೀನಾದಲ್ಲಿ ಜನಸಂಖ್ಯೆ 1,425.7 ಮಿಲಿಯನ್‌ಗೆ ಕುಸಿತ ಕಂಡಿದೆ. ಈ ಮೂಲಕ 2.9 ಮಿಲಿಯನ್ ಅಂದರೆ 29 ಲಕ್ಷ ಜನಸಂಖ್ಯೆ ವ್ಯತ್ಯಾಸದ ಆಧಾರದಲ್ಲಿ ಭಾರತವೇ ಜಗತ್ತಿನ ನಂಬರ್ 1 ದೇಶ ಎಂಬ ಪಟ್ಟ ಗಿಟ್ಟಿಸಿಕೊಂಡಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ ಭಾರತ. ನೆರೆಯ ಚೀನಾ ಜನಸಂಖ್ಯೆ ಕುಸಿತದ ವಿಚಾರದಲ್ಲಿ ಮತ್ತೆ ಕುಗ್ಗಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಚೀನಾ ತಪ್ಪು, ಚೀನಾಗೆ ಕಂಟಕ!
ಚೀನಾದಲ್ಲಿ ಹೀಗೆ ದಿಢೀರ್ ಇಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ಕಾಣಲು ಕಾರಣ ತಾನೇ ಕೈಗೊಂಡಿದ್ದ ನಿರ್ಧಾರ. ಚೀನಾದಲ್ಲಿ ಒಂದು ಜೋಡಿಗೆ ಒಂದೇ ಮಗು ಎಂಬ ನಿಯಮ ಇತ್ತು. ಹೀಗಾಗಿ ಹಲವು ದಶಕಗಳ ಕಾಲ ಇಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮ ಇತ್ತು. ಈ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ದಾಖಲಿಸಿತ್ತು ಚೀನಾ. ಈ ಸತ್ಯ ಅರ್ಥವಾಗಿದ್ದೇ ತಡ ಎಚ್ಚೆತ್ತ ಚೀನಾ, ಕೆಲವು ವರ್ಷಗಳ ಹಿಂದೆ ತನ್ನ 'ಒಂದು ಮಗು' ನೀತಿ ಬದಲಿಸಿ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗಿತ್ತು.

ಹಿಂದೆಯೂ ಇದೇ ಸ್ಥಿತಿ ಬಂದಿತ್ತು!
ಇನ್ನೊಂದು ಕಡೆ ಚೀನಿಯರ ನಾಡಲ್ಲಿ ಜನಸಂಖ್ಯೆ ಕುಸಿತಕ್ಕೆ ಮುಖ್ಯ ಅಂಶ ವೃದ್ಧರ ಸಂಖ್ಯೆ ಹೆಚ್ಚಾಗಿರುವುದು. ಜನನ ದರದಲ್ಲಿ ಭಾರಿ ಇಳಿಕೆ ಕಂಡಿರುವುದು ಕೂಡ ಚೀನಾಗೆ ಭಯ ಹುಟ್ಟಿಸಿದೆ. ಸಾಮೂಹಿಕ ಕೃಷಿ ಹಾಗೂ ಕೈಗಾರಿಕೀಕರಣಕ್ಕಾಗಿ ಮಾವೋ ಅಭಿಯಾನವು ಪ್ರಾರಂಭವಾದಾಗ 1950ರ ದಶಕದ ಉತ್ತರಾರ್ಧದಲ್ಲಿ ಗ್ರೇಟ್ ಲೀಪ್ ಫಾರ್ವರ್ಡ್ ಸಮಯದಲ್ಲಿ ಚೀನಾ ಜನಸಂಖ್ಯೆ ಕುಸಿತ ದಾಖಲಿಸಿತ್ತು ಎನ್ನಲಾಗಿದೆ. ಅದನ್ನ ಬಿಟ್ಟರೆ ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದ್ದು, ಚೀನಾ ಭವಿಷ್ಯ ಡೋಲಾಯಮಾನ ಪರಿಸ್ಥಿತಿ ತಲುಪಿದೆ.
ಚೀನಾ ಆರ್ಥಿಕತೆಗೆ ಪೆಟ್ಟು?
ಯಾವುದೇ ದೇಶದ ಆರ್ಥಿಕತೆ ನಿರ್ಧರಿಸುವುದು ಆ ದೇಶದ ನೈಸರ್ಗಿಕ ಸಂಪತ್ತು ಮತ್ತು ಶ್ರಮಿಕ ವರ್ಗದ ಆಧಾರದ ಮೇಲೆ. ಜನಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇರಬೇಕೆ, ಹೆಚ್ಚು-ಕಮ್ಮಿ ಆದರೆ ಆರ್ಥಿಕತೆಗೆ ಅದರ ನೇರ ಪೆಟ್ಟು ಪಕ್ಕಾ. ಈ ಹಿಂದೆ ಚೀನಾದಲ್ಲಿ ಭಾರಿ ಜನಸಂಖ್ಯೆ ಇತ್ತು. ಆದರೆ ದಿಢೀರ್ ಕುಸಿತ ಕಾಣುತ್ತಿರುವುದು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಹಾಗೂ ಬಳಕೆದಾರರ ಕೊರತೆ ಎದುರಾಗುವ ಮುನ್ಸೂಚನೆ ನೀಡುತ್ತಿದೆ. 2ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಕ್ಕೆ ಇದು ತಲೆನೋವು ತರಿಸಿದೆ.












Click it and Unblock the Notifications