India: ಅಕ್ಕಿ ಉತ್ಪಾದನೆಯಲ್ಲಿ ಚೀನಾ ಹಿಂದಿಕ್ಕಿದ ಭಾರತ: ಜಾಗತಿಕವಾಗಿ ಅಗ್ರಸ್ಥಾನ
ನವದೆಹಲಿ: ಕೃಷಿ ಪ್ರಧಾನ ಕುಟುಂಬಗಳು ಹೆಚ್ಚಿರುವ ಭಾರತವು ಜನಸಂಖ್ಯೆಯಲ್ಲಿ ಮಾತ್ರವಲ್ಲದೇ, ಅಕ್ಕಿ ಉತ್ಪಾದನೆಯಲ್ಲೂ ಚೀನಾ ದೇಶವನ್ನು ಹಿಂದಿಕ್ಕಿದೆ. ಅಕ್ಕಿ ಉತ್ಪಾದನೆಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಚೀನಾವನ್ನು ನಂತರದ ಸ್ಥಾನದಲ್ಲಿ ಉಳಿಯುವಂತೆ ಮಾಡಿದೆ. ವಾರ್ಷಿಕ ಒಟ್ಟು ಎಷ್ಟು ಅಕ್ಕಿ ಉತ್ಪಾದನೆ ಆಗಿದೆ? ಪ್ರಮುಖ ರಾಜ್ಯವಾರು ಅಕ್ಕಿ ಉತ್ಪಾದನೆ ವಿವರ ಇಲ್ಲಿದೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, 2024-2025ರಲ್ಲಿ ಭಾರತದ ಅಕ್ಕಿ ಉತ್ಪಾದನೆಯು 150.18 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಚೀನಾದ 145.28 ಮಿಲಿಯನ್ ಟನ್‌ಗಳಷ್ಟು ಈ ವರ್ಷ ಉತ್ಪಾದಿಸಿದೆ. ಈ ಮೂಲಕ ಭಾರತವು ಅಕ್ಕಿ ಉತ್ಪಾದನೆಯಲ್ಲಿ ಜಾಗತಿಕ ಅಗ್ರ ರಾಷ್ಟ್ರವಾಗಿ ಹೊರ ಹೊಮ್ಮಿದೆ. ವಿದೇಶಗಳ ಮಾರುಕಟ್ಟೆಗಳಿಗೂ ಭಾರತದಿಂದ ಅಕ್ಕಿ ಪೂರೈಕೆ ಆಗುತ್ತಿದೆ ಎಂದು ಅವರು ತಿಳಿಸಿದರು.

ವಿಶ್ವದಾದ್ಯಂತ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶಗಳು ಯಾವುವು
ಈವರೆಗೆ ಅಕ್ಕಿ ಉತ್ಪಾದನೆಯಲ್ಲಿ ಚೀನಾ ಮುಂದಿತ್ತು. ಇದೀಗ ಆ ಸ್ಥಾನವನ್ನು ಭಾರತ ಕಸಿದುಕೊಂಡಿದೆ. ಕೃಷಿಯಲ್ಲಿ ಅದರಲ್ಲೂ ಅಕ್ಕಿ ಉತ್ಪಾದನೆಯನ್ನು ಹೆಚ್ಚಿಸಿ ಸಾಧನೆ ಮಾಡಿದೆ. ವಿದೇಶಗಳಿಗೆ ಪೂರೈಕೆದಾರ ದೇಶವಾಗಿ ಹೊರ ಹೊಮ್ಮಿದೆ. ಇದರೊಂದಿಗೆ ಹೆಚ್ಚು ಅಕ್ಕಿ ಉತ್ಪಾದಿಸುವ ಇತರ ದೇಶಗಳ ವಿವರ ಇಲ್ಲಿದೆ.
1. ಭಾರತ - 150 ಮಿಲಿಯನ್ ಟನ್‌ಗಳು
2.ಚೀನಾ - 145 ಮಿಲಿಯನ್ ಟನ್‌ಗಳು
3. ಬಾಂಗ್ಲಾದೇಶ - 36.6 ಮಿಲಿಯನ್ ಟನ್‌ಗಳು
4. ಇಂಡೋನೇಷ್ಯಾ - 34.1 ಮಿಲಿಯನ್ ಟನ್‌ಗಳು
5. ವಿಯೆಟ್ನಾಂ - 27 ಮಿಲಿಯನ್ ಟನ್‌ಗಳು
ಇನ್ನೂ ಎಕಾನಾಮಿಕ್ ಸರ್ವೇ ಪ್ರಕಾರ, 2023-2024ರಲ್ಲಿ ಭಾರತದಲ್ಲಿ ತೆಲಂಗಾಣ ರಾಜ್ಯದಲ್ಲಿ ವಾರ್ಷಿಕ 16.63 ಮಿಲಿಯನ್ ಟನ್ (ಶೇ.12.17 ಪಾಲು), ಉತ್ತರ ಪ್ರದೇಶ 15.72 MT (11.50 ಪಾಲು) ಮತ್ತು ಪಶ್ಚಿಮ ಬಂಗಾಳ 15.12 MT (11.06 ಪಾಲು) ಹೊಂದಿವೆ. ಕರ್ನಾಟಕದಲ್ಲಿ 4.6 MT ಅಕ್ಕಿ ಉತ್ಪಾದಿಸಲಾಗಿತ್ತು.
ಐಸಿಎಆರ್ ಬೀಜ ತಳಿಗಳ ಲೋಕಾರ್ಪಣೆ
ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧಿಪಡಿಸಿದ 25 ಕ್ಷೇತ್ರ ಬೆಳೆಗಳ 184 ಸುಧಾರಿತ ಪ್ರಭೇದಗಳನ್ನು ಲೋಕಾರ್ಪಣೆಗೊಳಿಸಿದರು. ಹೊಸದಾಗಿ ಬಿಡುಗಡೆಯಾದ ತಳಿಗಳಲ್ಲಿ 122 ಧಾನ್ಯಗಳು, 11 ಮೇವಿನ ಬೆಳೆಗಳು, ಆರು ದ್ವಿದಳ ಧಾನ್ಯಗಳು, 13 ಎಣ್ಣೆ ಕಾಳುಗಳು, ಆರು ಕಬ್ಬಿನ ಪ್ರಭೇದಗಳು, 24 ಹತ್ತಿ ತಳಿಗಳು ಹಾಗೂ ತಂಬಾಕಿನ ತಲಾ ಒಂದು ವಿಧಗಳಿವೆ. ಇವೆಲ್ಲವು ರೈತರ ಆದಾಯ ಹೆಚ್ಚಿಸುವ ಬೆಳೆಗಳಾಗಿವೆ. ಅವುಗಳನ್ನು ಶೋಧಿಸುವ ಮೂಲಕ ರೈತರಿಗೆ ಐಸಿಎಆರ್ ಗುಡ್ ನ್ಯೂಸ್ ಕೊಟ್ಟಿದೆ.
ಕಡಿಮೆ ನಿರ್ವಹಣೆ ಮೂಲಕ ಹೆಚ್ಚಿನ ಇಳುವರಿ ನೀಡುವ ತಳಿ-ಬೀಜಗಳ ಅಭಿವೃದ್ಧಿಯಲ್ಲಿ ಭಾರತ ಯಶಸ್ಸು ಸಾಧಿಸಿದೆ. ಹೊಸ ಪ್ರಭೇದಗಳು ವಿಳಂಬವಿಲ್ಲದೆ ರೈತರನ್ನು ತಲುಪುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ಹೊಸ ತಳಿಯ ಬೀಜಗಳನ್ನು ಬಿತ್ತಿ ರೈತರು ಅಧಿಕ ಆದಾಯ ಪಡೆಯುವಂತಾಗಬೇಕು ಎಂದರು.
ಪ್ರತಿಯೊಬ್ಬ ರೈತರ ಹೊಲದಲ್ಲಿಯೂ ಉತ್ತಮ ಗುಣಮಟ್ಟದ ಬೀಜಗಳು ಲಭ್ಯವಾಗುವಂತಾಗಬೇಕು. ಸುಧಾರಿತ ಬೀಜಗಳ ಸಂಶೋಧನೆಯಿಂದಾಗಿ ದೇಶದ ರೈತರಿಂದ ಉತ್ಪಾದನೆ ಹೆಚ್ಚಾಗುತ್ತದೆ. ಉತ್ತಮ ಗುಣಮಟ್ಟದ ಫಸಲು, ಇಳುವರಿ ಹೆಚ್ಚಾಗುತ್ತದೆ ಎಂದು ಚೌಹಾಣ್ ತಿಳಿಸಿದರು. ಇದರೊಂದಿಗೆ ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಿಸುವತ್ತ ಒತ್ತು ನೀಡಬೇಕು. ಇದರಿಂದ ದೇಶವು ಸ್ವಾವಲಂಬಿ ಆಗಲು ಸಾಧ್ಯವಾಗುತ್ತದೆ ಎಂದು ಕೃಷಿ ವಿಜ್ಞಾನಿಗಳಿಗೆ ಕಿವಿ ಮಾತು ಹೇಳಿದರು.
ಸುಸ್ಥಿತಿಯಲ್ಲದ ಹವಾಮಾನ, ಕಡಿಮೆ ನೀರು ಪಡೆದರೂ ಹೆಚ್ಚಿನ ಇಳುವರಿ ನೀಡುವ 'ಹವಾಮಾನ-ನಿರೋಧಕ ಬೀಜಗಳ' ಅಭಿವೃದ್ಧಿಯಿಂದ ದೇಶವು ಕೃಷಿಯಲ್ಲಿ ಹೊಸ ಹಂತ ತಲುಪಿದೆ. ಇದಕ್ಕೆ ಕೃಷಿ ವಿಜ್ಞಾನಿಗಳು, ಸಂಶೋಧನಾ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು, ಖಾಸಗಿ ಬೀಜ ಕಂಪನಿಗಳ ನಿರಂತರ ಪ್ರಯತ್ನ ಕಾರಣವಾಗಿದೆ ಎಂದು ಶ್ಲಾಘಿಸಿದರು.












Click it and Unblock the Notifications