India and European Union: ಭಾರತ ಮತ್ತು ಯುರೋಪ್ ನಡುವೆ ಮಹತ್ವದ ವ್ಯಾಪಾರ ಒಪ್ಪಂದ, ಅಂತಿಮ ಮಾತುಕತೆಗೆ ಕ್ಷಣಗಣನೆ
ಭಾರತ ಮತ್ತು ಯುರೋಪ್ ದೇಶಗಳ ನಡುವೆ ಗಟ್ಟಿಯಾದ ಸಂಬಂಧ ಇದ್ದು, ಅಮೆರಿಕ ಮೀರಿಸುವ ರೀತಿ ಎರಡೂ ಒಕ್ಕೂಟಗಳು ವ್ಯಾಪಾರ ಮತ್ತು ವಹಿವಾಟು ನಡೆಸುತ್ತವೆ. ಅದರಲ್ಲೂ ಪ್ರತಿವರ್ಷವೂ ಭಾರತ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಯುರೋಪ್ ನೆಲಕ್ಕೆ ರಫ್ತು ಮಾಡಿ ಲಾಭ ಮಾಡುತ್ತಿದೆ. ಹಾಗೇ ಯುರೋಪ್ ಒಕ್ಕೂಟಕ್ಕೂ ಭಾರತದ ಜೊತೆಗಿನ ವ್ಯಾಪಾರ ಸಾಕಷ್ಟು ಲಾಭ ನೀಡುತ್ತಿದೆ. ಹೀಗಾಗಿ ಎರಡೂ ಒಕ್ಕೂಟಗಳು ಅದ್ಭುತವಾಗಿ ತಮ್ಮ ಆರ್ಥಿಕ ಚಟುವಟಿಕೆ ನಡೆಸುತ್ತಿವೆ. ಈಗ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕೆಲಸಕ್ಕೆ ಎರಡೂ ಕಡೆಯ ನಾಯಕರು ಕೈ ಹಾಕಿದ್ದಾರೆ.
ಯುರೋಪ್ ಒಕ್ಕೂಟ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಸಮಯದಲ್ಲೇ ಇದೀಗ ಭಾರತದ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತ ಮತ್ತು ಯುರೋಪ್ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಸಾಗಿದ್ದು, ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ವಿಶೇಷ ಅತಿಥಿಗಳಾಗಿ ಭಾರತಕ್ಕೆ ಭೇಟಿ ಕೊಡುತ್ತಿರುವ ಯುರೋಪ್ ಒಕ್ಕೂಟದ ಅಧ್ಯಕ್ಷೆ ಹಾಗೂ ಅಧ್ಯಕ್ಷರು ಭಾರತದಲ್ಲಿ ವ್ಯಾಪಾರ ಮಾತುಕತೆ ಕೂಡ ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ಈ ಮಾತುಕತೆಗೆ ರಾಷ್ಟ್ರ ರಾಜಧಾನಿ ದೆಹಲಿ ಎಲ್ಲಾ ರೀತಿ ಸಜ್ಜುಗೊಂಡಿದೆ.

16ನೇ ಭಾರತ & ಯುರೋಪ್ ಒಕ್ಕೂಟದ ಶೃಂಗಸಭೆ
ಅಂದಹಾಗೆ ಮೊದಲೇ ಹೇಳಿದಂತೆ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ವಿಶೇಷ ಅತಿಥಿಗಳಾಗಿ ಭಾರತಕ್ಕೆ ಭೇಟಿ ಕೊಡುತ್ತಿರುವ ಯುರೋಪ್ ಒಕ್ಕೂಟದ ಅಧ್ಯಕ್ಷೆ ಮತ್ತು ಅಧ್ಯಕ್ಷರು, ಅದಕ್ಕೂ 72 ಗಂಟೆ ಮೊದಲು ಭಾರತದ ಜೊತೆಗೆ ಮಹತ್ವದ ಆನ್‌ಲೈನ್ ಮೀಟಿಂಗ್ ಮಾಡಿದ್ದಾರೆ. ಜನವರಿ 27ಕ್ಕೆ ನಿಗದಿಯಾಗಿರುವ ಭಾರತ ಮತ್ತು ಯುರೋಪ್ ಒಕ್ಕೂಟದ ಶೃಂಗಸಭೆಗೆ ಮೊದಲು ಹಲವು ವಿಚಾರಗಳ ಬಗ್ಗೆ ಚರ್ಚೆಯನ್ನ ನಡೆಸಲಾಗಿದೆ.
16ನೇ ಭಾರತ ಮತ್ತು ಯುರೋಪ್ ಒಕ್ಕೂಟದ ಶೃಂಗಸಭೆ ಇದಾಗಿದ್ದು, ಈ ಬಾರಿ ದೊಡ್ಡ ಮಟ್ಟದ ವ್ಯಾಪಾರ ಒಪ್ಪಂದಕ್ಕೆ ಎರಡೂ ಕಡೆಯ ನಾಯಕರು ಸಹಿ ಹಾಕುವ ನಿರೀಕ್ಷೆ ಇದೆ. ಅಲ್ಲದೆ ಹೊಸ ರಕ್ಷಣಾ ಹಾಗೂ ಭದ್ರತಾ ಪಾಲುದಾರಿಕೆ, ಮಾಹಿತಿ ಭದ್ರತೆ ಬಗ್ಗೆ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆ ಇದೆ. ಹಾಗೇ ಈ ಶೃಂಗಸಭೆ ಪರೋಕ್ಷವಾಗಿ ಭಾರತದ ಶತ್ರು ರಾಷ್ಟ್ರಗಳಿಗೆ ದೊಡ್ಡದಾಗಿ ಸಂದೇಶವನ್ನು ಕೊಡುವ ನಿರೀಕ್ಷೆ ಜೊತೆಗೆ, ಭಾರತದ ಆರ್ಥಿಕತೆಗೆ ಇನ್ನಷ್ಟು ಬಲ ತುಂಬಲಿದೆ.












Click it and Unblock the Notifications