India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
ದೆಹಲಿ ಮಾರ್ಚ್ 28: ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹಲವಾರು ಇರಬಹುದು. ಆದರೆ ಬೆಚ್ಚಿ ಬೀಳಿಸುವಂತ ವಿಷಯ ಅಂದರೆ ದೇಶದಲ್ಲಿ ವಿದ್ಯಾವಂತ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿರುವುದು.
ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು ದೆಹಲಿ ಮೂಲದ ಇನ್‌ಸ್ಟಿಟ್ಯೂಟ್ ಆಪ್ ಹ್ಯೂಮನ್ ಡೆವಲಪ್‌ಮೆಂಟ್(ಐಎಚ್‌ಡಿ) ಸಹಯೋಗದಲ್ಲಿ ಸಿದ್ದಪಡಿಸಿರುವ 'ಭಾರತ ಉದ್ಯೋಗ ವರದಿ 2024'ದಲ್ಲಿ ದೇಶದ ನಿರುದ್ಯೋಗ ಪ್ರಮಾಣ ಕುರಿತು ಕಳವಳ ವ್ಯಕ್ತಪಡಿಸಲಾಗಿದೆ.

ಎನ್‌ಡಿಎ ಅವಧಿಯಲ್ಲಿ ಕೇಂದ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂಬ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆರೋಪದ ನಡುವೆಯೇ ಭಾರತದಲ್ಲಿ ವಿದ್ಯಾವಂತ ಯುವಸಮೂಹದಲ್ಲಿನ ನಿರುದ್ಯೋಗ ಪ್ರಮಾಣ ಏರುಗತಿಯಲ್ಲಿದೆ. ಜೊತೆಗೆ ದೇಶದಲ್ಲಿ ನಿರುದ್ಯೋಗಿಗಳ ಪೈಕಿ ಶೇ.83ರಷ್ಟು ಪಾಲು ಯುವಸಮೂಹದ್ದೇ ಆಗಿದೆ ಎಂಬ ಆತಂಕಕಾರಿ ಅಂಕಿ ಅಂಶಗಳು ಬಹಿರಂಗಗೊಂಡಿವೆ.
ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರ್ ಈ ವರದಿ ಬಿಡುಗಡೆ ಮಾಡಿದ್ದಾರೆ. 2000ನೇ ಇಸವಿಯಲ್ಲಿ ಭಾರತದಲ್ಲಿ ವಿದ್ಯಾವಂತ ಸಮೂಹದಲ್ಲಿನ ನಿರುದ್ಯೋಗ ಪ್ರಮಾಣ ಶೇ.54.2ರಷ್ಟಿತ್ತು. 2022ರ ವೇಳೆಗೆ ಈ ಪ್ರಮಾಣ ಶೇ.65.7ಕ್ಕೆ ತಲುಪಿದೆ. ಜೊತೆಗೆ ಪ್ರಸಕ್ತ ದೇಶದಲ್ಲಿನ ವಿದ್ಯಾವಂತ ಯುವಸಮೂಹದಲ್ಲಿನ ನಿರುದ್ಯೋಗ ಪ್ರಮಾಣವು ಮಹಿಳೆಯರಲ್ಲಿ ಶೇ.76.2ರಷ್ಟದೆ ಎಂದು ವರದಿ ಹೇಳಿದೆ.
ಈ ಮೇಲಿನ ಅಂಕಿ ಅಂಶಗಳನ್ನು ಭಾರತದಲ್ಲಿನ ನಿರುದ್ಯೋಗ ಪ್ರಮಾಣವು ಯುವಸಮೂಹದಲ್ಲೇ ಹೆಚ್ಚು ಕೇಂದ್ರೀಕೃತವಾಗುತ್ತಿದೆ, ಅದರಲ್ಲೂ ನಗರ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬಂದಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ಸರ್ಕಾರವೇ ಎಲ್ಲವನ್ನೂ ಮಾಡಲಾಗದು: ನಾಗೇಶ್ವರನ್
ನಿರುದ್ಯೋಗ ಪ್ರಮಾಣದ ಹೆಚ್ಚಳ ಕುರಿತು, ವರದಿ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್, 'ನಿರುದ್ಯೋಗದಂಥ ಪ್ರತಿಯೊಂದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸರ್ಕಾರವೇ ಮಧ್ಯಪ್ರವೇಶ ಮಾಡಬೇಕು ಎಂದು ಹೇಳುವುದು ಸರಿಯಲ್ಲ. ಈ ಮನಸ್ಥಿತಿಯಿಂದ ನಾವು ಹೊರಬರಬೇಕು. ವಾಣಿಜ್ಯ ವಲಯದವರು ನೇಮಕ ಮಾಡಿಕೊಳ್ಳಬೇಕು'ಎಂದು ಹೇಳಿದರು.
ನಿರುದ್ಯೋಗ ಪ್ರಮಾಣ ಕುರಿತು ಕಾಂಗ್ರೆಸ್ ಕಿಡಿ
ವರದಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್,'ದೇಶ ಇದೀಗ ನಿರುದ್ಯೋಗದ ಬಾಂಬ್ ಮೇಲೆ ಕುಳಿತಿದೆ. ದೇಶದ ಯುವಕರು ಮೋದಿ ಸರ್ಕಾರದ ಉದಾಸೀನತೆ ಬಿಸಿ ಅನುಭವಿಸುತ್ತಿದ್ದಾರೆ' ಎಂದಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವ ಮುನ್ನ ದೇಶದ ಮತದಾರರು, ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಹನ್ನೆರಡು ಕೋಟಿ ಉದ್ಯೋಗ ಕಸಿದುಕೊಂಡಿದ್ದಾರೆ ಎಂದು ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.












Click it and Unblock the Notifications