IMD Weather Forecast: ಚಂಡಮಾರುತ ಪರಿಣಾಮ ಮುಂದಿನ ದಿನಗಳಲ್ಲಿ ರಣಭೀಕರ ಮಳೆ ಮುನ್ಸೂಚನೆ: ರಜೆ ವಿಸ್ತರಣೆ ಸಾಧ್ಯತೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೆಯುವ ಚಳಿ ಮುಂದುವರೆದಿದೆ. ಈ ನಡುವೆಯೇ ಬಂಗಾಳಕೊಲ್ಲಿಯಲ್ಲಿ 'ದಿತ್ವಾ' ಚಂಡಮಾರುತ ಪರಿಣಾಮ ಹಲವೆಡೆ ಧಾರಾಕಾರ ಮಳೆಯೂ ಆಗುತ್ತಿದೆ. ಹಾಗೆಯೇ ಮುಂದಿನ ಹಲವು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ ಹಲವು ದಿನಗಳವರೆಗೆ ಭೀಕರ ಚಳಿ ನಡುವೆಯೂ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಇನ್ನಿತರ ರಾಜ್ಯಗಳಲ್ಲಿ ತಾಪಮಾನ ಪ್ರಮಾಣ ತಗ್ಗಲಿದ್ದು, ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಎಲ್ಲೆಲ್ಲಿ ಮಳೆ?: ಬಂಗಾಳಕೊಲ್ಲಿಯಲ್ಲಿ ದಿತ್ವಾ ಚಂಡಮಾರುತ ಹಿನ್ನೆಲೆ ತಮಿಳುನಾಡು ಕರಾವಳಿ ಭಾಗ, ಪುದುಚೇರಿ, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ರಣಮಳೆ ಸುರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಅದರಲ್ಲೂ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ದಟ್ಟ ಮಂಜು ಕವಿದ ವಾತಾವರಣ: ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಟ್ಟ ಮಂಜಿನ ವಾತಾವರಣ ಮುಂದುವರೆದಿದೆ. ಡಿಸೆಂಬರ್ 4 ಮತ್ತು 5ರಂದು ಪಂಜಾಬ್, ಹರಿಯಾಣ, ಚಂಡೀಗಢದ ಪ್ರತ್ಯೇಕ ಪ್ರದೇಶಗಳಲ್ಲಿ, ಉತ್ತರ ರಾಜಸ್ಥಾನದಲ್ಲಿ ಡಿಸೆಂಬರ್ 4-6ರವರೆಗೆ, ಅಸ್ಸಾಂ, ಜಾರ್ಖಂಡ್, ಮೇಘಾಲಯ, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಹಿಮಾಚಲ ಪ್ರದೇಶದ ಪ್ರತ್ಯೇಕ ಭಾಗಗಳಲ್ಲಿ ಡಿಸೆಂಬರ್ 6 ಮತ್ತು 7ರವರೆಗೆ ಮುಂಜಾನೆ ವೇಳೆ ದಟ್ಟವಾದ ಮಂಜು ಕವಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 5 ದಿನಗಳವರೆಗೆ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಉತ್ತರ ಪ್ರದೇಶ ಹೊರತುಪಡಿಸಿ ಈ ಭಾಗದಲ್ಲು ಉಳಿದ ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಕೆಯಾಗುವ ಸಾಧ್ಯತೆಯಿದೆ. ನಂತರ ಯಾವುದೇ ಗಮನಾರ್ಹ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದೆ.
ಮುಂದಿನ 3 ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಇಳಿಕೆಯಾಗುವ ಸಾಧ್ಯತೆಯಿದೆ. ನಂತರ ಯಾವುದೇ ಗಮನಾರ್ಹ ಬದಲಾವಣೆಯಾಗುವುದಿಲ್ಲ. ಮುಂದಿನ 2 ದಿನಗಳಲ್ಲಿ ಈಶಾನ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ನಂತರದ 3 ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮುಂದಿನ ಹಲವು ದಿನಗಳವರೆಗೆ ಭಾರಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆ ಮುಂದುವರೆದ ಹಿನ್ನೆಲೆ ಇಂದು (ಡಿಸೆಂಬರ್ 4) ಚೆನ್ನೈ ಮತ್ತು ತಿರುವಲ್ಲೂರಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಉತ್ತರ ಕರಾವಳಿ ತಮಿಳುನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆ ಹಿನ್ನೆಲೆ ಇಂದು (ಡಿಸೆಂಬರ್ 4) ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ ಮತ್ತು ತಿರುವಲ್ಲೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ.
ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆ ಭಾರೀ ಮಳೆಯಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ವಾಹನ ಸವಾರರು ಕೂಡ ಪರದಾಡಿದ ಘಟನೆಗಳು ನಡೆದಿವೆ. ಅರಬ್ಬೀ ಸಮುದ್ರ ಮತ್ತು ಕೇರಳದ ಕರಾವಳಿಯಲ್ಲಿ ಗಂಟೆಗೆ 35-45 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಾದ್ಯಂತ ಭಾಗಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗಲಿದೆ. ಅಲ್ಲದೆ, ಚೆನ್ನೈ ಕರಾವಳಿಯಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರೆದರೆ ಈ ಭಾಗಗಳಲ್ಲಿ ರಜೆಯನ್ನು ವಿಸ್ತರಣೆ ಮಾಡುವ ಸಾಧ್ಯತೆಯಿದೆ.
ದೆಹಲಿ-ಎನ್‌ಸಿಆರ್ ಭಾಗದಲ್ಲಿ ಬೆಳಗ್ಗೆ ವೇಳೆ ದಟ್ಟವಾದ ಮಂಜಿನ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಣಾಮ ವಾಹನ ಸವಾರರಿಗೆ ತುಂಬಾ ಅಡಚಣೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ದಟ್ಟ ಮಂಜಿನ ನಡುವೆ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ಸಂದೇಶವನ್ನು ನೀಡಿದೆ. ಇದೀಗ ಸದ್ಯ ತಮಿಳುನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಭಾಗದ ಕೆಲವೆಡೆ ಶಾಲೆ ರಜೆ ವಿಸ್ತರಣೆ ಸಾಧ್ಯತೆಯಿದೆ.












Click it and Unblock the Notifications