IMD Weather Forecast: ಶೀತಗಾಳಿ ನಡುವೆಯೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಮುನ್ಸೂಚನೆ
India Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಚಳಿ ಹೆಚ್ಚಾಗಿದೆ. ಈ ನಡುವೆಯೆ ಹಲವೆಡೆ ಮಳೆ ಆಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಶೀತಗಾಳಿ ಹೆಚ್ಚಿದೆ ಹಾಗೂ ವರುಣನ ಆರ್ಭಟ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುರುವಾರ (ಡಿಸೆಂಬರ್ 18) ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ದಟ್ಟವಾದ ಮಂಜು ಕವಿದ ವಾತಾವರಣ ಮುಂದುವರೆದಿದೆ. ಈ ನಡುವೆಯೇ ಹಲವೆಡೆ ಜಿನುಗು ಮಳೆಯೂ ಮುಂದುವರೆದಿದೆ. ಇದರಿಂದ ಹಲವಾರು ಪ್ರದೇಶಗಳಲ್ಲಿ ಅಡಚಣೆ ಉಂಟಾಗಿದ್ದು, ವಾರನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಮತ್ತೊಂಡೆ ಭೀಕರ ಚಳಿ ಕಾರಣ ಜನರು ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಶೀತಗಾಳಿ ಗಮನಾರ್ಹವಾಗಿ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ದಟ್ಟ ಮಂಜು ಕವಿದ ವಾತಾವಾರಣ ಇದ್ದು, ಪರಿಣಾಮ ಬುಧವಾರ ನಡೆಉಬೇಕಿದ್ದ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಇಂದು ಸಹ ಇದೇ ರೀತಿ ವಾತಾವರಣ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಗಮನಾರ್ಹವಾಗಿ ಮಂಜು ಬೀಳಲಿದೆ ಎಂದು ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಗುರುವಾರ ದೇಶಾದ್ಯಂತ 16 ರಾಜ್ಯಗಳಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ. ಅದರಲ್ಲೂ, ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ದಟ್ಟ ಮಂಜು ಕವಿಯುವ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕವಿಯುವ ಸಾಧ್ಯತೆಯಿದೆ. ಹಾಗೆಯೇ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಒಡಿಶಾದಲ್ಲೂ ಇದೇ ರೀತಿಯ ವಾತಾವರಣ ಇರಲಿದೆ ಎಂದು ಮನ್ಸೂಚನೆ ನೀಡಿದೆ. ಈ ವಾತಾವರವು ರಸ್ತೆ, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅಡ್ಡಿ ಉಂಟುಮಾಡಬಹುದು ಅಂತಲೂ ಮುನ್ನೆಚ್ಚರಿಕೆ ನೀಡಿದೆ.
ಎಲ್ಲೆಲ್ಲಿ ಮಳೆ?: ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದ್ದು, ಈ ಹಿನ್ನೆಲೆ ಆರೆಂಜ್ ಘೋಷಣೆ ಮಾಡಿದೆ. ಇನ್ನೂ ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಪಶ್ಚಿಮ ಪ್ರದೇಶಗಳಲ್ಲಿ ಶೀತಗಾಳಿ ಬೀಸಲಿದೆ. ಈ ನಡುವೆಯೇ ತಮಿಳುನಾಡು, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿ ಹವಾಮಾನ ವಿವರ: ರಾಷ್ಟ್ರ ರಾಜಧಾನಿ ನವದೆಹಲಿಯ ಹೆಚ್ಚಿನ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಿಂದ ಕೂಡಿರಲಿದೆ. ವಾಯು ಗುಣಮಟ್ಟ ಸೂಚ್ಯಂಕ (AQI) 300ಕ್ಕಿಂತ ಹೆಚ್ಚು ದಾಖಲಾಗಿದೆ. ವಿಷಕಾರಿ ಗಾಳಿಯನ್ನು ನಿಗ್ರಹಿಸಲು ರಾಷ್ಟ್ರ ರಾಜಧಾನಿಯಾದ್ಯಂತ GRAP-4 ನಿರ್ಬಂಧಗಳು ಜಾರಿಯಲ್ಲಿವೆ. BS-III ಪೆಟ್ರೋಲ್ ವಾಹನಗಳು ಮತ್ತು BS-IV ಡೀಸೆಲ್ ವಾಹನಗಳನ್ನು ದೆಹಲಿಗೆ ಪ್ರವೇಶಿಸಿದಂತೆ ನಿಷೇಧ ಹೇರಲಾಗಿದೆ. ಅಲ್ಲದೆ, ಇಂದಿನಿಂದ ಇಂಧನ ಪಂಪ್‌ಗಳಲ್ಲಿ ಮಾನ್ಯ ಮಾಲಿನ್ಯ ಪ್ರಮಾಣಪತ್ರಗಳಿಲ್ಲದ ವಾಹನಗಳಿಗೆ ಪೆಟ್ರೋಲ್ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಅಂತಲೂ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.












Click it and Unblock the Notifications