Tamil Nadu Rains: ತಮಿಳುನಾಡಿನಲ್ಲಿ ಇಂದಿನಿಂದ ಎರಡು ದಿನ ಭಾರೀ ಮಳೆ: ಆರೆಂಜ್ ಅಲರ್ಟ್
ಫೆಂಗಲ್ ಚಂಡಮಾರುತಕ್ಕೆ ತತ್ತರಿಸಿದ್ದ ತಮಿಳುನಾಡಿನಲ್ಲಿಂದು ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಪ್ರಾದೇಶಿಕ ಹವಾಮಾನ ಕೇಂದ್ರದ ಮುನ್ಸೂಚನೆಯ ಪ್ರಕಾರ ಕಾಂಚೀಪುರಂ, ತಿರುವಳ್ಳೂರು, ಚೆನ್ನೈ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳನ್ನು ಒಳಗೊಂಡಿರುವ ಕೆಟಿಸಿಸಿ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದೊಂದಿಗೆ ಮಳೆ ಮೋಡ ರೂಪಗೊಂಡಿದೆ. ಇದರಿಂದಾಗಿ ಮುಂದಿನ 2 ದಿನ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. ಈ ವೇಳೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಉತ್ತರ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ವಿಲ್ಲುಪುರಂ ಮತ್ತು ಪುದುಚೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಳಿಗೆ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಮಂಗಳವಾರ ಸಂಜೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂದು ಅಂದರೆ ಡಿಸೆಂಬರ್ 18ರಂದು ಕರಾವಳಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರು ಮನೆಯೊಳಗೆ ಇರಲು ಸಲಹೆ ನೀಡಲಾಗಿದೆ. ಅಗತ್ಯವಿಲ್ಲದಿದ್ದರೆ ಹೊರಗೆ ಹೋಗದಿರಲು ಸೂಚನೆ ನೀಡಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಗಾಳಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರಿಮದ ತಮಿಳುನಾಡು ಕರಾವಳಿ ಬಾಗದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಮಯದಲ್ಲಿ ಯಾರೂ ಕೂಡ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಕರಾವಳಿ ಭಾಗದಲ್ಲಿ ವಾಸಿಸುವ ಜನರಿಗೆ ಈ ಸಮಯದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ತಿಳಿಸಲಾಗಿದೆ.
ತಮಿಳುನಾಡಿನ ತೂತುಕುಡಿ ಜಲಾವೃತ
ತಮಿಳುನಾಡಿನ ಹಲವೆಡೆ ಭಾನುವಾರದಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ತೂತುಕುಡಿಯ ಹಲವಾರು ಭಾಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿದೆ. ತಿರುನಲ್ವೇಲಿ, ತೆಂಕಶಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯದಲ್ಲಿ ಸಹಾಯ ಮಾಡಲು NDRF ತಂಡವನ್ನು ಕಳುಹಿಸಲಾಗಿದೆ. ಜೊತೆಗೆ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ಪ್ರದೇಶದಲ್ಲಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ.












Click it and Unblock the Notifications