ವಿದ್ಯುತ್ ಗ್ರಾಹಕರಲ್ಲ, ಇನ್ಮುಂದೆ ರೈತರೇ ವಿದ್ಯುತ್ ಮಾಲೀಕರು: ಕೃಷಿ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಯುವಕ
ಮಳೆ-ಬೆಳೆಗಳ ಅನಿಶ್ಚಿತತೆ, ಏರಿಳಿತದ ಮಾರುಕಟ್ಟೆ ದರ ಹಾಗೂ ಆರ್ಥಿಕ ಸಂಕಷ್ಟಗಳಿಂದ ಕಂಗೆಟ್ಟಿದ್ದ ದೇಶದ ಕೃಷಿಕರಿಗೆ 'ಸೌರ ಕ್ರಾಂತಿ'ಯೊಂದು ಹೊಸ ಜೀವ ನೀಡಿದೆ. ಐಐಟಿ ಪದವೀಧರ ಭಾವೇಶ್ ಪಟಿದಾರ್ ಸ್ಥಾಪಿಸಿದ 'Solarsure' ಸಂಸ್ಥೆಯು, ಪ್ರಧಾನಮಂತ್ರಿ ಕುಸುಮ್ ಯೋಜನೆಯ ಬೆಂಬಲದೊಂದಿಗೆ ರೈತರನ್ನು ಬರೀ ವಿದ್ಯುತ್ ಬಳಕೆದಾರರನ್ನಾಗಿ ಉಳಿಸದೆ, ವಿದ್ಯುತ್ ಉತ್ಪಾದಕರು ಹಾಗೂ ಮಾರಾಟಗಾರರನ್ನಾಗಿ ಪರಿವರ್ತಿಸುತ್ತಿದೆ.
ಕೃಷಿಕರ ಕುಟುಂಬದಿಂದ ಬಂದು, ಕೃಷಿಯಲ್ಲಿ ಎದುರಾಗುವ ಆದಾಯದ ಅನಿಶ್ಚಿತತೆಯನ್ನು ಹತ್ತಿರದಿಂದ ಕಂಡ ಮಧ್ಯಪ್ರದೇಶದ ಖಾಲ್ಘಾಟ್ ಮೂಲದ ಭಾವೇಶ್ ಪಟಿದಾರ್ ಅವರು, ಇಂದು ದೇಶದ ಸಾವಿರಾರು ರೈತರ ಪಾಲಿಗೆ ಹೊಸ ಆಶಾಕಿರಣ ಆಗಿದ್ದಾರೆ. ಐಐಟಿ ಪದವೀಧರರಾದ ಭಾವೇಶ್, ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಂತರ Solarsure ಎಂಬ ನವೀಕರಿಸಬಹುದಾದ ಇಂಧನ ಸಂಸ್ಥೆಯನ್ನು ಸ್ಥಾಪಿಸಿ, ರೈತರು ಕೇವಲ ವಿದ್ಯುತ್ ಬಳಕೆದಾರರಷ್ಟೇ ಅಲ್ಲದೆ ವಿದ್ಯುತ್ ಉತ್ಪಾದಕರು ಹಾಗೂ ಮಾರಾಟಗಾರರಾಗುವಂತೆ ಮಾಡಿದ್ದಾರೆ.

ಭಾವೇಶ್ ಅತ್ಯದ್ಭುತ ಸಾಧನೆ
ತಂದೆ ಕೃಷಿಯಲ್ಲಿ ಪಡುತ್ತಿದ್ದ ಆರ್ಥಿಕ ಸಂಕಷ್ಟವನ್ನು ಕಂಡ ಭಾವೇಶ್, ಮೊದಲು ತಮ್ಮ ಸ್ವಂತ ಜಮೀನಿನಲ್ಲಿ ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ 2 ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಸ್ಥಾಪಿಸಿದರು. ಇದರಿಂದ ಬಂದ ನಿಯಮಿತ ಆದಾಯವನ್ನು ಗಮನಿಸಿದ ನೆರೆಹೊರೆಯ ರೈತರು, ಈ ಮಾದರಿಯನ್ನು ತಮ್ಮ ಜಮೀನಿನಲ್ಲೂ ಅಳವಡಿಕೆ ಮಾಡಲು ಮುಂದಾದರು.
ನವೆಂಬರ್ 2024ರಲ್ಲಿ ಇಂದೋರ್‌ನಲ್ಲಿ ಆರಂಭವಾದ 'Solarsure' ಸಂಸ್ಥೆಯು ರೈತರ ಫಲವತ್ತಲ್ಲದ ಅಥವಾ ಕಡಿಮೆ ಬಳಕೆಯಲ್ಲಿರುವ ಜಮೀನಿನಲ್ಲಿ ಸೌರ ವಿದ್ಯುತ್ ಘಟಕಗಳನ್ನು ನಿರ್ಮಿಸಲು ನೆರವಾಗುತ್ತದೆ. ಪ್ರಸ್ತುತ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಒಡಿಶಾ ಸೇರಿದಂತೆ 6 ರಾಜ್ಯಗಳಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 300 ಮೆಗಾ ವ್ಯಾಟ್‌ಗೂ ಹೆಚ್ಚು ಸೌರಶಕ್ತಿ ಸಾಮರ್ಥ್ಯವನ್ನು ತಲುಪಿದ್ದು, 50,000ಕ್ಕೂ ಹೆಚ್ಚು ರೈತರು ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ.
ಆದಾಯದಲ್ಲಿ ಗಮನಾರ್ಹ ಏರಿಕೆ
ಸೌರಶಕ್ತಿ ಯೋಜನೆಯಿಂದಾಗಿ ರೈತರ ಒಟ್ಟು ಆದಾಯದಲ್ಲಿ ಸರಾಸರಿ ಶೇಕಡಾ 30ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಜೊತೆಗೆ ಸೌರ ಛಾವಣಿ ಮತ್ತು ಪಂಪ್ ವ್ಯವಸ್ಥೆಗಳಿಂದ ತಿಂಗಳ ವಿದ್ಯುತ್ ಬಿಲ್ ₹12,000 ರಿಂದ 1,000 ರೂಪಾಯಿಗೆ ಇಳಿಕೆಯಾದ ಉದಾಹರಣೆಗಳೂ ಇವೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ
ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವ ಮೊದಲು, ಯೋಜನೆಯ ಸ್ಥಳದ ಹವಾಮಾನ ಅಪಾಯಗಳು, ಗಾಳಿಯ ವೇಗ ಮತ್ತು ಸೂಕ್ತತೆಯನ್ನು ಪರಿಶೀಲಿಸಲು Solarsure ಸಂಸ್ಥೆಯು ಇಸ್ರೋ ಮತ್ತು ನಾಸಾ ಉಪಗ್ರಹ ಡೇಟಾ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.
ಸಾಲ ಸೌಲಭ್ಯ, ಯೋಜನೆಯ ವಿನ್ಯಾಸ, ಅಳವಡಿಕೆ, ನಿರ್ವಹಣೆ ಹಾಗೂ ಗ್ರಿಡ್ ಸಂಯೋಜನೆಯವರೆಗೂ ಸಂಸ್ಥೆಯು ರೈತರಿಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಹವಾಮಾನ ಮತ್ತು ಮಾರುಕಟ್ಟೆ ದರಗಳ ಮೇಲಷ್ಟೇ ಅವಲಂಬಿತವಾಗಿದ್ದ ರೈತರ ಬದುಕಿಗೆ, ಸೌರಶಕ್ತಿಯು ಸ್ಥಿರವಾದ ಮತ್ತು ಭರವಸೆಯ 'ಎರಡನೇ ಆದಾಯದ ಮೂಲ'ವನ್ನು ರೂಪಿಸಿಕೊಟ್ಟಿದೆ.


Click it and Unblock the Notifications
