ಅಧಿಕಾರಿಗಳಿಗೆ ಲಂಚ ಕೊಟ್ರೆ ಕೊಂದು ಹಾಕ್ತೀನಿ: ಮುಖ್ಯಮಂತ್ರಿ
ಹೈದರಾಬಾದ್, ಜ 12: ಸರಕಾರೀ ಅಧಿಕಾರಿಗಳಿಗೆ ಲಂಚ ಕೊಡುವುದು ಸಿಎಂ ಕಚೇರಿಯ ಗಮನಕ್ಕೆ ಬಂದರೆ ಅಂಥವರನ್ನು ಕೊಂದು ಹಾಕುತ್ತೇನೆಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಾರಂಗಲ್ ಜಿಲ್ಲೆಯಲ್ಲಿ ಭಾನುವಾರ (ಜ 11) ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಮಾತನಾಡುತ್ತಿದ್ದ ಕೆಸಿಆರ್, ಲಂಚ ನೀಡುವುದು, ತೆಗೆದುಕೊಳ್ಳುವುದು ಎರಡೂ ತಪ್ಪು. ಸರಕಾರದ ಆಡಳಿತ ಯಂತ್ರ ಲಂಚಮುಕ್ತವಾಗಿ ಇರಬೇಕು ಎನ್ನುವುದು ನಮ್ಮ ಗುರಿ ಎಂದಿದ್ದಾರೆ.
ಇನ್ಮುಂದೆ ಈ ವಿಚಾರದಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ. ಲಂಚ ಕೊಡೋಕೆ ಯಾರಾದರೂ ಬಂದರೆ ನಾನೇ ಹಿಂದೆ ಮುಂದೆ ನೋಡದೆ ಕೊಂದು ಹಾಕುತ್ತೇನೆ ಎಂದು ಚಂದ್ರಶೇಖರ ರಾವ್ ಅಬ್ಬರಿಸಿದ್ದಾಗ ನೆರೆದಿದ್ದವರೆಲ್ಲಾ ಸುಸ್ತು. (ತೆಲಂಗಾಣದ ಬಗ್ಗೆ ಸೊಲ್ಲೆತ್ತಬೇಡಿ)

ಸಿಎಂ ಕಾರ್ಯಾಲಯದಲ್ಲಿ ಲಂಚದ ಹಾವಳಿಯನ್ನು ತಡೆಯಲು ಪ್ರತ್ಯೇಕ ಸೆಲ್ ತೆರೆಯಲಾಗಿದೆ. ಆ ಸೆಲ್ಲಿಗೆ ಕರೆ ಮಾಡಿದರೆ ತ್ವರಿತ ಕ್ರಮ ತೆಗೆದುಕೊಳ್ಳಲಿದ್ದೇವೆ.
ಸರಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ನಮ್ಮ ಯಾವುದೇ ಕಾರ್ಯಕ್ರಮ, ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತೆಲಂಗಾಣ ಮುಖ್ಯಮಂತ್ರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.
ಅಧಿಕಾರಿಗಳು ಸರಿಯಾಗಿ ನಿಮ್ಮ ಕುಂದು ಕೊರತೆಗಳಿಗೆ ಸ್ಪಂಧಿಸದಿದ್ದಲ್ಲಿ ನಮ್ಮ ಕಾರ್ಯಾಲಯಕ್ಕೆ ತಿಳಿಸಿ. ಸಿಎಂ ಕಚೇರಿಯ ಪ್ರತ್ಯೇಕ ಸೆಲ್ಲಿನ ದೂರವಾಣಿ ಸಂಖ್ಯೆ 040-23454071. ಸಾರ್ವಜನಿಕರ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಿಎಂ ಜನರಲ್ಲಿ ಕೇಳಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಬಡವರಿಗೆ ವಸತಿ ಸೌಲಭ್ಯದ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಕೆಸಿಆರ್, ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ 3957 ಮನೆಗಳನ್ನು ನಿರ್ಮಿಸಲಾಗುವುದು ಎಂದು ಜನರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಕೊನೇ ಮಾತು : ಸರಕಾರಿ ಅಧಿಕಾರಿಗಳೇ ಲಂಚಕ್ಕೆ ಡಿಮಾಂಡ್ ಮಾಡಿದರೆ ಏನು ಮಾಡೋದು ಸ್ವಾಮಿ ? ಈ ಬಗ್ಗೆ ಮುಖ್ಯಮಂತ್ರಿಗಳಾದ ನೀವು ಮೊದಲು ನಿಮ್ಮ ಸರಕಾರದ ನಿಲುವನ್ನು ಸ್ಪಷ್ಟ ಪಡಿಸಬೇಕಲ್ವಾ?












Click it and Unblock the Notifications