ಬಿಳಿಬಟ್ಟೆ ಉಟ್ಟು, ತಲೆ ಬೋಳಿಸಿಕೊಳ್ಳುವೆ: ಕಾಂಗ್ರೆಸ್ಸಿಗರಿಗೆ ಬೆದರಿಸಿದ್ದ ಸುಷ್ಮಾ ಸ್ವರಾಜ್
ಮಂಗಳವಾರ ತಡರಾತ್ರಿ ವಿಧಿವಶರಾದ ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವೆ ವಿಶೇಷ ನಂಟು ಇದ್ದಿದ್ದಕ್ಕೆ ಹಲವು ಉದಾಹರಣೆಗಳಿವೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರ ಸ್ವಾಭಿಮಾನ, ಗೌರವದ ವಿಚಾರಕ್ಕೆ ಬಂದಾಗ ಮತ್ತು ಮಹಿಳಾ ಸಂಬಂಧಿ ಬಿಲ್ ಚರ್ಚೆಗಳಲ್ಲಿ, ಪಕ್ಷಭೇದ ಮೆರೆತು ಈ ಇಬ್ಬರೂ ನಾಯಕಿಯರು ಕೈಜೋಡಿಸಿದ್ದ, ಹಲವು ಘಟನೆಗಳಿವೆ.
ಆದರೆ, ಹದಿನೈದು ವರ್ಷಗಳ ಹಿಂದೆ, ಪ್ರಧಾನಮಂತ್ರಿ ಹುದ್ದೆಗೆ ಸೋನಿಯಾ ಗಾಂಧಿಯವರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸುಷ್ಮಾ ಇದನ್ನು ತೀವ್ರವಾಗಿ ವಿರೋಧಿಸಿ, ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು.
2004ರಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ಅವಧಿಯಲ್ಲಿ, ಸುಷ್ಮಾ ಸ್ವರಾಜ್, ಕಾಂಗ್ರೆಸ್ಸಿಗರಿಗೆ 'ತಲೆ ಬೋಳಿಸಿಕೊಳ್ಳುವುದಾಗಿ' ಸವಾಲು ಹಾಕಿದ್ದರು. ಸುಷ್ಮಾ ಸವಾಲು, ಆ ವೇಳೆ ಭಾರೀ ಸದ್ದನ್ನು ಮಾಡಿತ್ತು.

ಇದು, ದೇಶದ ಸ್ವಾಭಿಮಾನದ ಪ್ರಶ್ನೆ ಎಂದು ಸುಷ್ಮಾ ಟೀಕೆ
ವಿದೇಶಿ ಮೂಲದವರೊಬ್ಬರೊಬ್ಬರನ್ನು ಪ್ರಧಾನಿ ಹುದ್ದೆಗೆ ಆಯ್ಕೆಮಾಡುವುದಕ್ಕೆ ಸುಷ್ಮಾ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಸೋನಿಯಾ ಗಾಂಧಿಯೇ ಪ್ರಧಾನಿಯಾಗಬೇಕೆಂದು ಯುಪಿಎ ಮೈತ್ರಿಕೂಟದ ಪಕ್ಷಗಳ ಮುಖಂಡರೆಲ್ಲರೂ ದಂಬಾಲು ಬಿದ್ದಿದ್ದರು. 'ಇದು, ದೇಶದ ಸ್ವಾಭಿಮಾನದ ಪ್ರಶ್ನೆ' ಎಂದು ಸುಷ್ಮಾ ಟೀಕಿಸಿದ್ದರು.

ಬಿಳಿಬಟ್ಟೆ ಉಟ್ಟು, ತಲೆ ಬೋಳಿಸಿಕೊಂಡು, ನೆಲದಲ್ಲೇ ಮಲಗುತ್ತೇನೆ
'ಸೋನಿಯಾ ಗಾಂಧಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಜೀವನದುದ್ದಕ್ಕೂ ಬಿಳಿಬಟ್ಟೆ ಉಟ್ಟು, ತಲೆ ಬೋಳಿಸಿಕೊಂಡು, ನೆಲದಲ್ಲೇ ಮಲಗಿ, ಕಡಲೇಕಾಯಿ ತಿಂದುಕೊಂಡು ಬದುಕುತ್ತೇನೆಂದು' ಸುಷ್ಮಾ ಬಹಿರಂಗ ಸವಾಲು ಹಾಕಿದ್ದರು. ಸುಷ್ಮಾ ಹಾಕಿದ ಈ ಸವಾಲು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

ದೇಶವನ್ನು ಮುನ್ನಡೆಸಲು ಭಾರತೀಯರು ಯಾರೂ ನಿಮಗೆ ಸಿಗಲಿಲ್ಲವೇ
'ಬ್ರಿಟಿಷ್ ಆಳ್ವಿಕೆಯಿಂದ ಹೊರ ಬರಲು ಎಷ್ಟೊಂದು ಭಾರತೀಯರ ಬಲಿದಾನ, ತ್ಯಾಗವಿದೆ. ಇದಾದ ನಂತರವೂ, ನಮ್ಮ ದೇಶವನ್ನು ಮುನ್ನಡೆಸಲು ಭಾರತೀಯರು ಯಾರೂ ನಿಮಗೆ ಸಿಗಲಿಲ್ಲವೇ, ವಿದೇಶಿ ಮೂಲದವರನ್ನು ಆಯ್ಕೆ ಮಾಡಿ, ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದೀರಿ' ಎಂದು ಸುಷ್ಮಾ, ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಯುಪಿಎ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಆರಿಸಿತು
ಈ ಎಲ್ಲ ಬೆಳವಣಿಗೆಗಳ ನಂತರ, ಯುಪಿಎ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಆರಿಸಿತು. ಸಿಂಗ್, ಪ್ರಧಾನಿಯಾಗಿ ಒಂದು ವರ್ಷ ಕಳೆದ ನಂತರ, 'ನೀವು ತಲೆಬೋಳಿಸಿಕೊಳ್ಳುತ್ತೀರಿ' ಎಂದು ನೀಡಿದ್ದ ಹೇಳಿಕೆಯನ್ನು ಮಾಧ್ಯಮದವರು ಮತ್ತೆ ಕೆದಕಿದಾಗ, 'ಈಗಲೂ ನನ್ನ ನಿರ್ಧಾರಕ್ಕೆ ಬದ್ದನಾಗಿದ್ದೇನೆ' ಎಂದು ಸುಷ್ಮಾ ಹೇಳಿದ್ದರು.

ಆ ಚುನಾವಣೆಯನ್ನು ಸೋತಿರಬಹುದು, ಆದರೆ ಅಲ್ಲಿನ ಜನರ ಮನಸ್ಸನ್ನು ಗೆದ್ದಿದ್ದೇನೆ
'1996ರ ಲೋಕಸಭಾ ಚುನಾವಣೆಯಲ್ಲಿ ನಾನು ಕರ್ನಾಟಕದ ಬಳ್ಳಾರಿಂದ ಸ್ಪರ್ಧಿಸಿದ್ದೆ. ನಾನು ಸೋನಿಯಾ ವಿರುದ್ದ ಆ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಅಲ್ಲಿನ ಜನರ ಮನಸ್ಸನ್ನು ಗೆದ್ದಿದ್ದೇನೆ' ಎಂದು ತೀರಾ ಇತ್ತೀಚಿಗಿನವರೆಗೆ, ಅಂದಿನ ಘಟನೆಯನ್ನು ಸುಷ್ಮಾ ಮೆಲುಕು ಹಾಕಿಕೊಂಡಿದ್ದರು.












Click it and Unblock the Notifications