ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ
ಬೆಂಗಳೂರು, ಮಾ, 18: ದೇಶದೆಲ್ಲೆಡೆ ದಕ್ಷ ಅಧಿಕಾರಿ ಸಾವಿನ ಬಗ್ಗೆಯೇ ಚರ್ಚೆ. ಸಿಬಿಐ ಗೆ ಒಪ್ಪಿಸಬೇಕು ಎಂಬ ಒತ್ತಾಯ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪ, ವಿಭಿನ್ನ ಹೇಳಿಕೆಗಳು ಊಹಾಪೋಹಗಳು ಇವೇ ಮೊದಲಾದ ಸಂಗತಿಗಳು ಡಿಕೆ ರವಿ ಸಾವಿನ ಸುತ್ತ ಗಿರಕಿ ಹೊಡೆಯುತ್ತಿವೆ.
ಆದರೆ ಒಡೆಯನ ಅಗಲಿಕೆಯಿಂದ ತತ್ತರಿಸಿದ್ದ ಡಿ.ಕೆ. ರವಿ ಅವರ ಪ್ರೀತಿಯ ಶ್ವಾನ ರೋನಿ ಏನನ್ನು ಹೇಳುತ್ತಿದೆ? ಯಾರಿಗೂ ಗೊತ್ತಿಲ್ಲ. ಶವಪೆಟ್ಟಿಗೆಗೆ ಒರಗಿ ತನ್ನದೇ ಮೂಕ ಭಾಷೆಯಲ್ಲಿ ಆಕ್ರಂದನ ಮಾಡುತ್ತಿದ್ದ ದೃಶ್ಯಕ್ಕೆ ಅರ್ಥ ಹುಡುಕಲು ಹೋದರೆ ಅತಿದೊಡ್ಡ ಮುರ್ಖತನವಾದೀತು.[ಅಂತಿಮ ಯಾತ್ರೆಯ ಚಿತ್ರಗಳು]

ಡಿಕೆ ರವಿಯವರ ಅಂತಿಮ ದರ್ಶನದ ವೇಳೆ ಸಾಕು ನಾಯಿ ನಡೆದುಕೊಂಡ ರೀತಿ ವಾತಾವರಣದಲ್ಲಿ ತುಂಬಿದ್ದ ದುಃಖಕ್ಕೆ ಸಾಕ್ಷಿಭೂತವಾಗಿ ನಿಂತಿತ್ತು. ರೋನಿಯ ಕಣ್ಣೀರು ಮನೆಯೊಡೆಯನ ಅಗಲಿಕೆಯ ನೋವನ್ನು ಸಾರಿ ಸಾರಿ ಹೇಳುತ್ತಿತ್ತು. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ಡಿಕೆ ರವಿ ಪ್ರಕರಣವನ್ನು ತಮ್ಮ ತಮ್ಮ ಲಾಭಕ್ಕೆ ಬಳಸಿಕೊಳ್ಳಲು 'ಹೊಂಚು; ಹಾಕಿರುವವರ ಸಂಖ್ಯೆಗೂ ಕಡಿಮೆಯಿಲ್ಲ. ಸಿನಿಮಾ ಮಾಡಲು ಸಿದ್ಧತೆ ಆರಂಭವಾಗಿದೆ. ಸಿಬಿಐ ತನಿಖೆಗೆ ಒಪ್ಪಿಸಿ ಎಂಬ ಬಲವಾದ ಕೂಗು ಕೇಳಿ ಬರುತ್ತಿದೆ. ಆದರೆ ನಾಯಕರು ಹಾಕುತ್ತಿರುವ ಮೊಸಳೆ ಕಣ್ಣೀರಿಗಿಂತ ನಾಯಿಯ ಮೌನವೇ ಎಷ್ಟೋ ವಾಸಿ![ಮರಣೋತ್ತರ ಪರೀಕ್ಷೆ ವರದಿ :ಡಿಕೆ ರವಿ ಉಸಿರುಗಟ್ಟಿ ಸಾವು]

ಡಿಕೆ ರವಿ ಅಂತಿಮ ದರ್ಶನದ ವೇಳೆ ಒಡೆಯನ ಪೆಟ್ಟಿಗೆ ಕಾಲು ನೀಡಿ ತಲೆ ಅಲ್ಲಾಡಿಸುತ್ತಿದ್ದ ಶ್ವಾನಕ್ಕೆ ಯಾವ ಭಾಷೆಯಲ್ಲಿ ಸಮಾಧಾನ ಹೇಳಲು ಸಾಧ್ಯ? ರವಿ ಮಣ್ಣಾಗಿ ಹೋಗಿದ್ದಾರೆ. ಆದರೆ ನೋವಿನ್ನು ಹಾಗೆ ಉಳಿದುಕೊಂಡಿದೆ. ಮನೆಯ ಸದಸ್ಯರಲ್ಲಿಯೇ ಒಬ್ಬಳಾದ ರೋನಿಗೂ ಅಗಲಿಕೆಯ ಅನುಭವವಾಗಿದೆ.
ಯಾವ ಬಗೆಯಲ್ಲೂ ಅರ್ಥೈಸಿದರೂ ನಾಯಿಯ ಭಾವನೆಗೆ, ಪ್ರಶ್ನೆಗೆ ಉತ್ತರ ದೊರೆಯಲಾರದು. ಇಷ್ಟು ದಿನ ಓಡಾಡಿಕೊಂಡಿದ್ದ ಯಜಮಾನ ಇದ್ದಕ್ಕಿದ್ದ ಹಾಗೆ ಕಣ್ಮರೆಯಾದುದಕ್ಕೆ ಕಾರಣವೇನು? ನಾಯಕನ ದುರ್ಮರಣದ ಹಿಂದಿನ ಕಾಣದ ಕೈಗಳು ಯಾವವು? ಅಪರಾಧಿಗಳನ್ನು ಕೂಡಲೇ ಹಿಡಿಯಿರಿ? ಎಂದು ಕೂಗಾಡಲು ನಾಯಿಗೆ ಮಾತು ಬರಲ್ಲ. ಆದರೆ ರೋನಿಯ ಮೌನವೇ ಈ ಎಲ್ಲ ಒತ್ತಾಯಗಳನ್ನೂ ಮೀರಿದ್ದು.












Click it and Unblock the Notifications