ಹಿಮದಲ್ಲಿ ಸಿಲುಕಿದ್ದ ತಾಯಿ ಮಗುವನ್ನು ರಕ್ಷಿಸಿದ ಸೇನೆ
ಲಡಾಖ್, ನ. 4: ಅದೊಂದು ದುರ್ಗಮ ಕಣಿವೆ. ಜನವಸತಿ ಪ್ರದೇಶದಿಂದ ಅತ್ಯಂತ ದೂರದಲ್ಲಿರುವ, ಸಂಪರ್ಕ ರಸ್ತೆಯನ್ನೂ ಹೊಂದಿರದ, ಸಮುದ್ರ ಮಟ್ಟದಿಂದ 16,200 ಅಡಿ ಎತ್ತರದಲ್ಲಿರುವ ಈ ಪ್ರದೇಶ. ಅಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಹಸಿ ಬಾಣಂತಿ ಮಹಿಳೆ ಹಾಗೂ ಆಗಷ್ಟೇ ಜನಿಸಿದ್ದ ಮಗುವನ್ನು ರಕ್ಷಿಸುವಲ್ಲಿ ಭಾರತೀಯ ವಾಯು ಸೇನೆ ಯಶಸ್ವಿಯಾಗಿದೆ. ಜಮ್ಮು ಕಾಶ್ಮೀರದ ಲೇಹ್ ಜಿಲ್ಲಾಧಿಕಾರಿ ಮನವಿಯ ಮೇರೆಗೆ ಸಂತ್ರಸ್ತ ಮಹಿಳೆಯ ಸಹಾಯಕ್ಕೆ ತಕ್ಷಣ ಧಾವಿಸಿದ ಹೆಲಿಕಾಪ್ಟರ್ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಕರೆತಂದಿದೆ.
ಸಿಯಾಚಿನ್ ಅನ್ವೇಷಕರ ಪರಾಕ್ರಮ: ಪಾಂಗ್ ಗ್ರಾಮದ ಹತ್ತಿರವಿರುವ ಫುವಾಂಗ್ ಫ್ರಿಸ್ಟೆ ಕಣಿವೆ ಸಂಚರಿಸಲು ಸಾಧ್ಯವಾಗದಷ್ಟು ಕಡಿದಾಗಿದೆ. ಮಧ್ಯಾಹ್ನದ ಸಂದರ್ಭದಲ್ಲಿ ಮಾತ್ರ ಕಷ್ಟಪಟ್ಟು ನಡೆಯಲು ಸಾಧ್ಯ. ಇಂತಹ ಸಂದರ್ಭದಲ್ಲಿ ಮಹಿಳೆ ರಕ್ಷಣೆಗೆ ಹೆಲಿಕಾಪ್ಟರ್ ಮಾತ್ರ ಆಶಾಕಿರಣವಾಗಿತ್ತು. ಸಹಾಯಕ್ಕಾಗಿ ಕರೆ ಬಂದ ತಕ್ಷಣ ಗ್ರುಪ್ ಕ್ಯಾಪ್ಟನ್ ವಿನಯ್ ವಿಠ್ಠಲ ಅವರ ಮೇಲ್ವಿಚಾರಣೆಯಲ್ಲಿ ಸಿಯಾಚಿನ್ ಪಯೋನಿಯರ್ಸ್ ತಂಡ ರಕ್ಷಣೆಗಾಗಿ ಯೋಜನೆ ರೂಪಿಸಿತು. ಕೆಲವೇ ನಿಮಿಷಗಳಲ್ಲಿ ಎರಡು ಹೆಲಿಕಾಪ್ಟರ್ ಗಳು ವಿಂಗ್ ಕಮಾಂಡರ್ ಬಿ.ಎಸ್. ಶೆರಾವತ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದವು.

ಆದರೆ, ಸಂತ್ರಸ್ತ ಮಹಿಳೆ ಇದ್ದ ಸ್ಥಳ ಹೆಲಿಕಾಪ್ಟರ್ ಇಳಿಸಲಾಗದಷ್ಟು ಇಕ್ಕಟ್ಟಾಗಿತ್ತು ಹಾಗೂ ತಳಮಟ್ಟ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ವಾತಾವರಣದ ಅನನುಕೂಲದ ಮಧ್ಯೆಯೂ ಧೃತಿಗೆಡದ ಬಿ.ಎಸ್. ಶೆರಾವತ್ ತಂಡ ಕೆಳಗಿಳಿದು ತಾಯಿ ಮತ್ತು ಮಗುವನ್ನು ಹೆಲಿಕಾಪ್ಟರ್ ನೊಳಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ಮಹಿಳೆಯ ದೇಹದಿಂದ ರಕ್ತ ಇನ್ನೂ ಒಸರುತ್ತಿತ್ತು, ತಾಯಿ ಹಾಗೂ ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿತ್ತು. ಪರಿಸ್ಥಿತಿಯ ಗಾಂಭೀರ್ಯತೆ ಅರಿತ ಸೈನಿಕರು ಕ್ಷಣವನ್ನೂ ವ್ಯರ್ಥ ಮಾಡದೆ ಆಸ್ಪತ್ರೆಯತ್ತ ಹೆಲಿಕಾಪ್ಟರ್ ತಿರುಗಿಸಿದರು.
ಸಮಯಕ್ಕೆ ಸರಿಯಾಗಿ ಲೇಹ್ ನಲ್ಲಿರುವ ಸೋನಂ ನೋರ್ಬು ಆಸ್ಪತ್ರೆಗೆ ದಾಖಲಿಸಿದ ಮೇಲೆಯೇ ಸೈನಿಕರು ವಿಶ್ರಮಿಸಿದ್ದು. ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಬಿ.ಎಸ್. ಶೆರಾವತ್, ವಿಂಗ್ ಕಮಾಂಡರ್ ಅಮಿತ್ ಜೈನ್, ಸ್ಕ್ವಾಡ್ರನ್ ಲೀಡರ್ ಹೆರೋಜಿತ್ ಸಿಂಗ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಎಂ. ಪ್ರಶಾಂತ್ ಪರಸ್ಪರ ಅಭಿನಂದಿಸಿಕೊಂಡರು. ಅಂದಹಾಗೆ ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವ ಆಚರಿಸಿಕೊಂಡಿರುವ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಘಟಕ ಇಲ್ಲಿಯವರೆಗೆ 6,400ಕ್ಕೂ ಹೆಚ್ಚು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಹೊಂದಿದೆ.
ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಉಗ್ರರ ಉಪಟಳ ಎಷ್ಟೇ ಇರಬಹುದು. ಆದರೆ, ಸ್ಥಳೀಯರ ಜೀವರಕ್ಷಣೆ ಕುರಿತು ಭಾರತೀಯ ಸೇನೆಯ ಕಾಳಜಿ ಎಳ್ಳಷ್ಟೂ ಕುಂದಿಲ್ಲ. ತಮ್ಮ ಕರ್ತವ್ಯ ಪ್ರಜ್ಞೆಯನ್ನು ಎಂತಹ ದಾಳಿಯೂ ಕುಗ್ಗಿಸುವುದಿಲ್ಲ ಎಂಬುದನ್ನು ಸೈನಿಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.











Click it and Unblock the Notifications