Ramesh Bidhuri: ನನಗೆ ಅವರು ಮಾತನಾಡಿದ್ದು ಕೇಳಿಸಲೇ ಇಲ್ಲ!
ನವದೆಹಲಿ: ಸಂಸತ್ ಕಲಾಪ ಇಂದು ವಿಚಿತ್ರವಾದ ಘಟನೆಗೆ ಸಾಕ್ಷಿಯಾಗಿತ್ತು. ದಕ್ಷಿಣ ದೆಹಲಿ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ಸಂಸದ ರಮೇಶ್ ಬಿಧುರಿ, ಅಸಂವಿಧಾನಿಕ ಪದ ಬಳಸಿರುವ ಆರೋಪ ಕೇಳಿಬಂದಿತ್ತು. ಆದರೆ ಹೀಗೆ ಸಂಸದ ಬಿಧುರಿ ಲೋಕಸಭೆಯಲ್ಲಿ ಮಾತನಾಡುವಾಗ ಹಿಂದೆ ಕೂತಿದ್ದ ಮತ್ತೊರ್ವ ಬಿಜೆಪಿ ಸಂಸದ ಹರ್ಷವರ್ಧನ್ ಅವರು ನಗುತ್ತಿದ್ರು ಎನ್ನಲಾಗಿತ್ತು. ಈಗ ಆ ಬಗ್ಗೆ ಎಂಪಿ ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ಬಿಜೆಪಿಯ ಸಂಸದ ರಮೇಶ್ ಬಿಧುರಿ ಮಾತನಾಡುವಾಗ ಮತ್ತೊರ್ವ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ನಗುತ್ತಿದ್ದರು ಎಂಬ ಆರೋಪ ಸುದ್ದಿಯಾಗಿತ್ತು. ಅಲ್ಲದೆ ಇದರ ಬಗ್ಗೆ ಸಾಕಷ್ಟು ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈಗ ಆ ಬಗ್ಗೆ ಮಾತನಾಡಿದ ಸಂಸದ ಹರ್ಷವರ್ಧನ್, ಬಿಧುರಿ ಏನು ಹೇಳಿದ್ದಾರೆ ಎಂಬುದೇ ನನಗೆ ಕೇಳಿಸಲಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಅನಾವಶ್ಯಕ ವಿವಾದ ಎಬ್ಬಿಸಬೇಡಿ ಎಂದು ಸಂಸದ ಹರ್ಷವರ್ಧನ್ ತಿಳಿಸಿದ್ದಾರೆ.

ಅಷ್ಟಕ್ಕೂ ಸದನದಲ್ಲಿ ನಡೆದಿದ್ದು ಏನು?
ಲೋಕಸಭೆಯಲ್ಲಿ ಇಂದು ಚಂದ್ರಯಾನ ಯಶಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಮಾತನಾಡುತ್ತಿದ್ದ ರಮೇಶ್ ಬಿಧುರಿ, ಬಹುಜನ ಸಮಾಜ ಪಕ್ಷದ ಡ್ಯಾನಿಶ್ ವಿರುದ್ಧ ಈ ರೀತಿ ನಿಂದನೆಯ ಮಾತು ಆಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೇ ಮತ್ತೊಂದು ಕಡೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಬಿಧುರಿ ಈ ರೀತಿ ವರ್ತನೆಯನ್ನು ಮತ್ತೆ ರಿಪೀಟ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನ್ ಮಾಡಿದ್ದಾರೆ. ಆದರೆ ಈ ವೇಳೆ ಬಿಜೆಪಿ ಸಂಸದ ಹರ್ಷವರ್ಧನ್ ನಗುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇದೀಗ ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.
A BJP MP @rameshbidhuri can be heard calling MP Danish Ali a "Bharwa (pimp), "Katwa" (circumcised), "Mullah" "Atankwadi" (Terrorist) & "Ugrawadi" (militant) ON RECORD in Lok Sabha while RaviShankar Prasad & Harsh Vardhan sitting next to him are laughing.pic.twitter.com/yMfWgtcUhU
— Mohammed Zubair (@zoo_bear) September 22, 2023
ಬೇಸರ ವ್ಯಕ್ತಪಡಿಸಿದ ಸಂಸದ ಹರ್ಷವರ್ಧನ್
ಇನ್ನು ಈ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಹರ್ಷವರ್ಧನ್, ಕೆಲವು ಪಟ್ಟಭದ್ರರ ಆಸಕ್ತಿಯಿಂದ, ನನ್ನ ಘನತೆ ಹಾಳು ಮಾಡುವುದಕ್ಕಾಗಿ ಕೆಟ್ಟ ಮತ್ತು ಕಪೋಲ ಕಲ್ಪಿತ ಕಥೆ ಹೆಣೆಯಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸದನದಲ್ಲಿ ಇಬ್ಬರು ಸಂಸದರು ಅಸಂಸದೀಯ ಭಾಷೆ ಬಳಸಿದ ದುರದೃಷ್ಟಕರ ಘಟನೆಗೆ ಜನ ನನ್ನನ್ನು ಎಳೆದು ತಂದಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನಾನು ನೋಡಿದ್ದೇನೆ ಎಂದು ಹರ್ಷವರ್ಧನ್ ಇದೇ ವೇಳೆ ಬೇಸರ ಹೊರಹಾಕಿದ್ದಾರೆ. ಆದರೆ ಲೋಕಸಭೆಯಲ್ಲಿನ ಗದ್ದಲದ ಹಿನ್ನೆಲೆ ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕೇಳಲಿಲ್ಲ ಎಂದಿದ್ದಾರೆ. ಈ ಮೂಲಕ ವಿವಾದದಲ್ಲಿ ನನ್ನ ಎಳೆದು ತರಬೇಡಿ ಎಂಬ ಸಂದೇಶ ನೀಡಿದ್ದಾರೆ.
ಒಟ್ನಲ್ಲಿ ಲೋಕಸಭೆಯಲ್ಲಿ ಇಂದು ನಡೆದ ಘಟನೆ ಇಡೀ ದೇಶದ ಗಮನ ಸೆಳೆದಿದ್ದು, ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಲೋಕಸಭೆ ಸ್ಪೀಕರ್ ಕೂಡ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆದರೆ ಇದೀಗ ನನ್ನ ಹೆಸರು ಎಳೆದು ತರಬೇಡಿ ಎಂದು ಬಿಜೆಪಿ ಸಂಸದ ಹರ್ಷವರ್ಧನ್ ಸ್ಪಷ್ಟನೆಯನ್ನ ನೀಡಿರುವುದು ಗಮನ ಸೆಳೆದಿದೆ.












Click it and Unblock the Notifications