'ಇಂಡಿಯಾ'ದಲ್ಲಿ ಒಡಕು ಮೂಡಿಸಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ
ಬೆಂಗಳೂರು, ಸೆಪ್ಟೆಂಬರ್ 06: ಸನಾತನ ಧರ್ಮ ನಿರ್ಮೂಲನೆ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯು ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಉದಯನಿಧಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. ಇದೇ ವೇಳೆ, ಉದಯನಿಧಿ ಹೇಳಿಕೆಯು ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿಯೂ ಒಡಕು ಮೂಡಿಸಿದೆ.
ಪ್ರಗತಿಪರ ಚಿಂತಕರ ಸಭೆಯಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಅವರು, 'ಸನಾತನ ಧರ್ಮವು ಕೊರೊನಾ ವೈರಸ್, ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ. ಇದನ್ನು ನಿರ್ಮೂಲನೆ ಮಾಡಬೇಕಿದೆ' ಎಂದು ಹೇಳಿದ್ದಾರೆ.

ಈ ವಿಚಾರವಾಗಿ 'ಇಂಡಿಯಾ' ಮೈತ್ರಿಕೂಟದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಆಮ್ ಆದ್ಮಿ ಪಕ್ಷಗಳು ಅಂತರ ಕಾಯ್ದುಕೊಂಡಿವೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರನ ಹೇಳಿಕೆಯನ್ನು ಟಿಎಂಸಿ ಖಂಡಿಸಿದೆ. ಟಿಎಂಸಿ ಪಕ್ಷವು ಅಂತಹ ಹೇಳಿಕೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದೆ.
'ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ಸೌಹಾರ್ದತೆ ನಮ್ಮ ಸಂಸ್ಕೃತಿ, ನಾವು ಇತರ ಧರ್ಮಗಳನ್ನು ಗೌರವಿಸಬೇಕು. ಅಂತಹ ಹೇಳಿಕೆಗಳೊಂದಿಗೆ ನಮ್ಮ ಪಕ್ಷವು ಯಾವುದೇ ಸಂಬಂಧ ಹೊಂದಿಲ್ಲ. ಯಾರಾದರೂ ಈ ರೀತಿ ಹೇಳಿದರೆ, ಅಂತಹ ಹೇಳಿಕೆಗಳನ್ನು ನಾವು ಖಂಡಿಸಬೇಕಿದೆ' ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹುದನ್ನು ಯಾರೂ ಮಾಡಬಾರದು. ನಾವು ಸನಾತನ ಧರ್ಮವನ್ನು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.
'ತಮಿಳುನಾಡಿನ ಜನರ ಬಗ್ಗೆ ನನಗೆ ಅಪಾರ ಗೌರವವಿದೆ. ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಪ್ರತ್ಯೇಕ ಭಾವನೆಗಳಿವೆ. ಭಾರತ ಜಾತ್ಯತೀತ ದೇಶ. ಇದು ಪ್ರಜಾಪ್ರಭುತ್ವ ರಾಷ್ಟ್ರ. ವಿವಿಧತೆಯಲ್ಲಿ ಏಕತೆ ನಮ್ಮ ಮೂಲವಾಗಿದೆ. ಹಾಗಾಗಿ, ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ನಾವು ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳಿಗೆ ಎಲ್ಲೆಡೆ ಹೋಗುತ್ತೇವೆ. ಯಾವುದೇ ವರ್ಗಕ್ಕೆ ನೋವುಂಟು ಮಾಡುವ ವಿಷಯದಲ್ಲಿ ನಾವು ಭಾಗಿಯಾಗಬಾರದು' ಎಂದು ಬ್ಯಾನರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಅವರು, 'ಡಿಎಂಕೆ ನಾಯಕರ ಹೇಳಿಕೆ ಅತ್ಯಂತ ದುರದೃಷ್ಟಕರ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ' ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, 'ಸರ್ವ ಧರ್ಮ ಸಮಭಾವದಲ್ಲಿ ನಮಗೆ ನಂಬಿಕೆ ಇದೆ. ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸುತ್ತೇವೆ' ಎಂದು ಹೇಳಿದ್ದಾರೆ.
ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ. 'ಸರ್ವ ಧರ್ಮ ಸಮಭಾವ' ಎಂಬುದು ಕಾಂಗ್ರೆಸ್‌ನ ಸಿದ್ಧಾಂತ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ನಾವು ಪ್ರತಿಯೊಬ್ಬರ ನಂಬಿಕೆಗಳನ್ನು ಗೌರವಿಸುತ್ತೇವೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ಧರ್ಮವಲ್ಲ. ಅದು ರೋಗದಷ್ಟೇ ಕೆಟ್ಟದ್ದು ಎಂದು ಹೇಳಿದ್ದಾರೆ.
'ಸಮಾನತೆಯನ್ನು ಉತ್ತೇಜಿಸದ ಯಾವುದೇ ಧರ್ಮ ಧರ್ಮವೇ ಅಲ್ಲ. ಮನುಷ್ಯನ ಘನತೆಯನ್ನು ಎತ್ತಿಹಿಡಿಯದ ಧರ್ಮವು ಧರ್ಮವಲ್ಲ. ಹಾಗಾಗಿ ಅದು ಕಾಯಿಲೆಯಷ್ಟೇ ಕೆಟ್ಟದ್ದು' ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, ಬಿಜೆಪಿ ಸನಾತನ ಧರ್ಮದ ಬಗ್ಗೆ ನಕಲಿ ಕಾಳಜಿಯನ್ನು ಹೊಂದಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಬೂಟಾಟಿಕೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications