ಭಯೋತ್ಪಾದಕರ ವಿರುದ್ಧ ಮುಂದುವರೆದ ಸಮರ; ಮತ್ತೆ ಮೂವರು ಶಂಕಿತ ಉಗ್ರರ ಮನೆ ಧ್ವಂಸ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕರಿಗೆ ಸಹಾಯ ಮಾಡುವವರ ವಿರುದ್ಧ ದಾಳಿಯನ್ನು ಮುಂದುವರೆಸಿದೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಮೂವರು ಸಕ್ರಿಯ ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಏಪ್ರಿಲ್ 22 ರಂದು ಬೈಸರನ್‌ನಲ್ಲಿ ನಡೆದ ದಾಳಿಯ ನಂತರ ಇಲ್ಲಿಯವರೆಗೆ ಶಂಕಿತ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರ ಒಂಬತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ, ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದರು.

ಪಹಲ್ಗಾಮ್ ದುರಂತದ ಬಳಿಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಭದ್ರತಾ ಪಡೆಗಳು ಕೇವಲ ಐದು ದಿನಗಳಲ್ಲಿ ಕಾಶ್ಮೀರದ 500 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿ ನೂರಾರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿವೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಅಮಾಯಕರನ್ನು ಗುರಿಯಾಗಿಸಬಾರದು ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಹಲವು ಉಗ್ರರ ಮನೆ ನೆಲಸಮ
ಶನಿವಾರ ರಾತ್ರಿ ಶೋಪಿಯಾನ್ ಜಿಲ್ಲೆಯ ವಂಡಿನಾದಲ್ಲಿರುವ ಅದ್ನಾನ್ ಶಫಿಯ ಮನೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಅದ್ನಾನ್ ಶಫಿ ಕಳೆದ ವರ್ಷ ಭಯೋತ್ಪಾದಕ ಸಂಘನೆಗೆ ಸೇರಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿ ಮತ್ತೊಬ್ಬ ಶಂಕಿತ ಸಕ್ರಿಯ ಭಯೋತ್ಪಾದಕ ಅಮೀರ್ ನಜೀರ್ ಎನ್ನುವವನ ಮನೆಯನ್ನು ನೆಲಸಮ ಮಾಡಲಾಗಿದೆ.
ಬಂಡಿಪೋರಾ ಜಿಲ್ಲೆಯಲ್ಲಿ, ಶಂಕಿತ ಲಷ್ಕರ್-ಎ-ತೈಬಾ ಭಯೋತ್ಪಾದಕ ಜಮೀಲ್ ಅಹ್ಮದ್ ಶೇರ್ಗೋಜ್ರಿ ಅವರ ಮನೆಯನ್ನು ಧ್ವಂಸ ಮಾಡಲಾಗಿದೆ. ಈತ 2016 ರಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ಶಂಕಿತರ ಬಂಧನ, ವಿಚಾರಣೆ
ಭಯೋತ್ಪಾದನಾ ವಿರೋಧ ಕಾರ್ಯಾಚರಣೆಯ ಭಾಗವಾಗಿ ಈವರೆಗೆ ಸಾವಿರಾರು ಜನರನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಾಮಾನ್ಯ ಕಾಶ್ಮೀರಿ ಜನರ ಮನೆಗಳನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಉಮರ್ ಫಾರೂಕ್ ಆರೋಪಿಸಿದ್ದಾರೆ.
ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಗ್ದ ಜನರಿಗೆ ತೊಂದರೆ ಕೊಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಹೀನ ಕೃತ್ಯವನ್ನು ಕಾಶ್ಮೀರಿಗಳು ಸಾಮೂಹಿಕವಾಗಿ ಖಂಡಿಸುತ್ತಾರೆ ಮತ್ತು ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಬೇಕು ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮನೆಗಳು ಮತ್ತು ನೆರೆಹೊರೆಗಳನ್ನು ಕೆಡವುವ ವಿವೇಚನಾರಹಿತ ಬಂಧನಗಳು ಉತ್ತಮವಲ್ಲ ಎಂದಿದ್ದಾರೆ.












Click it and Unblock the Notifications