ಮದುವೆ ಆ್ಯನಿವರ್ಸರಿ ಗಿಫ್ಟ್ ಮನೆ ತಲುಪುವಷ್ಟರಲ್ಲಿ ಹುತಾತ್ಮನಾಗಿದ್ದ ಆ ಯೋಧ

Posted By:
Subscribe to Oneindia Kannada
ಬಾನಿವಾಡಿ (ಹರ್ಯಾಣ), ಫೆಬ್ರವರಿ 17: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಉಗ್ರರೊಂದಿಗೆ ಹೋರಾಡುವಾಗ ಪ್ರಾಣ ತೆತ್ತ, 31 ವರ್ಷದ ಮೇಜರ್ ಸತೀಶ್ ದಾಹಿಯಾ ಶನಿವಾರ (ಫೆ. 18) ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು.

ಆದರೆ, ಆಗಿದ್ದೇ ಬೇರೆ. ಆ ಯೋಧ ವೀರ ಮರಣವನ್ನಪ್ಪಿದ ಕೆಲ ಗಂಟೆಗಳಲ್ಲಿ ಇತ್ತ ಹಳ್ಳಿಯಲ್ಲಿರುವ ಅವರ ಪತ್ನಿ ಸುಜಾತ ಅವರಿಗೆ ಖುದ್ದು ಅವರೇ ಕಳುಹಿಸಿದ್ದ ವಾರ್ಷಿಕೋತ್ಸವದ ಪ್ರೀತಿಯ ಉಡುಗೊರೆ ಬಂದು ತಲುಪಿದೆ. ಛೇ... ಇದೆಂಥಾ ವಿಪರ್ಯಾಸ ಅಲ್ಲವೇ? ವಿಧಿಯ ಆಣತಿಯ ಮುಂದೆ ಇವರ ವಾರ್ಷಿಕೋತ್ಸವ ಮುಂದೆಂದೂ ಬಾರದಂತೆ ಶೋಕದ ಮಡುವಿನಲ್ಲಿ ಮುಳುಗಿಹೋಗಿದೆ. ಕರಗಿಹೋಗಿದೆ.

Hours After Major Satish Dahiya's Death, Wife Got His Anniversary Gift

ಮಂಗಳವಾರ ರಾತ್ರಿ ನಡೆದ ಉಗ್ರರೊಂದಿಗೆ ಎನ್ ಕೌಂಟರ್ ನಲ್ಲಿ ಅಸುನೀಗಿದ '30 ರಾಷ್ಟ್ರೀಯ ರೈಫಲ್ಸ್' ಪಡೆಯ ನಾಲ್ವರು ಯೋಧರಲ್ಲಿ ಸತೀಶ್ ದಾಹಿಯಾ ಕೂಡಾ ಒಬ್ಬರು. ಅವರೀಗ, ತಮ್ಮ ಪತ್ನಿ ಹಾಗೂ ಎರಡು ವರ್ಷದ ಮಗಳನ್ನು ಅಗಲಿದ್ದಾರೆ.

ಯೋಧರಿಗೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಹಬ್ಬ, ಹರಿದಿನ ಇವೆಲ್ಲವೂ ಸೇವೆ ಸಲ್ಲಿಸುವ ಜಾಗದಲ್ಲೇ ಕಳೆದುಹೋಗಿಬಿಡುತ್ತವೆ. ಅವರಿಗೆ ನಮ್ಮ ನಿಮ್ಮಂತೆ ಆಫೀಸಿಗೆ ರಜೆ ಹಾಕಿ ಹಬ್ಬ, ಹುಟ್ಟುಹಬ್ಬ, ವಾರ್ಷಿಕೋತ್ಸವ ಮಾಡುವ ಅವಕಾಶಗಳೇ ಇರುವುದಿಲ್ಲ. ಅದರಲ್ಲೂ ಇಡೀ ವಿಶ್ವವೇ ಪ್ರೇಮಿಗಳ ದಿನಾಚರಣೆ ಆಚರಿಸುತ್ತಿದ್ದ ಮಂಗಳವಾರವೇ ಇಲ್ಲೊಂದು ಪ್ರೇಮಕತೆ ಸದ್ದಿಲ್ಲದೇ ರಕ್ತದ ತೊಟ್ಟಿನಲ್ಲಿ, ಉಗ್ರವಾದದ ಆರ್ಭಟದಲ್ಲಿ ಅಸ್ತಂಗತವಾಗಿದೆ.

ಹಾಗಾಗಿಯೇ, ಹರ್ಯಾಣದ ಹಳ್ಳಿಯಾದ ಬಾನಿವಾಡಿಯಿಂದ ನೂರಾರು ಮೈಲುಗಳಷ್ಟು ದೂರವಿದ್ದ ಕಾರಣದಿಂದ ವಿವಾಹ ವಾರ್ಷಿಕೋತ್ಸವಕ್ಕೆ ಹಳ್ಳಿಗೆ ಬರುವುದು ಸಾಧ್ಯವಿಲ್ಲ ಎಂದರಿತಿದ್ದ ಯೋಧ ಸತೀಶ್, ವಾರ್ಷಿಕೋತ್ಸವದ ಸವಿನೆನಪಿಗಾಗಿ ಪತ್ನಿ ಸುಜಾತ ಅವರಿಗೆ ಇಷ್ಟವಾದ ಫ್ಲೇವರಿನ ಕೇಕ್, ಮೋಂಬತ್ತಿ ಹಾಗೂ ಚೆಂದವಾದ ಹೂಗುಚ್ಛವೊಂದನ್ನು ಖರೀದಿಸಿ ಅದನ್ನು ನೀಟಾಗಿ ಪ್ಯಾಕ್ ಮಾಡಿ ದೂರದ ಹಳ್ಳಿಯಲ್ಲಿರುವ ತಮ್ಮ ಪತ್ನಿಗೆ ಕಳುಹಿಸಿದ್ದರು. ಆದರೆ, ಗಿಫ್ಟ್ ಬಂದು ಅವರ ಮನೆಯನ್ನು ತಲುಪುವುದಕ್ಕೂ ಮುನ್ನ ಬಂದು ತಲುಪಿದ್ದು ಅವರ ಸಾವಿನ ಸುದ್ದಿ!

ಅದಕ್ಕಿಂತಲೂ ಘೋರ ಎಂದರೆ, ತಮ್ಮ ಪತಿ ಹುತಾತ್ಮರಾದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ ಕೆಲವೇ ಗಂಟೆಗಳಲ್ಲಿ ಬಂದ ಗಿಫ್ಟ್ ಅನ್ನು ತೆಗೆದು ನೋಡಿದರೆ, ಅದರಲ್ಲೊಂದು ಮುದ್ದಾದ ಎರಡೇ ಎರಡು ಸಾಲಿನ ಪ್ರೇಮ ಪತ್ರವಿತ್ತು. ಅದನ್ನು ಒಡೆದು ಓದಿದರೆ "ಐ ಲವ್ ಯೂ ಪೂಚಾ (ಸುಜಾತಾ). ನೀನು ನನ್ನ ಜೀವನದ ಸ್ಫೂರ್ತಿ " ಎಂದು ಬರೆದಿದ್ದರು. ಸುಜಾತ ಅವರ ದುಃಖದ ಕಟ್ಟೆಯೊಡೆಯಲು ಮತ್ತೇನು ಬೇಕು ನೀವೇ ಹೇಳಿ?

ಗುರುವಾರ, ಸತೀಶ್ ದಾಹಿಯಾ ಶವವನ್ನು ಹುಟ್ಟೂರಿಗೆ ತಂದಾಗಲಂತೂ ಇಡೀ ಹಳ್ಳಿಯೇ ಶೋಕ ಸಾಗರದಲ್ಲಿ ಮುಳುಗಿ ಹೋಯಿತು. ಸತೀಶ್ ಅವರ ತಮ್ಮಂದಿರ ಜತೆ ಸತೀಶ್ ಅವರ ಎರಡು ವರ್ಷದ ಮಗಳು ತನ್ನ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For their third wedding anniversary, Major Satish Dahiya had sent his wife Sujata gifts who lives a village of Haryana. A cake and candles, flowers, which reached her after he died fighting terrorists in Handwara, Jammu and Kashmir. ವಿವಾಹ ವಾರ್ಷಿಕೋತ್ಸದ ನೆನಪಿಗಾಗಿ ಯೋಧ ಸತೀಶ್ ಕಳುಹಿಸಿದ್ದ ಉಡುಗೊರೆ ಅವರು ಹುತಾತ್ಮರಾಗಿ ಕೆಲವೇ ಗಂಟೆಗಳಲ್ಲಿ ಮನೆ ತಲುಪಿದೆ.
Please Wait while comments are loading...