ಪ್ರವಾಸಿ ತಾಣಗಳಲ್ಲಿ ಜನವೋ ಜನ; ಗೃಹ ಸಚಿವಾಲಯದ ತುರ್ತು ಸಭೆ
ನವದೆಹಲಿ, ಜುಲೈ 10: ಕೊರೊನಾ ಪ್ರಕರಣಗಳು ಇಳಿಕೆಯಾಗಿ ನಿರ್ಬಂಧಗಳನ್ನು ಸಡಿಲಿಸುತ್ತಿದ್ದಂತೆ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಿದೆ. ಪ್ರವಾಸಿತಾಣಗಳಿಗೆ ಸಾಗರದಂತೆ ಜನರು ಹರಿದುಬರುತ್ತಿದ್ದಾರೆ.
ಅಷ್ಟೇ ಅಲ್ಲ, ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ತುರ್ತು ಸಭೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ, ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಿದ್ದು, ಪ್ರವಾಸಿ ತಾಣಗಳಲ್ಲಿ ಕೊರೊನಾ ಸೋಂಕು ತಡೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.

ಗೋವಾ, ಹಿಮಾಚಲ ಪ್ರದೇಶ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ ಹಾಗೂ ಪಶ್ಚಿಮ ಬಂಗಾಳದ ಕೊರೊನಾ ಪ್ರಕರಣಗಳು ಹಾಗೂ ಈ ರಾಜ್ಯಗಳಲ್ಲಿನ ಲಸಿಕೆ ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಪ್ರವಾಸಿ ತಾಣಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಿದ್ದಾರೆ. "ದೇಶದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ ಕೊನೆಯಾಗಿಲ್ಲ. ಜನರು ಕೊರೊನಾ ನಿಯಮಗಳನ್ನು ಮರೆಯಬೇಡಿ" ಎಂದು ಮನವಿ ಮಾಡಿದ್ದಾರೆ.
ಸಭೆಯಲ್ಲಿ ನೀತಿ ಆಯೋಗ ಸದಸ್ಯ ಡಾ. ವಿ.ಕೆ ಪೌಲ್, ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕ ಹಾಗೂ ಎಂಟು ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ.












Click it and Unblock the Notifications