ರಕ್ತ ಪಡೆದ ಮಕ್ಕಳಲ್ಲಿ ಎಚ್‌ಐವಿ ಸೋಂಕು, ಬಿಜೆಪಿಯ ಅಕ್ಷಮ್ಯ ಅಪರಾಧ: ಮಲ್ಲಿಕಾರ್ಜುನ ಖರ್ಗೆ ಟೀಕೆ
ನವದೆಹಲಿ, ಅಕ್ಟೋಬರ್ 25: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗಿದ್ದ ಮಕ್ಕಳಿಗೆ ಹೆಪಟೈಟಿಸ್ ಬಿ, ಸಿ, ಎಚ್‌ಐವಿ ಸೋಂಕು ತಗುಲಿರುವುದು ದೃಢಪಟ್ಟಿರುವ ಬಗ್ಗೆ ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಕೇಸರಿ ಪಕ್ಷದ ಅಕ್ಷಮ್ಯ ಅಪರಾಧಕ್ಕಾಗಿ ಮಕ್ಕಳು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರವು ನಮ್ಮ ಆರೋಗ್ಯ ವ್ಯವಸ್ಥೆಯನ್ನು ದುಪ್ಪಟ್ಟು ಅನಾರೋಗ್ಯಕ್ಕೆ ಒಳಪಡಿಸಿದೆ. ಯುಪಿಯ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ 14 ಮಕ್ಕಳಿಗೆ ಸೋಂಕಿತ ರಕ್ತವನ್ನು ನೀಡಲಾಗಿದೆ. ಇದರಿಂದಾಗಿ ಈ ಮಕ್ಕಳು ಎಚ್‌ಐವಿ ಏಡ್ಸ್ ಮತ್ತು ಹೆಪಟೈಟಿಸ್ ಬಿ, ಸಿ ಯಂತಹ ಗಂಭೀರ ಕಾಯಿಲೆ ತಗುಲಿದೆ. ಈ ಗಂಭೀರ ನಿರ್ಲಕ್ಷ್ಯವು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖರ್ಗೆ ಎಕ್ಸ್‌ನಲ್ಲಿ ಬರೆದಿದ್ದಾರೆ.

ದಸರಾ ಹಬ್ಬದ ನಡುವೆ 10 ವಾಗ್ದಾನಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ನಿನ್ನೆ ಮೋದಿ ಜೀ 10 ನಿರ್ಣಯಗಳನ್ನು ತೆಗೆದುಕೊಳ್ಳುವ ಬಗ್ಗೆ ನಮಗೆ ದೊಡ್ಡ ವಿಷಯಗಳನ್ನು ಹೇಳುತ್ತಿದ್ದರು. ಆದರೆ, ಅವರು ತಮ್ಮ ಬಿಜೆಪಿ ಸರ್ಕಾರಗಳಿಗೆ ಹೊಣೆಗಾರಿಕೆಯ ಒಂದು ತುಣುಕನ್ನಾದರೂ ನಿಗದಿಪಡಿಸಿದ್ದಾರೆಯೇ?" ಎಂದು ಪ್ರಶ್ನಿಸಿದರು.
ಸೋಮವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗಿದ್ದ 14 ಮಕ್ಕಳಿಗೆ ಹೆಪಟೈಟಿಸ್ ಮತ್ತು ಎಚ್‌ಐವಿ ಪಾಸಿಟಿವ್ ಕಂಡು ಬಂದಿದೆ. ವೈದ್ಯರ ಪ್ರಕಾರ, ಮಕ್ಕಳು ಈಗ ಥಲಸ್ಸೆಮಿಯಾ ಸ್ಥಿತಿಯ ಜೊತೆಗೆ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ಪ್ರಕಾರ, 14 ಮಕ್ಕಳು 6 ರಿಂದ 16 ವರ್ಷದೊಳಗಿನವರು. ಅವರು ಕೇಂದ್ರದಲ್ಲಿ ರಕ್ತ ವರ್ಗಾವಣೆಯನ್ನು ಪಡೆಯುವ 180 ಥಲಸ್ಸೆಮಿಯಾ ರೋಗಿಗಳಲ್ಲಿ ಸೇರಿದ್ದರು. ಈಗ ಸೋಂಕಿತ ಮಕ್ಕಳಲ್ಲಿ ಏಳು ಮಂದಿ ಹೆಪಟೈಟಿಸ್ ಬಿ, ಐದು ಹೆಪಟೈಟಿಸ್ ಸಿ ಮತ್ತು ಇಬ್ಬರಿಗೆ ಎಚ್ಐವಿ ಪಾಸಿಟಿವ್ ಬಂದಿದೆ.
ಮಕ್ಕಳು ರಾಜ್ಯದ ಕಾನ್ಪುರ ನಗರ, ದೇಹತ್, ಫರೂಕಾಬಾದ್, ಔರೈಯಾ, ಇಟಾವಾ ಮತ್ತು ಕನೌಜ್‌ಗೆ ಸೇರಿದವರಾಗಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸೋಂಕಿನ ಮೂಲವನ್ನು ಪತ್ತೆಹಚ್ಚುತ್ತಾರೆ. ತಂಡವು ಹೆಪಟೈಟಿಸ್ ಮತ್ತು ಎಚ್‌ಐವಿ ಸೋಂಕಿನ ಸ್ಥಳವನ್ನು ಹುಡುಕುತ್ತದೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications