HP Election Result 2022 ; ಕಾಂಗ್ರೆಸ್ 'ಕೈ' ಹಿಡಿದ 5 ಪ್ರಮುಖ ಅಂಶಗಳು
ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ 26 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ನವೆಂಬರ್ 12ರಂದು ನಡೆದ ಹಿಮಾಚಲ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಮಧ್ಯಾಹ್ನ 2.31ರ ಮಾಹಿತಿಯಂತೆ ಬಿಜೆಪಿ 20, ಕಾಂಗ್ರೆಸ್ 26 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಸಹಾಯಕವಾದ ಅಂಶಗಳು ಏನು? ಎಂಬುದು ಸದ್ಯದ ಚರ್ಚೆಯಾಗಿದೆ.
ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ. ಭೂಪಿಂದರ್ ಸಿಂಗ್ ಹೂಡಾ, ಭೂಪೇಶ್ ಭಗೇಲ್ ಮತ್ತು ರಾಜೀವ್ ಶುಕ್ಲಾ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನಾಯಕರು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಸಂಜೆಯ ವೇಳೆಗೆ ಯಾವ ಪಕ್ಷಕ್ಕೆ ಎಷ್ಟು ಸೀಟು? ಎಂಬ ಅಂತಿಮ ಲೆಕ್ಕಾಚಾರ ದೊರೆಯುವ ನಿರೀಕ್ಷೆ ಇದೆ.
ಆಪರೇಷನ್ ಕಮಲದ ಭೀತಿಯಿಂದಾಗಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಚಂಡೀಗಢ್‌ಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಗುರುವಾರ ಸಂಜೆ ಈ ಕುರಿತು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಶಾಸಕರ ಸಭೆ ನಡೆಸಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಿದೆ.

ಅಂಶ; 01 - 37 ವರ್ಷಗಳ ಇತಿಹಾಸವಿದೆ
ಹಿಮಾಚಲ ಪ್ರದೇಶದ ಚುನಾವಣಾ ಇತಿಹಾಸದಲ್ಲಿಯೇ ಜನರು ಅಧಿಕಾರದಲ್ಲಿರುವ ಪಕ್ಷವನ್ನು ಮತ್ತೊಮ್ಮೆ ಆಯ್ಕೆ ಮಾಡಿಲ್ಲ. 37 ವರ್ಷಗಳಲ್ಲಿ ಜನರು ಬೇರೆ ಪಕ್ಷಕ್ಕೆ ಮತ ಚಲಾವಣೆ ಮಾಡಿದ್ದಾರೆ. ವೀರಭದ್ರ ಸಿಂಗ್ ಮತ್ತು ಪ್ರೇಮ್ ಕುಮಾರ್ ಧುಮಾಲ್ ನಂತಹ ಜನಪ್ರಿಯ ಮುಖ್ಯಮಂತ್ರಿಗಳು ಇದ್ದರೂ ಸಹ ಈ ಸಂಪ್ರದಾಯವನ್ನು ಮುರಿಯಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ.
ಬಿಜೆಪಿ ಈ ಬಾರಿ ಸಂಪ್ರದಾಯ ಮುರಿಯಬೇಕು ಎಂದು ತಂತ್ರ ರೂಪಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ 'ರಿವಾಜ್' ಮುರಿಯಿರಿ ಎಂದು ಕರೆ ನೀಡಿದ್ದರು. ಆದರೆ ಯಾವುದೇ ಮ್ಯಾಜಿಕ್ ನಡೆದಿಲ್ಲ.

ಅಂಶ: 02 - ಸರ್ಕಾರಿ ನೌಕರರ ಬೆಂಬಲ
ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರು ದೊಡ್ಡ ವೋಟ್ ಬ್ಯಾಂಕ್. ಈ ಬಾರಿ ಅವರು ಕಾಂಗ್ರೆಸ್ ಜೊತೆಗೆ ನಿಂತರು. ಹಳೆಯ ಪಿಂಚಣಿ ನೀತಿಯನ್ನು ಮರು ಜಾರಿಗೊಳಿಸಬೇಕು ಎಂಬ ಬೇಡಿಕೆ ಇತ್ತು. ಕಾಂಗ್ರೆಸ್ ಮತ್ತು ಎಎಪಿ ಈ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದವು. ಇದರಿಂದಾಗಿ ಸರ್ಕಾರಿ ನೌಕರರು ಪಕ್ಷವನ್ನು ಬೆಂಬಲಿಸಿದರು. ಬಿಜೆಪಿ ಈ ಬೇಡಿಕೆಗೆ ಅಷ್ಟಾಗಿ ಪ್ರತಿಸ್ಪಂದಿಸಲಿಲ್ಲ. ಪರಿಣಾಮಗಾಗಿ ಅಧಿಕಾರದಲ್ಲಿದ್ದರೂ ಚುನಾವಣೆ ಗೆಲ್ಲಲಿಲ್ಲ.

ಅಂಶ 03; ಆಡಳಿತದ ಬಗ್ಗೆ ಜನರ ಅಸಹನೆ
ಬಿಜೆಪಿಯ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಉತ್ತಮರು. ಆದರೆ ಅವರ ಆಡಳಿತ ವೈಖರಿ ಜನರಿಗೆ ಇಷ್ಟವಾಗಲಿಲ್ಲ. 5 ವರ್ಷಗಳಲ್ಲಿ 7 ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬದಲಾವಣೆ, ಪೊಲೀಸ್ ನೇಮಕಾತಿ ಹಗರಣ, ಶಿಮ್ಲಾ ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ವಿಚಾರಗಳು ಬಿಜೆಪಿ ಬಗ್ಗೆ ಜನರಿಗೆ ಅಸಹನೆ ಮೂಡಿಸಿದ್ದವು.
ಬಿಜೆಪಿ 11 ಶಾಸಕರಿಗೆ ಟಿಕೆಟ್ ನಿರಾಕರಣ ಮಾಡಿದ್ದು, ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ಟಿಕೆಟ್ ಸಿಗದವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪಕ್ಷಕ್ಕೆ ಚುನಾವಣೆಯಲ್ಲಿ ದೊಡ್ಡ ಹೊಡೆತ ನೀಡಿದೆ.

ಅಂಶ 04; ಸೇಬು ಹಣ್ಣಿನ ಲಾಬಿ
ಹಿಮಾಚಲ ಪ್ರದೇಶದ ಪ್ರಮುಖವಾದ ಬೆಳೆ ಸೇಬು ಹಣ್ಣಿನ ಲಾಬಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ. ಅದಾನಿ ಗ್ರೂಪ್ ಕಡೆಯಿಂದ ಕಡಿಮೆ ಬೆಲೆಗೆ ಹಣ್ಣು ಖರೀದಿ ಮಾಡಿದ್ದು, ಜಿಎಸ್‌ಟಿ ಏರಿಕೆ ತೋಟಗಾರಿಕಾ ಇಲಾಖೆಯನ್ನು ಕಾರ್ಪೊರೇಟ್ ಮಾಡಲು ಹೊರಟಿದ್ದು, ಸಹ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ಹಿಂದಿನಿಂದ ನಡೆದುಕೊಂಡು ಬಂದ ಲಾಬಿ ಈ ಬಾರಿ ಬಿಜೆಪಿಗೆ ಸಹಾಯಕವಾಗಿಲ್ಲ.

ಅಂಶ 05; ಬೆಲೆ ಏರಿಕೆ, ನಿರುದ್ಯೋಗ
ಹಿಮಾಚಲ ಪ್ರದೇಶದ ನೂರಾರು ಯುವಕರು ಪ್ರತಿವರ್ಷ ಭಾರತೀಯ ಸೇನೆ ಸೇರುತ್ತಾರೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಅಗ್ನಿವೀರ ಯೋಜನೆ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ.
ನಿರುದ್ಯೋಗ, ಬೆಲೆ ಏರಿಕೆ ಮುಂತಾದ ಅಂಶಗಳು ಸಹ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು, ಬಿಜೆಪಿ ಚುನಾವಣೆಯಲ್ಲಿ ಸೋಲು ಕಂಡಿದೆ.












Click it and Unblock the Notifications