ಮುಸ್ಲಿಂ ಪರ ಅರ್ಜಿ ವಜಾಗೊಳಿಸಿದ ಹೈಕೋರ್ಟ್: ಜ್ಞಾನವಾಪಿ ಮಸೀದಿ ಸಮೀಕ್ಷೆ ಆರಂಭಕ್ಕೆ ಅಸ್ತು!
ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಜೊತೆಗೆ ಹೈಕೋರ್ಟ್ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸಿದ್ದು, ಸಮೀಕ್ಷೆಯನ್ನು ತಕ್ಷಣವೇ ಪುನರಾರಂಭಿಸಬಹುದು ಎಂದು ಹೇಳಿದೆ.
ನ್ಯಾಯದ ಹಿತದೃಷ್ಟಿಯಿಂದ ಎಎಸ್‌ಐ ಸಮೀಕ್ಷೆ ಅಗತ್ಯವಾಗಿದೆ ಮತ್ತು ಕೆಲವು ಷರತ್ತುಗಳ ಅಡಿಯಲ್ಲಿ ಅದನ್ನು ನಡೆಸಬೇಕಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಜುಲೈ 27 ರಂದು ಎಎಸ್‌ಐ ಸಮೀಕ್ಷೆ ವಿರುದ್ಧದ ಅರ್ಜಿಯ ತೀರ್ಪನ್ನು ಆಗಸ್ಟ್ 3 ಕ್ಕೆ ನ್ಯಾಯಾಲಯ ಕಾಯ್ದಿರಿಸಿತ್ತು. ಅಗತ್ಯವಿರುವಲ್ಲೆಲ್ಲಾ ಉತ್ಖನನ ಸೇರಿದಂತೆ ಸಮೀಕ್ಷೆಯನ್ನು ನಡೆಸುವಂತೆ, ಮೊದಲು ದೇವಾಲಯವಿದ್ದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಜುಲೈ 21 ರಂದು ವಾರಣಾಸಿ ನ್ಯಾಯಾಲಯವು ಎಎಸ್‌ಐಗೆ ನಿರ್ದೇಶನ ನೀಡಿತು.
ಎಎಸ್‌ಐ ಜುಲೈ 24 ರಂದು ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಆದರೆ ಮಸೀದಿ ಸಮಿತಿಯು ಅದನ್ನು ಸಂಪರ್ಕಿಸಿದ ನಂತರ ಸುಪ್ರೀಂ ಕೋರ್ಟ್ ಕೆಲವೇ ಗಂಟೆಗಳಲ್ಲಿ ತಡೆ ನೀಡಿತು. ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿಗೆ ಸಮಯಾವಕಾಶ ನೀಡಿತು.
ಸರ್ವೆ ಮತ್ತು ಉತ್ಖನನದಿಂದ ಕಟ್ಟಡಕ್ಕೆ ಹಾನಿಯಾಗುತ್ತದೆ ಎಂದು ಮಸೀದಿ ಸಮಿತಿ ಪರ ವಕೀಲರು ಆತಂಕ ವ್ಯಕ್ತಪಡಿಸಿದ್ದರು. ಸಮೀಕ್ಷೆಯು ರಚನೆಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ "ಹಿಂದೂ ಚಿಹ್ನೆಗಳ" ರಕ್ಷಣೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಜ್ಞಾನವಾಪಿ-ಶೃಂಗಾರ್ ಗೌರಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ರಾಖಿ ಸಿಂಗ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಪಿಐಎಲ್ ಪ್ರಕಾರ, ಶೃಂಗಾರ್ ಗೌರಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯದ ತೀರ್ಪು ಬರುವವರೆಗೆ ಹಿಂದೂಯೇತರರು ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕು ಮತ್ತು ಜ್ಞಾನವಾಪಿ ಆವರಣದಲ್ಲಿ ಕಂಡುಬರುವ ಹಿಂದೂ ಚಿಹ್ನೆಗಳನ್ನು ರಕ್ಷಿಸಲು ಆದೇಶ ನೀಡಬೇಕು ಎಂದು ತಿಳಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 7 ರಂದು ನಿಗದಿಪಡಿಸಲಾಗಿದೆ.
ಜ್ಞಾನವಾಪಿ ಮಸೀದಿ ವಿವಾದ
ಈ ಹಿಂದೆ ದೇವಾಲಯವೊಂದು ಅಸ್ತಿತ್ವದಲ್ಲಿತ್ತು ಎಂದು ಹೇಳಿಕೊಂಡು ಎಲ್ಲಾ ದಿನಗಳಲ್ಲಿ ಮಸೀದಿಯ ಸಂಕೀರ್ಣದಲ್ಲಿರುವ ಹಿಂದೂ ದೇವತೆಯ ಪೂಜೆಗಾಗಿ ಮಹಿಳೆಯರ ಗುಂಪು ವಾರಣಾಸಿಯ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತು. ನಂತರ ಜ್ಞಾನವಾಪಿ ಮಸೀದಿ ವಿವಾದ ಮುನ್ನೆಲೆಗೆ ಬಂದಿದೆ.
ನ್ಯಾಯಾಲಯ 2022ರಲ್ಲಿ ಈ ಅರ್ಜಿಯ ಆಧಾರದ ಮೇಲೆ ಸಂಕೀರ್ಣದ ವೀಡಿಯೊ ಸಮೀಕ್ಷೆಗೆ ಆದೇಶಿಸಿತು. ಸಮೀಕ್ಷೆಯ ಸಮಯದಲ್ಲಿ ಅರ್ಜಿದಾರರು 'ಶಿವಲಿಂಗ' ಎಂದು ಹೇಳಿಕೊಳ್ಳುವ ರಚನೆಯನ್ನು ಕಂಡುಹಿಡಿಯಲಾಯಿತು.












Click it and Unblock the Notifications