ಅತ್ಯಾಚಾರ ಆರೋಪಿ ಎಸ್ ಪಿ ಶಾಸಕ ಪ್ರಜಾಪತಿ ಬಂಧನಕ್ಕೆ ವ್ಯಾಪಕ ಜಾಲ
2014ರಲ್ಲಿ ನಡೆದಿದೆಯೆನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಂಧನ ಭೀತಿಯಿಂದಾಗಿ ಪ್ರಜಾಪತಿ ದೇಶ ತೊರೆಯುವ ಪ್ರಯತ್ನದಲ್ಲಿರುವ ವದಂತಿಗಳು ಹರಡಿವೆ.
ಲಖನೌ, ಮಾರ್ಚ್ 3: ಅತ್ಯಾಚಾರ ಆರೋಪ ಹೊತ್ತಿರುವ ಉತ್ತರ ಪ್ರದೇಶ ಸರ್ಕಾರದ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಯನ್ನು ಬಂಧಿಸಲು ಅಲ್ಲಿನ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ತಮ್ಮ ಬಂಧನ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಅವರು, ದೇಶ ಬಿಟ್ಟು ಪರಾರಿಯಾಗಲಿದ್ದಾರೆಂಬ ವದಂತಿಗಳು ಹಬ್ಬಿರುವುದರಿಂದ ಅವರ ಬಂಧನಕ್ಕೆ ಜಾಲ ಬೀಸಿರುವ ಪೊಲೀಸರು ಅವರ ಕ್ಷೇತ್ರವಾದ ಅಮೇಥಿಯಿಂದ ಹೊರ ಸಾಗುವ ಎಲ್ಲ ಮಾರ್ಗಗಳಲ್ಲೂ ಹದ್ದಿನ ಕಣ್ಗಾವಲು ಏರ್ಪಡಿಸಿದ್ದಾರೆ.

ಇದಲ್ಲದೆ, ಲಖನೌದಿಂದಲೂ ಹೊರಹೋಗುವ ಎಲ್ಲಾ ಮಾರ್ಗಗಳಲ್ಲೂ ತಪಾಸಣೆಯನ್ನು ಅಧಿಕಗೊಳಿಸಲಾಗಿದೆ. ವಲಸೆ ಇಲಾಖೆಗೂ ಈ ಬಗ್ಗೆ ಸುದ್ದಿಯನ್ನು ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಪ್ರಜಾಪತಿ ದೇಶಬಿಟ್ಟು ಹೋಗಲು ಅವಕಾಶ ನೀಡಕೂಡದೆಂದು ಉತ್ತರ ಪ್ರದೇಶ ಪೊಲೀಸರು ತಾಕೀತು ಮಾಡಿದ್ದಾರೆ.
2014ರಲ್ಲಿ ಲಖನೌದಲ್ಲಿರುವ ತಮ್ಮ ನಿವಾಸಕ್ಕೆ ಮಹಿಳೆಯೊಬ್ಬರನ್ನು ಕರೆಸಿಕೊಂಡಿದ್ದ ಪ್ರಜಾಪತಿ, ತಮ್ಮ ಚೇಲಾಗಳೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರೆಂದು ಸಂತ್ರಸ್ಥ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಆಗಿನಿಂದ ಈ ಪ್ರಕರಣದ ವಿಚಾರಣೆ ಹಂತದಲ್ಲಿತ್ತು.
ಶುಕ್ರವಾರ ಬೆಳಗ್ಗೆ,ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪ್ರಜಾಪತಿ ವಿಚಾರದಲ್ಲಿ ತಮ್ಮನ್ನು ಟೀಕಿಸುವವರ ವಿರುದ್ಧ ಹರಿಹಾಯ್ದಿದ್ದರು. ಪ್ರಜಾಪತಿಯವರಿಗೆ ತಮ್ಮ ಮನೆಯಲ್ಲೇ ಅಖಿಲೇಶ್ ಆಶ್ರಯ ನೀಡಿದ್ದಾರೆಂದು ಆರೋಪಿಸಿದ್ದ ಕೆಲ ವಿರೋಧಿಗಳಿಗೆ ಉತ್ತರ ಕೊಟ್ಟಿದ್ದ ಅಖಿಲೇಶ್ ಯಾದವ್, ಅನುಮಾನವಿದ್ದವರು ಕ್ಯಾಮೆರಾಗಳನ್ನು ತೆಗೆದುಕೊಂಡು ನನ್ನ ಮನೆಗೆ ಬಂದು ಹುಡುಕಾಡಲಿ ಎಂದು ಸವಾಲು ಹಾಕಿದ್ದರು.












Click it and Unblock the Notifications