ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಭಾರೀ ಮಳೆ : ಮುನ್ಸೂಚನೆ
Recommended Video

ಬೆಂಗಳೂರು, ಆಗಸ್ಟ್ 30 : ಭೀಕರ ಮಳೆಯ ಹೊಡೆತದಿಂದ ತತ್ತರಿಸಿರುವ ಮುಂಬೈ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಆಘಾತಕ್ಕೆ ಸಿದ್ಧವಾಗಬೇಕಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಈಗಾಗಲೆ ಆಸ್ಸಾಂ, ಬಿಹಾರ ರಾಜ್ಯಗಳು ಪ್ರವಾಹಕ್ಕೀಡಾಗಿವೆ. ಮಂಗಳವಾರದ ಮಳೆಗೆ ಮಹಾರಾಷ್ಟ್ರವೂ ತೇಲಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಹನ್ನೆಡರು ರಾಜ್ಯಗಳಲ್ಲಿ ಮುಂದಿನ ಮೂರು ರಾಜ್ಯಗಳಲ್ಲಿ ವಿಪರೀತ ಮಳೆಯಾಗಲಿದ್ದು, 14 ನದಿಗಳು ಮತ್ತು ಇತರ ಉಪನದಿಗಳು ಉಕ್ಕಿ ಹರಿಯುವ ಸಾಧ್ಯತೆಯು ದಿಟ್ಟವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಎಚ್ಚರಿಕೆಯ ಮಾತನ್ನಾಡಿದ್ದಾರೆ.

ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ರಾಜಸ್ತಾನ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಆ ರಾಜ್ಯಗಳಲ್ಲಿರುವ ಮಾಹಿ, ಬನಸ್, ಸಾಬರಮತಿ ಮುಂತಾದ ನದಿಗಳು ಉಕ್ಕಿ ಹರಿಯುತ್ತಿದ್ದು, ಅವುಗಳಿಗೆ ಕಟ್ಟಲಾಗಿರುವ ಅಣೆಕಟ್ಟುಗಳು ಶೇ.95ರಷ್ಟು ಈಗಾಗಲೆ ಭರ್ತಿಯಾಗಿವೆ. ಇನ್ನೂ ಹೆಚ್ಚಿನ ಮಳೆಯಾದರೆ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡದೆ ಉಪಾಯವಿಲ್ಲ.
ಈ ರಾಜ್ಯಗಳಲ್ಲದೆ ಗೋವಾ, ಉತ್ತರಪ್ರದೇಶ, ಛತ್ತಿಸಗಢ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ದಮನ್ ಮತ್ತು ದೀವ್ ನಲ್ಲಿ ಕೂಡ ಮುಂದಿನ ಮೂರು ದಿನಗಳಲ್ಲಿ ಭಾರೀ ವರ್ಷಧಾರೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಲವು ರಾಜ್ಯಗಳಲ್ಲಿ ಮಳೆ ಹಚ್ಚಿ ಹೊಡೆಯುತ್ತಿದ್ದು, ಜನ ಜಾನುವಾರುಗಳು ಸಾವಿಗೀಡಾಗಿವೆ, ಆಸ್ತಿಪಾಸ್ತಿಗೂ ಅಪಾರ ನಷ್ಟವಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ದಕ್ಷಿಣದ ಜಿಲ್ಲೆಗಳಲ್ಲಿ, ರಾಜಸ್ತಾನ, ಗುಜರಾತ್, ಗೋವಾ, ಮಹಾರಾಷ್ಟ್ರ ಕರಾವಳಿ ಪ್ರದೇಶದಲ್ಲಿ ಮತ್ತು ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಂಭವನೀಯತೆಯಿದೆ. ದಕ್ಷಿಣದಲ್ಲಿ ಕಾವೇರಿ ನದಿಗೆ ಈಗಾಗಲೆ ಸಾಕಷ್ಟು ನೀರು ಹರಿದುಬಂದಿದೆ, ಮಧ್ಯ ಕರ್ನಾಟಕದಲ್ಲಿ ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ ಮತ್ತು ಉತ್ತರದಲ್ಲಿ ಕೃಷ್ಣೆಯೂ ತುಂಬಿ ಹರಿಯುತ್ತಿದ್ದಾಳೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿ ಅಣೆಕಟ್ಟೆಯಿಂದ ನೀರು ಬಿಟ್ಟರೆ ಉತ್ತರ ಕರ್ನಾಟಕಕ್ಕೆ ತೊಂದರೆ ತಪ್ಪಿದ್ದಲ್ಲ.












Click it and Unblock the Notifications