Mumbai Rain: ಭಾರಿ ಮಳೆಗೆ ತತ್ತರಿಸಿದ ಮುಂಬೈ; ಮಾರ್ಗ ಬದಲಿಸಿದ ವಿಮಾನಗಳು, ನಾಳೆ ಶಾಲಾ-ಕಾಲೇಜಿಗೆ ರಜೆ
ಬುಧವಾರ ಸಂಜೆ ಮುಂಬೈ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ನಗರದ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಟ್ರಾಫಿಕ್ ಜಾಮ್ ಉಂಟಾಗಿತ್ತು, ಇನ್ನು ಹಲವು ಕಡೆ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಮುಂಬೈಗೆ ಬರಬೇಕಿದ್ದ ಹಲವು ವಿಮಾನಗಳ ಮಾರ್ಗ ಬದಲಾವಣೆ ಕೂಡ ಮಾಡಲಾಗಿದೆ. ಮುಂಬೈ ಮುನ್ಸಿಪಲ್ ಏಜೆನ್ಸಿ ನಾಳೆ (ಗುರುವಾರ) ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದೆ.
ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್‌ಜೆಟ್, ಇಂಡಿಗೋ ಮತ್ತು ವಿಸ್ತಾರ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಿರುವ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿವೆ. ಹವಾಮಾನ ವೈಪರೀತ್ಯದಿಂದ ಹೈದರಾಬಾದ್‌ನಿಂದ ಮುಂಬೈಗೆ ಬರಬೇಕಿದ್ದ ವಿಮಾನ ಸಂಖ್ಯೆ ಯುಕೆ 534 ಹೈದರಾಬಾದ್‌ಗೆ ವಾಪಸ್ ಕಳಿಸಲಾಗಿದೆ ಎಂದು ವಿಸ್ತಾರ ಸಂಸ್ಥೆ ತಿಳಿಸಿದೆ. ದೆಹಲಿಯಿಂದ ಮುಂಬೈಗೆ ಹೊರಟಿದ್ದ ವಿಮಾನವನ್ನು ಕುಡ ಹೈದರಾಬಾದ್ ಕಡೆಗೆ ತಿರುಗಿಸಲಾಗಿದೆ.

ಭಾರಿ ಮಳೆ ಎಚ್ಚರಿಕೆ
ಹವಾಮಾನ ಇಲಾಖೆಯು ಮುಂಬೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಗುರುವಾರ ಬೆಳಗಿನವರೆಗೂ ಭಾರಿ ಮಳೆಯಾಗಲಿದೆ ಎಂದು ಹೇಳಿದೆ. ಮುಂಬೈನ ಹಲವು ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದಿಂದಲೇ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಸಂಜೆ 5.30 ರ ವೇಳೆಗೆ ಮುಂಬೈ, ಥಾಣೆ, ರಾಯಗಡ್ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಇಡಿ ರಾತ್ರಿ ಮಳೆ ಸುರಿಯುವ ಮುನ್ಸೂಚನೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಹಾರಾ ಸ್ಟಾರ್ ನಾರ್ತ್‌ಬೌಂಡ್‌ನಲ್ಲಿ ಮಳೆ ನಡುವೆ ಬಸ್ ಅಪಘಾತಕ್ಕೀಡಾದ ಕಾರಣ, ಟ್ರಾಫಿಕ್ ಸಮಸ್ಯೆ ಬಿಗಡಾಯಿಸಿತ್ತು. ಅಂಧೇರಿ ಸುರಂಗಮಾರ್ಗದಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು, ಗೋಖಲೆ ಸೇತುವೆ ಮೂಲಕ ಸವಾರರು ತೆರಳುವಂತೆ ಸೂಚನೆ ನೀಡಲಾಗಿದೆ. ಮಲಾಡ್ ಸುರಂಗ ಮಾರ್ಗದಲ್ಲಿ ಕೂಡ ನೀರು ತುಂಬಿಕೊಂಡ ಪರಿಣಾಮ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ಗುರುವಾರ ಬೆಳಗ್ಗೆಯವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ ಕೊಟ್ಟಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಬಿಎಂಸಿ ಸಹಾಯವಾಣಿ 1916 ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.












Click it and Unblock the Notifications