Rain Alert: ಚಂಡಮಾರುತ ತೀವ್ರ: ಈ ಭಾಗಗಳಿಗೆ ಗುಡುಗು ಸಹಿತ ಭಾರೀ ಮಳೆ ಎಚ್ಚರಿಕೆ
IMD Weather Prediction: ದೇಶದಲ್ಲಿ ಫೆಬ್ರವರಿಯಿಂದಲೂ ಏರುಗತಿಯ ಬಿಸಿಲಿನ ಶಾಖ ದಾಖಲಾಗುತ್ತಲೇ ಇದೆ. ಏಪ್ರಿಲ್ ಆರಂಭದಲ್ಲೂ ಉಷ್ಣ ಅಲೆ ಮುಂದುವರಿದಿದ್ದು, ಭಾರತದ ಉತ್ತರ ಭಾಗದ ರಾಜ್ಯಗಳು ಉರಿಬಿಸಿಲಿನ ಬೇಗೆಗೆ ಬೇಯುತ್ತಿವೆ. ಇದಕ್ಕೆ ವಿರುದ್ಧ ಎಂಬಂತೆ ದಕ್ಷಿಣದ ಕೆಲವು ರಾಜ್ಯಗಳಲ್ಲಿ ಬಿಸಿಲಿನ ತಾಪವನ್ನು ಪೂರ್ವ ಮುಂಗಾರು ಮಳೆ ಅಬ್ಬರ ತಣ್ಣಗಾಗಿಸಿದೆ. ಈ ಭಾಗದಲ್ಲಿ ಒಣಹವೆ ಪ್ರಮಾಣ ಇಳಿಕೆ ಕಂಡಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೇಶದ 17 ರಾಜ್ಯಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
ದೇಶಾದ್ಯಂತ ರಾಜ್ಯಗಳು ಉಷ್ಣ ಅಲೆ ಎದುರಿಸುತ್ತಿರುವ ಹೊತ್ತಿನಲ್ಲೇ ದಕ್ಷಿಣದಲ್ಲಿ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದೆ. ಪರಿಣಾಮ ಕೆಲವು ರಾಜ್ಯಗಳಲ್ಲಿ ಭಾರೀಯಿಂದ ಅತ್ಯಧಿಕ ಭಾರೀ ಮಳೆ ಆಗುತ್ತಿದೆ. ಹೀಗಾಗಿ ಹಳದಿ ಮತ್ತು ರೆಡ್ ಅಲರ್ಟ್ ನೀಡಲಾಗಿದೆ. ದೆಹಲಿ, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ, ಛತ್ತಿಸ್‌ಗಢ್, ಅಸ್ಸಾಂ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೀವ್ರ ಬಿಸಿಲಿನ ಶಾಖ ಮುಂದುವರಿದಿದೆ. ಇದು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ..

17 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ಭಾರೀ ಮಳೆಯು ದಕ್ಷಿಣ ರಾಜ್ಯಗಳಲ್ಲಿ ತಾಪ ಕಡಿಮೆ ಮಾಡಿದೆ. ಇಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಚಂಡಮಾರುತ ಪರಿಚಲನೆ, ಅಲ್ಲಿಂದ ಗಾಳಿಯು ಕರ್ನಾಟಕ, ತಮಿಳುನಾಡು, ತೆಲಂಗಾಣದತ್ತ ಬೀಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಮಹಾಮಳೆಯು ದೇಶದ ಇತರ ಭಾಗಗಳಲ್ಲಿ ವಿಸ್ತರಣೆ ಆಗಲಿದೆ. ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ, ದೆಹಲಿ ಸೇರಿದಂತೆ 17 ರಾಜ್ಯಗಳಿಗೆ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಹವಾಮಾನ ಇಲಾಖೆ ಹೇಳಿರುವ ಪ್ರಕಾರ, ಈ ಏಪ್ರಿಲ್ ಅಂತ್ಯದ ಹೊತ್ತಿಗೆ ದೇಶದ ಅನೇಕ ರಾಜ್ಯಗಳು ಭಾರೀ ಮಳೆ ಕಾಣಲಿವೆ. ಬಿಹಾರ ಮತ್ತು ಛತ್ತೀಸ್‌ಗಢದಲ್ಲಿ ಹೈ ಅಲರ್ಟ್ ಇದೆ. ಜಾರ್ಖಂಡ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಆಗಲಿದೆ. ಇದೇ ವೇಳೆ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಹ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ತಿಳಿಸಲಾಗಿದೆ.

ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ತಾಪಮಾನವು 7.5 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುತ್ತಿದೆ. ತೆಲಂಗಾಣದಲ್ಲಿ, ಯಾದದ್ರಿ-ಭುವನಗಿರಿ ಜಿಲ್ಲೆಯಲ್ಲಿ 97.8 ಮಿ.ಮೀ.ವರೆಗೆ ಮಳೆ ನಿರೀಕ್ಷೆ ಇದೆ.
ದೆಹಲಿಯಲ್ಲಿ ತಾಪಮಾನ ಏರಿಕೆ
ರಾಷ್ಟ್ರ ರಾಜಧಾನಿ ದೆಹಲಿಯ ಎನ್‌ಸಿಆರ್‌ನಲ್ಲಿ ಒಣಹವೆ ಹೆಚ್ಚಾಗಿದೆ. ಶಾಖದ ಅಲೆ, ಬಿಸಿ ಗಾಳಿ ಮುನ್ಸೂಚನೆ ಇದೆ. ಸದ್ಯಕ್ಕೆ ತಾಪಮಾನ ಇಳಿಕೆ ಅನುಮಾನ ಎನ್ನಲಾಗುತ್ತಿದೆ. ಈ ತಿಂಗಳಾಂತ್ಯದವರೆಗೂ ಗರಿಷ್ಠ ತಾಪಮಾನ ಮುಂದುವರಿಯಲಿದೆ. ಒಂದು ವೇಳೆ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯ ಉಂಟಾದಲ್ಲಿ ಅದರ ಕಾರಣದಿಂದ ಕೊಂಚ ತಾಪಮಾನ ಇಳಿಕೆ, ಇಲ್ಲವೇ ಮಳೆ ಆಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಇದೇ ತಿಂಗಳಲ್ಲಿ, ತಾಪಮಾನ ಮತ್ತಷ್ಟು ಏರುವ ಸಂಭವವಿದೆ. ಸುಮಾರು 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ವಿವಿಧಡೆ ಏಪ್ರಿಲ್ 7ರವರೆಗೆ ಶುಷ್ಕ ಹವಾಮಾನ ಮುಂದುವರಿಯಲಿದೆ ಎಂದು ಶುಕ್ರವಾರದ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ..












Click it and Unblock the Notifications